ಶ್ರೀರಂಗಪಟ್ಟಣ: ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಆರತಿ ಉಕ್ಕಡದ ಪ್ರಸಿದ್ಧ ಅಹಲ್ಯಾದೇವಿ ಮಾರಮ್ಮ ದೇವಾಲಯಕ್ಕೆ ಭಾನುವಾರ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಮುಂಜಾನೆ 3 ಗಂಟೆಯಿಂದಲೇ ದೇವಾಲಯದಲ್ಲಿ ಪೂಜಾ ವಿಧಿ, ವಿಧಾನಗಳು ಆರಂಭವಾದವು. ಬೆಳಿಗ್ಗೆ 7ರ ವೇಳೆಗೆ ದೇವಾಲಯದ ಆವರಣದಲ್ಲಿ ಭಕ್ತರ ದಂಡೇ ನೆರೆದಿತ್ತು. 10ರಿಂದ ಸಂಜೆ 4 ಗಂಟೆವರೆಗೆ ಭಕ್ತರು ದೇವಾಲಯದಿಂದ ಪರ್ಲಾಂಗು ದೂರದವರೆಗೂ ಸಾಲುಗಟ್ಟಿ ನಿಂತಿದ್ದರು. ಅಹಲ್ಯಾ ದೇವಿಯ ದರ್ಶನ ಪಡೆದು ಎಳ್ಳು, ಜೀರಿಗೆ ಸಮರ್ಪಿಸಿದರು.
ದೇವಾಲಯ ಪಕ್ಕದ ಐತಿಹಾಸಿಕ ಕಲ್ಯಾಣಿಯಲ್ಲಿ ಕಟ್ಟೆ ಒಡೆಯುವ ಸಾಂಪ್ರದಾಯಿಕ ಆಚರಣೆ ನಡೆಯಿತು. ದೋಷ ನಿವಾರಣೆಗಾಗಿ ಮೊಟ್ಟೆ ಮತ್ತು ತಡೆ ಒಡೆಯುವ ಕೈಂಕರ್ಯಗಳೂ ನಡೆದವು. ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಲು ದೇವಾಲಯ ಮತ್ತು ಆಸುಪಾಸಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಥಳೀಯರು ಮಾತ್ರವಲ್ಲದೆ ಬೆಂಗಳೂರು, ಮೈಸೂರು ಇತರ ಕಡೆಗಳಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಮಹಾಕಾಳಿ ದೇವಾಲಯ:
ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್ ಬಳಿಯ ಮಹಾಕಾಳಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆಗಳು ನಡೆದವು. ಬೆಳಿಗ್ಗೆಯಿಂದ ಸಂಜೆವರೆಗೆ ನೂರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಾಲಯದ ಪ್ರಧಾನ ಅರ್ಚಕ ಮೋಹನ ಗುರೂಜಿ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತ್ಯಂಗೀರ ಹೋಮ ನಡೆಯಿತು. ವಿವಿಧ ಗ್ರಾಮ ಮತ್ತು ನಗರ ಪ್ರದೇಶದ ನೂರಾರು ಭಕ್ತರು ಭೇಟಿ ನೀಡಿದ್ದರು.
ಪಟ್ಟಣದ ಚಾಮುಂಡೇಶ್ವರಿ ದೇವಾಲಯ, ಮಹಾಲಕ್ಷ್ಮಿ ದೇವಾಲಯ, ಕಾಳಿಕಾಂಬ ಕಮಠೇಶ್ವರ ದೇವಾಲಯ, ಕ್ಷಣಾಂಬಿಕಾ ದೇವಾಲಯ, ಗಂಜಾಂ ನಿಮಿಷಾಂಬ ದೇವಾಲಯ, ಅರಕೆರೆಯ ಬಿಸಿಲು ಮಾರಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಆರತಿ ಉಕ್ಕಡದ ಐತಿಹಾಸಿಕ ಕಲ್ಯಾಣಿಯಲ್ಲಿ ಕಟ್ಟೆ ಒಡೆಯುವ ಆಚರಣೆ ನಡೆಯಿತು