ಗುರುವಾರ , ಡಿಸೆಂಬರ್ 3, 2020
20 °C

ಕೆಲವರು ಹಣಕ್ಕಾಗಿ ರಾಜಕೀಯಕ್ಕೆ ಬರುತ್ತಾರೆ: ಮಹಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಚುನಾವಣೆಯಲ್ಲಿ ಗೆಲುವು ಸಾಧಿಸಲು ಜನಪ್ರತಿನಿಧಿಗಳು ಎಷ್ಟು ಬೇಕಾದರೂ ಹಣ ಚೆಲ್ಲುತ್ತಾರೆ. ಹಣ ಮಾಡುವ ಸಲುವಾಗಿಯೇ ಕೆಲವರು ರಾಜಕೀಯಕ್ಕೆ ಬರುತ್ತಾರೆ ಎಂದು ಜೆಡಿಯು ಅಭ್ಯರ್ಥಿ ಮಹಿಮ ಪಟೇಲ್‌ ಟೀಕಿಸಿದರು.

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಷ್ಟ್ರಮಟ್ಟದಲ್ಲಿ ಜೆಡಿಯು, ಎನ್‌ಡಿಎ ಮೈತ್ರಿಕೂಟದಲ್ಲಿದೆ. ರಾಜ್ಯದಲ್ಲಿ ಮೈತ್ರಿ ಇಲ್ಲ. ರಾಜಕೀಯ ನಿಂತ ನೀರಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಜಿಲ್ಲೆಯ ಜನರು ಸಮಾಜವಾದಿ ಚಳವಳಿಯ ಹಿನ್ನೆಲೆ ಹೊಂದಿದ್ದಾರೆ. ಒಳ್ಳೆಯ ಮನಸ್ಸಿನ ಪ್ರಾಮಾಣಿಕ ರಾಜಕಾರಣಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಚುನಾವಣೆ ರಣರಂಗವಾಗಬಾರದು. ಪ್ರಜಾಪ್ರಭುತ್ವದ ಆಟವಾಗಬೇಕು. ಹಣ ನೀರಿನಂತೆ ಸುರಿದು ಗೆಲುವು ಸಾಧಿಸಿದ ರಾಜಕಾರಣಿಗಳು ಅನಿವಾರ್ಯವಾಗಿ ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ. ಹಾಗಾಗಿ, ಮತದಾರು ಪ್ರಜ್ಞಾವಂತರು, ಪ್ರಾಮಾಣಿಕರಿಗೆ ಮಣೆ ಹಾಕಬೇಕು. ಆಮಿಷಕ್ಕೆ ಬಲಿಯಾಗಿ ಅಪ್ರಮಾಣಿಕರ ಆಯ್ಕೆ ಮಾಡಬಾರದು. ಜನ ಜಾಗೃತಿಗಾಗಿಯೇ ಚುನಾವಣಾ ಕಣಕ್ಕೆ ಇಳಿದಿದ್ದೇನೆ ಎಂದರು.

‘1967ರಲ್ಲಿ ನನ್ನ ತಂದೆ ಜೆ.ಎಚ್. ಪಟೇಲರನ್ನು ಜಿಲ್ಲೆಯ ಜನರು ಲೋಕಸಭೆಗೆ ಆರಿಸಿ ಕಳುಹಿಸಿದ್ದರು. ಅಂದು ಲೋಕಸಭೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ದೇಶದ ಗಮನ ಸೆಳೆದಿದ್ದರು. ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಅವರ ಹಾದಿ ನನಗೆ ಶ್ರೀರಕ್ಷೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು