ಮುನಿರಾಬಾದ್ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದ ಗೇಟ್ ಸಂಖ್ಯೆ 19ರಲ್ಲಿ ಆದ ಅವಘಡ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.
ಇಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಗೇಟ್ ವಿಳಾಸವೇ ಇಲ್ಲದಂತೆ ಕೊಚ್ಚಿಕೊಂಡು ಹೋಗಿದೆ. ಇನ್ನುಳಿದ ಗೇಟ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಬಂಧಿಸಿದ ಯೋಜನೆ ಇದಾಗಿದೆ. ಆದರೂ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ನೀರಿನ ಬೆಲೆ ಗೊತ್ತಿದ್ದವರಿಗೆ ಹಾಗೂ ರೈತರ ಬೆವರಿನ ಫಲ ತಿಳಿದವರಿಗೆ ಮಾತ್ರ ಕಷ್ಟ ಎನು ಎಂಬುದು ಗೊತ್ತಾಗುತ್ತದೆ. ಪ್ರತಿ ವರ್ಷ ಜಲಾಶಯ ನಿರ್ವಹಣೆ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇರುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿದೆ ಎಂದು ದೂರಿದರು.
ಜವಾಬ್ದಾರಿಯುತ ಯೋಜನೆಯನ್ನು ನಿರ್ವಹಣೆ ಮಾಡಲು ಆಗದಿದ್ದರೆ ಯಾಕೆ ಅಧಿಕಾರ ಮಾಡಬೇಕು. ಈ ಅವಘಡಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ಹೊರಬೇಕು. ಅನುದಾನದ ಕೊರತೆ ಇಲ್ಲ ಎಂದರು.
ಚೈನ್ ಲಿಂಕ್ ಕಳಚಿ ಗೇಟ್ ಶನಿವಾರ ಮಧ್ಯರಾತ್ರಿಯೇ ಉರುಳಿ ಹೋಗಿದ್ದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಇರುವ ಎಲ್ಲ ಕೆಲಸವನ್ನು ಬಿಟ್ಟು ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಮುರಿದು ಹೋಗಿರುವ ಕಾರಣ ಭಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿದೆ. ಪ್ರವಾಸಿಗರಿಗೆ ಅಣೆಕಟ್ಟೆ ವೀಕ್ಷಣೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.#Tungabhadra #TungabhadraDam #TungabhadraReservoir pic.twitter.com/sfWuDQEaUu
— Prajavani (@prajavani) August 11, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.