ಗುರುವಾರ , ಮೇ 26, 2022
31 °C
ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಮದ್ ನಗರ

ಕೊಪ್ಪಳ ಜಿಲ್ಲೆಯಲ್ಲಿ ಶಿಲಾ ವಿಗ್ರಹ, ವೀರಗಲ್ಲುಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಮದ್ ನಗರದ ಸೀಮೆಯಲ್ಲಿ ವಿಜಯನಗರ ಕಾಲದ ಅವಧಿಯಲ್ಲಿದ್ದವು ಎನ್ನಲಾದ ಶಿಲಾ ವಿಗ್ರಹಗಳು ಮತ್ತು ವೀರಗಲ್ಲುಗಳು ಪತ್ತೆಯಾಗಿವೆ.

ತುಂಗಭದ್ರಾ ನದಿ ಗಡ್ಡೆಯಲ್ಲಿ ರಾಮದೇವರು, ಶಕ್ತಿ ದೇವತೆಯ ಮಂದಿರಗಳನ್ನು ನಿರ್ಮಾಣ ಮಾಡಲಾಗಿದ್ದು, ಕಾಲಗರ್ಭದಲ್ಲಿ ಸಿಲುಕಿ ಇದೀಗ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿವೆ. ಕೋಟೆ ಕೊತ್ತಗಳು, ಹುಡೇವುಗಳಿದ್ದು ಅವುಗಳು ಸಹ ಜೀರ್ಣಾವಸ್ಥೆಗೆ ತಲುಪಿವೆ.

ಯುದ್ಧಕ್ಕೆ ತೆರಳುವ ಸೈನಿಕರ ಚಿತ್ರಗಳುಳ್ಳ ಶಿಲ್ಪಗಳು, ಆಂಜನೇಯನ ವಿಗ್ರಹ, ಕತ್ತಿ ಗುರಾಣಿ ಹಿಡಿದ ಸೈನಿಕರ ಚಿತ್ರವುಳ್ಳ ವೀರಗಲ್ಲುಗಳ ವಿಗ್ರಹಗಳು ಪತ್ತೆಯಾಗಿವೆ. ಈ ನದಿಗಡ್ಡೆಯಲ್ಲಿ ಇಂತಹ ಅಪರೂಪದ ಇನ್ನೂ ಅನೇಕ ವಿಗ್ರಹಗಳು ನೆಲದಲ್ಲಿ ಹುದುಗಿವೆ.

ಈ ಸ್ಥಳದಲ್ಲಿ ಉತ್ಖನನ ನಡೆಸಿದರೆ ಇಲ್ಲಿ ಇನ್ನಷ್ಟು ಅನೇಕ ವಿಗ್ರಹಗಳು ಲಭ್ಯವಾಗುವ ಸಂಭವವಿದೆ. ಪುರಾತನ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು, ಇತಿಹಾಸ ಸಂಶೋಧಕರು ಇನ್ನಷ್ಟು ಸಂಶೋಧನೆ ನಡೆಸಿದಲ್ಲಿ ಈ ವಿಗ್ರಹಗಳ ನಿಖರ ಕಾಲಮಾನ ತಿಳಿಯಲು ಸಾಧ್ಯವಾಗುತ್ತದೆ ಎಂದು ಸಮಾಜ ಸೇವಕರಾದ ಫಕ್ಕಿರಪ್ಪ ಲಾಚನಕೇರಿ ಮತ್ತು ವೀರಣ್ಣ ಕೋಮಲಾಪುರ ಹೇಳಿದ್ದಾರೆ.

ನದಿ ಗಡ್ಡೆಯ ಸುತ್ತಮುತ್ತಲು ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು ಅಳಿದುಳಿದ ವಿಗ್ರಹಗಳನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿದ್ದಾರೆ. ಈಗ ದೊರೆತಿರುವ ವಿಗ್ರಹಗಳು ಹನುಮಂತ ದೇವರು ಮತ್ತು ರಾಮ ದೇವರ ವಿಗ್ರಹಗಳೆಂದು ಹೇಳಲಾಗುತ್ತಿದ್ದು, ಇತಿಹಾಸ ಸಂಶೋಧಕರು ಇಲ್ಲಿಗೆ ಆಗಮಿಸಿ ಇನ್ನಷ್ಟು ಸಂಶೋಧನೆ ನಡೆಸಬೇಕಿದೆ.

ಬಸವರಾಜ ಹರಿಜನ, ಮಾರ್ಕಂಡಪ್ಪ ಹರಿಜನ, ಹುಲಿಗೆಮ್ಮ ಹರಿಜನ ಮತ್ತು ಬಸವರಾಜ ಹರಿಜನ ಇವರ ಗದ್ದೆಗಳ ಸುತ್ತ ಈ ವಿಗ್ರಹಗಳು ಪತ್ತೆಯಾಗಿವೆ. ಇಲ್ಲಿನ ರೈತರು ಲಭ್ಯವಾದ ವಿಗ್ರಹಗಳನ್ನು ಸಂರಕ್ಷಿಸಿ ಪೂಜಿಸುವ ಮೂಲಕ ರಕ್ಷಣೆ ಮಾಡಿದ್ದು, ಅವರಿಗೆ ಅಭಿನಂದಿಸುವುದಾಗಿ ಹೇಳಿದ ಫಕ್ಕಿರಪ್ಪ ಮತ್ತು ವೀರಣ್ಣ ಅವರು, ಕೊಪ್ಪಳ ಜಿಲ್ಲಾಡಳಿತ ಇಂತಹ ಅಪರೂಪದ ವಿಗ್ರಹಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು