ಶುಕ್ರವಾರ, ಆಗಸ್ಟ್ 19, 2022
27 °C
ಬೈರಿಗೈಯಲ್ಲಿ ಬಂದು ವಿದ್ಯೆ, ಯೋಗ, ಧ್ಯಾನ, ಪ್ರೀತಿ ಹಂಚಿ ಬರಿಗೈಯಲ್ಲಿ ತೆರಳಿದ ಸ್ವಾಮೀಜಿ

ಆನಂದಮಾರ್ಗದಿಂದ ಅಭಿನವ ಭಾರತಿಯೆಡೆಗೆ...

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮಂಡ್ಯಕ್ಕೆ ಬಂದಾಗ ನಾನು ಭಿಕಾರಿ, ಭಾಷೆ ಗೊತ್ತಿಲ್ಲ, ಯಾರ ಪರಿಚಯವೂ ಇರಲಿಲ್ಲ. ಇಲ್ಲಿಯ ಜನರು ಪಟಾಪಟ ಚಡ್ಡಿ ಹಾಕ್ಕೊಂಡು ಬೈಕ್‌, ಕಾರ್‌ಗಳಲ್ಲಿ ಓಡಾಡ್ತಾರೆ. ಸ್ಕೂಟರ್‌ಗೆ ಹುಲ್ಲು ಕಟ್ಟಿಕೊಂಡು ಹೋಗ್ತಾರೆ. ಇದು ಇಡೀ ದೇಶದಲ್ಲೇ ಬಹಳ ವಿಚಿತ್ರ ಜಾಗ ಅನ್ನಿಸಿತು. ಒರಟಾಗಿ ಮಾತಾಡ್ತಾರೆ, ಆದರೆ ತಕ್ಷಣ ತಣ್ಣಗಾಗ್ತಾರೆ, ಪ್ರೀತಿ ತೋರಿಸ್ತಾರೆ, ಇಲ್ಲಿ ಏನೋ ವಿಶೇಷವಿದೆ. ನಾನು ಇದೇ ಊರನ್ನು ಕರ್ಮಭೂಮಿಯನ್ನಾಗಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದೆ...

ಅನಂತಕುಮಾರ ಸ್ವಾಮೀಜಿ ಕುರಿತಂತೆ ಸಾಹಿತಿ ಡಾ.ಎಚ್‌.ಎಸ್‌.ಮುದ್ದೇಗೌಡ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ‘ನಿಷ್ಕಾಮ ಯೋಗಿ’ ಕೃತಿಯಲ್ಲಿ ಸ್ವಾಮೀಜಿ ತೆರೆದಿಟ್ಟಿರುವ ಮನದಾಳದ ಮಾತುಗಳಿವು.

ವಾರಾಣಸಿಯಲ್ಲಿ ಹುಟ್ಟಿ ಸ್ವತಂತ್ರ ಬದುಕು ಅರಸುತ್ತಾ ಹೊರಟ ಅನಂತಕುಮಾರ ಸ್ವಾಮೀಜಿ ಅವರಿಗೆ ದಕ್ಕಿದ್ದು ಮಂಡ್ಯ ಎಂಬುದು ಸೋಜಿಗ ಮೂಡಿಸುತ್ತದೆ. ಆಯುರ್ವೇದ ಔಷಧಿ ತಯಾರಿಸುವ ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದ್ದರೂ ಸ್ವಾಮೀಜಿ ಬಡತನವನ್ನು ಬೆನ್ನಿಗೆ ಕಟ್ಟಿಕೊಂಡು ದೇಶದ ಹಲವು ಭಾಗದಲ್ಲಿ ಓಡಾಡಿದರು, ಭಿಕ್ಷೆ ಬೇಡಿ ಹೊಟ್ಟೆ ತುತ್ತಿನ ಚೀಲ ತುಂಬಿಸಿಕೊಂಡರು.  ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ತುಡಿತದಲ್ಲಿ ಹೊರಟ ಅವರು ಸಕ್ಕರೆ ನಾಡಿಗೆ ಬಂದು ನೆಲೆಸಿ ಇಲ್ಲಿಯ ಜನರ ಮನಸ್ಸುಗಳಿಗೆ ಶಿಕ್ಷಣದ ಜೊತೆಗೆ ಯೋಗ, ಧ್ಯಾನದ ಮಹಿಮೆಯನ್ನು ತುಂಬಲೆತ್ನಿಸಿದರು.

ಅಧ್ಯಾತ್ಮ ಓದಿನಿಂದ ಪ್ರಭಾವಿತರಾಗಿದ್ದ ಅವರು ಮದುವೆ ಎಂಬ ಬಂಧನದಿಂದ ದೂರದೂರ ಸಾಗಿದರು. ಸ್ವಾಮೀಜಿ ಎನಿಸಿಕೊಂಡರೂ ಅವರು ಮಠ ಕಟ್ಟಲಿಲ್ಲ, ಬದಲಾಗಿ ಧ್ಯಾನ, ಭಜನೆ, ಯೋಗ ಪ್ರಚಾರ  ಮಾಡಿದರು. ‘ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಹುಟ್ಟೂರಿನಿಂದ ದೂರವೇ ಇರಬೇಕು’ ಎಂಬ ನಂಬಿಕೆ ಕಟಿಬದ್ಧರಾಗಿದ್ದ ಅವರು ಉಟ್ಟ ಬಟ್ಟೆಯಲ್ಲೇ ಹುಟ್ಟೂರು ಬಿಟ್ಟುಬಂದರು.

1969ರಲ್ಲಿ ಮಂಡ್ಯಕ್ಕೆ ಬಂದಾಗ ಯೋಗ, ಧ್ಯಾನದ ಜೊತೆಗೆ ಶಿಕ್ಷಣ ಸೇವೆಗೆ ಮುಂದಾದರು ಸ್ವಾಮೀಜಿ ಆಸಕ್ತಿಯನ್ನು ಕಂಡು ಸ್ಥಳೀಯ ಗಣ್ಯರಾದ ಚಲುವೇಗೌಡ, ಶಿವನಂಜೇಗೌಡ ಅವರು ಸಣ್ಣದಾಗಿ ಕಟ್ಟಿದ್ದ ‘ಆನಂದ ಮಾರ್ಗ’ ನರ್ಸರಿ ಶಾಲೆಯ ಜವಾಬ್ದಾರಿಯನ್ನು ಸ್ವಾಮೀಜಿಗೆ ವಹಿಸಿದರು. ಕೇವಲ 10 ಮಕ್ಕಳಿಂದ ಶಾಲೆ ಆರಂಭಗೊಂಡಿತು. ನಂತರ ಅದು ‘ಅಭಿನವ ಭಾರತಿ’ಯಾಗಿ ರೂಪ ಪಡೆಯಿತು.

ಖಾಸಗಿ ಶಾಲೆಗಳ ಹಾವಳಿಯ ನಡುವೆಯೂ ಬಡವರ ಶಾಲೆಯಾಗಿ ಅಭಿನವ ಭಾರತಿ ಗುರುತಿಸಿಕೊಂಡಿತು. ಇಲ್ಲಿಯ ಮಕ್ಕಳು ಯೋಗದಲ್ಲಿ ಪ್ರಸಿದ್ಧಿ ಪಡೆದರು. ರಾಷ್ಟ್ರೀಯ ಹಬ್ಬಗಳಲ್ಲಿ ಈ ಶಾಲೆಯ ಮಲ್ಲಕಂಬ ಸೇರಿ ಯೋಗಾಧಾರಿತ ಪ್ರದರ್ಶನಗಳು ಸಾಮಾನ್ಯವಾದವು. ಈ ಶಾಲೆಯಲ್ಲಿ ಉಚಿತವಾಗಿ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದ ಸಾಧಕರಿಗೆ ಕೊರತೆ ಇಲ್ಲ. ‌ಅತ್ಯಂಕ ಸಂಕಷ್ಟದಲ್ಲಿ ಶಾಲಾ, ಕಾಲೇಜು ಕಟ್ಟಿದರು. ಅದಕ್ಕಾಗಿ ಕೋರ್ಟ್‌, ಕಚೇರಿಗಳನ್ನು ಅಲೆದರು.

1991ರಲ್ಲಿ ವೆಂಕಟೇಶ್ವರ ಧ್ಯಾನ ಕೇಂದ್ರ ಸ್ಥಾಪಿಸಿದ ಅವರು ಬದುಕಿನ ಜಂಜಡದಲ್ಲಿ ನರಳುವ ಮನಸ್ಸುಗಳಿಗೆ ನೆಮ್ಮದಿ ನೀಡುವ ಕೆಲಸ ಮಾಡಿದರು. ವಿಶೇಷ ದಿನಗಳಲ್ಲಿ ನಡೆಯುತ್ತಿದ್ದ ಧಾರ್ಮಿಕ ಆಚರಣೆಗಳು ಪ್ರಸಿದ್ಧಿ ಪಡೆದವು. ದೇಶ, ವಿದೇಶಗಳ ಗಣ್ಯರು ಇಲ್ಲಿಗೆ ಬಂದು ಧ್ಯಾನ ಮಾಡಿದ ಹಲವು ನಿದರ್ಶನಗಳಿವೆ.

‘ನಾನು ಸತ್ತ ಮೇಲೆ ಮೃತದೇಹವನ್ನು ಅಭಿನವ ಭಾರತಿ ಶಾಲೆಯ ಆವರಣದಲ್ಲೇ ಸಂಸ್ಕಾರ ಮಾಡಿದರೆ ಅದು ನನ್ನ ಪುಣ್ಯ ಎಂದುಕೊಳ್ಳುತ್ತೇನೆ. ಸಮಾಧಿಯ ಒಳಗಿಂದಲೇ ಮುದ್ದು ಕಂದಮ್ಮಗಳ ನಗು ನೋಡುತ್ತೇನೆ. ಶಾಲೆಯ ಅಭಿವೃದ್ಧಿಯನ್ನು ಕಾಣುತ್ತೇನೆ’ ಎಂದು ಸ್ವಾಮೀಜಿ ನಿಷ್ಕಾಮ ಯೋಗಿ ಕೃತಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅವರ ಮನದಿಚ್ಛೆಯಂತೆಯೇ ಅಭಿನವ ಭಾರತಿ ಶಾಲಾ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಪಂಚಭೂತಗಳಲ್ಲಿ ಲೀನ

ಸೋಮವಾರ ಮೃತಪಟ್ಟಿದ್ದ ಅನಂತಕುಮಾರ ಸ್ವಾಮೀಜಿ ಮಂಗಳವಾರ ಶಂಕರನಗರದ ಅಭಿನವ ಭಾರತಿ ಕಾಲೇಜು ಆವರಣದಲ್ಲಿ ಪಂಚಭೂತಗಳಲ್ಲಿ ಲೀನವಾದರು.

ಅಭಿನವ ಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ ಹಾಗೂ ವಿದ್ಯಾರ್ಥಿಗಳು ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಸೇರಿದಂತೆ ಹಲವು ಗಣ್ಯರು ಮೃತದೇಹದ ಅಂತಿಮ ದರ್ಶನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು