ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗಾಂಗಗಳಿಗೆ ಕಾಯುತ್ತಿವೆ 8,552 ಜೀವಗಳು!

ದಾನ ಪ್ರತಿಜ್ಞಾ ನೋಂದಣಿಯಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ
Published : 10 ಆಗಸ್ಟ್ 2024, 21:46 IST
Last Updated : 10 ಆಗಸ್ಟ್ 2024, 23:35 IST
ಫಾಲೋ ಮಾಡಿ
Comments

ಮಂಡ್ಯ: ರಾಜ್ಯದಾದ್ಯಂತ ಅಂತಿಮ ಹಂತದ ಅಂಗ ವೈಫಲ್ಯದಿಂದ ಬಳಲುತ್ತಿರುವ 8,552 ಮಂದಿ, ಮೂತ್ರಪಿಂಡ, ಯಕೃತ್‌, ಹೃದಯ, ಶ್ವಾಸಕೋಶ ಸೇರಿ ವಿವಿಧ ಅಂಗಾಂಗಗಳಿಗೆ ಕಾಯುತ್ತಿದ್ದಾರೆ. 

ಮಾನವ ಅಂಗಗಳು ಮತ್ತು ಅಂಗಾಂಶಗಳ ಕೊರತೆಯು ದಿನೇ ದಿನೇ ಹೆಚ್ಚುತ್ತಿದ್ದು, ಕಾರ್ನಿಯಾ, ಹೃದಯ ಕವಾಟ, ಚರ್ಮ ಸೇರಿದಂತೆ ವಿವಿಧ ಅಂಗಾಂಶಗಳಿಗಾಗಿಯೂ ರೋಗಿಗಳು ಪರದಾಡುತ್ತಿದ್ದಾರೆ. ಸೂಕ್ತ ಸಮಯಕ್ಕೆ ಅಂಗಾಂಗಗಳು ದೊರಕದೇ ಅನೇಕರು ಸಾವಿಗೀಡಾಗುತ್ತಿದ್ದಾರೆ.  

‘ಒಬ್ಬ ದಾನಿ 8 ಜೀವಗಳನ್ನು ಉಳಿಸಬಹುದು. ಹೃದಯ, ಎರಡು ಮೂತ್ರಪಿಂಡಗಳು, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶಗಳನ್ನು ದಾನ ಮಾಡಬಹುದು. ಅದೇ ದಾನಿಯ ಅಂಗಾಂಶಗಳಾದ ಚರ್ಮ, ಮೂಳೆ, ಅಸ್ಥಿರಜ್ಜು, ಹೃದಯ ಕವಾಟಗಳು ಮತ್ತು ಕಣ್ಣು ದಾನ ಮಾಡಿ 50ಕ್ಕೂ ಹೆಚ್ಚು ಜನರ ಜೀವನದಲ್ಲಿ ಬೆಳಕು ತರಬಹುದು’ ಎನ್ನುತ್ತಾರೆ ವೈದ್ಯರು. 

5,945 ಮಂದಿಗೆ ಮೂತ್ರಪಿಂಡ ಸಮಸ್ಯೆ!
ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಪ್ರತಿ 10 ಲಕ್ಷ ಮಂದಿ ಪೈಕಿ 800 ಮಂದಿಯಲ್ಲಿ ಕಂಡುಬಂದಿದ್ದು, ರಾಜ್ಯದಲ್ಲಿ ಪ್ರಸ್ತುತ 5,945 ಮಂದಿ ಈ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಅಂಗಾಂಗಗಳ ಕೊರತೆ ನೀಗಿಸಲು ರಾಜ್ಯ ಸರ್ಕಾರ ಬೆಂಗಳೂರಿನ ನಿಮ್ಹಾನ್ಸ್ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ 26 ‘ಕಸಿ ಮಾಡದ ಮಾನವ ಅಂಗಗಳ ಮರುಪಡೆಯುವಿಕೆ ಕೇಂದ್ರ‘ಗಳನ್ನು (NTHORC) ಸ್ಥಾಪಿಸಿದೆ. ಸುವರ್ಣ ಆರೋಗ್ಯ ಟ್ರಸ್ಟ್‌ ಅಡಿಯಲ್ಲಿ ಬಡರೋಗಿಗಳಿಗೆ ಉಚಿತ ಅಂಗಾಂಗ ಕಸಿ ಸೌಲಭ್ಯ ಕಲ್ಪಿಸಲಾಗಿದೆ. 

ರಾಜ್ಯಕ್ಕೆ ಮೂರನೇ ಸ್ಥಾನ:
ಕರ್ನಾಟಕದಲ್ಲಿ 22,210 ಅಂಗಾಂಗ ದಾನ ಪ್ರತಿಜ್ಞೆಗಳಾಗಿದ್ದು, ದೇಶದಲ್ಲೇ ರಾಜ್ಯ ಮೂರನೇ ಸ್ಥಾನದಲ್ಲಿದೆ. 4,565 ದಾನಿಗಳ ನೋಂದಣಿಯಿಂದ ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಧಾರವಾಡ (2542), ಕೋಲಾರ (1716), ಬೆಂಗಳೂರು ಗ್ರಾಮಾಂತರ (1503), ದಕ್ಷಿಣ ಕನ್ನಡ (1120) ಕ್ರಮವಾಗಿ 2ರಿಂದ 5ನೇ ಸ್ಥಾನದಲ್ಲಿವೆ. ಮಂಡ್ಯ ಜಿಲ್ಲೆಯಲ್ಲಿ 643 ಮಂದಿ ನೋಂದಾಯಿಸಿದ್ದಾರೆ. 

ಆರೋಗ್ಯ ಇಲಾಖೆಯಡಿ, ‘ರಾಜ್ಯ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ‘ಯು (SOTTO) ಅಂಗಾಂಗ ದಾನವನ್ನು ಉತ್ತೇಜಿಸುತ್ತಾ, ಮಿದುಳು ನಿಷ್ಕ್ರಿಯಗೊಂಡ ದಾನಿಯಿಂದ ಪಡೆದ ಅಂಗಾಂಗಗಳ ಕಸಿಯನ್ನು ಸಂಯೋಜಿಸುತ್ತಿದೆ. 

ಅಂಗಾಂಗ ದಾನ ಮಾಡಲು ಆರೋಗ್ಯ ಶಿಬಿರಗಳಲ್ಲಿ ಜನರಿಗೆ ಜಾಗೃತಿ ಮೂಡಿಸಿ ಮೊಬೈಲ್‌ನಲ್ಲೇ ನೋಂದಣಿ ಮಾಡಿಸಿದೆವು. ಇದರ ಪರಿಣಾಮ ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ –
ಡಾ.ರಮೇಶಬಾಬು ಡಿಎಚ್‌ಒ ಬಳ್ಳಾರಿ
ಅಂಗಾಂಗ ದಾನ: ಕರ್ನಾಟಕಕ್ಕೆ ಪ್ರಶಸ್ತಿ
ರಾಜ್ಯದಲ್ಲಿ 2022ರಲ್ಲಿ 151 ಅಂಗಾಂಗ ದಾನ ಮತ್ತು 2023ರಲ್ಲಿ 178 2024ರಲ್ಲಿ ಜುಲೈ ಅಂತ್ಯದವರೆಗೆ 88 ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು ದೇಶದಲ್ಲೇ ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದೆ. 2023ನೇ ಸಾಲಿನ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ವತಿಯಿಂದ ‘ಎರಡನೇ ಅತ್ಯುತ್ತಮ ರಾಜ್ಯ’ ಪ್ರಶಸ್ತಿ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT