ಮಂಗಳವಾರ, ಮಾರ್ಚ್ 9, 2021
29 °C
ಆತ್ಮನಿರ್ಭರ ಭಾರತ ಯೋಜನೆಯಡಿ ಆಲೆಮನೆಗಳ ಪುನಶ್ಚೇತನ

ಬೆಲ್ಲಕ್ಕೆ ಬ್ರ್ಯಾಂಡ್‌ ರೂಪ, ರಫ್ತಿಗೆ ಉತ್ತೇಜನ: ಸಹಕಾರ ಸಚಿವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆ ಅಡಿ ಜಿಲ್ಲೆಯ ಬೆಲ್ಲದ ಉತ್ಪಾದನೆ ಘಟಕಗಳಿಗೆ (ಆಲೆಮನೆ) ಪುನಶ್ಚೇತನ ನೀಡಲಾಗುವುದು. ಬೆಲ್ಲಕ್ಕೆ ಬ್ರ್ಯಾಂಡ್‌ ರೂಪ ನೀಡಿ ರಫ್ತಿಗೆ ಉತ್ತೇಜನ ನೀಡಲಾಗುವುದು’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಭರವಸೆ ನೀಡಿದರು.

ಯೋಜನೆ ಜಾರಿ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಆಲೆಮನೆ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

‘ಒಂದು ಜಿಲ್ಲೆ ಒಂದು ಉತ್ಪನ್ನ ಮಾದರಿಯಡಿ ಆಲೆಮನೆಗಳ ಮೇಲ್ದರ್ಜೆಗೇರಿಸುವುದು, ತಂತ್ರಜ್ಞಾನ ಅಳವಡಿಕೆಗೆ ನೀಡಲಾಗುವುದು. ಬೆಲ್ಲಕ್ಕೆ ಬ್ರ್ಯಾಂಡ್‌ ರೂಪ ನೀಡಿ ಅಂತರರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಲಾಗುವುದು. ಇದರಿಂದ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದರು.

‘ಆಲೆಮನೆ ಮಾಲೀಕರು ಎದುರಿಸುತ್ತಿರುವ ಸಮಸ್ಯೆ ಸೇರಿದಂತೆ ಯೋಜನೆ ಜಾರಿಗೆ ಅಡ್ಡಿಯಾಗಿರುವ ಸವಾಲುಗಳ ಅಧ್ಯಯನಕ್ಕೆ ಸಮಿತಿ ರಚನೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. ಫೆ.6ರೊಳಗೆ ವರದಿ ಪಡೆದು ಸಚಿವ ಸಂಪುಟದ ಅನುಮೋದನೆಯೊಂದಿಗೆ ಬಜೆಟ್‌ ಘೋಷಣೆಗೆ ಸೇರಿಸಲಾಗುವುದು’ ಎಂದರು.

ಆಲೆಮನೆಗಳ ಸಂಘದ ಅಧ್ಯಕ್ಷ ಸೋಮಶಂಕರೇಗೌಡ ಮಾತನಾಡಿ ‘ಒಂದು ಕಾಲದಲ್ಲಿ ಜಿಲ್ಲೆಯಲ್ಲಿ 4,500 ಆಲೆಮನೆಗಳಿದ್ದವು. ನಿತ್ಯ 150 ಲಾರಿ ಬೆಲ್ಲ ಹೊರರಾಜ್ಯಗಳಿಗೆ ತೆರಳುತಿದ್ದವು. 1996ರ ನಂತರ ಕಬ್ಬಿನ ತಳಿಯ ಬದಲಾವಣೆಯಿಂದಾಗಿ ಆಲೆಮನೆಗಳು ನೆಲಕಚ್ಚಿದವು. 617 ತಳಿಯಲ್ಲಿ ಸಕ್ಕರೆ ಅಂಶ ಇಲ್ಲದ ಕಾರಣ ರೈತರು, ಆಲೆಮನೆ ಮಾಲೀಕರು ನಷ್ಟ ಅನುಭವಿಸಿದರು. ಈಗ ಬೆಳೆಯುತ್ತಿರುವ 517ರ ತಳಿಯಲ್ಲಿ ಶೇ 12 ಸಕ್ಕರೆ ಅಂಶವಿದೆ. ಈಗಲೂ ಆಲೆಮನೆಗಳು ಆರ್ಥಿಕ ಶಕ್ತಿಯಾಗಿವೆ’ ಎಂದರು.

‘ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ಆಲೆಮನೆ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿಯವರೆಗೆ ಶೇ 1ರಷ್ಟು ಆಲೆಮನೆಗಳು ಮಾತ್ರ ಸಾಲ ಸೌಲಭ್ಯ ಪಡೆದಿವೆ. ಒಂದು ಕಾಲದಲ್ಲಿ ಅಸ್ಸಾಂ, ಗುಜರಾತ್‌ ರಾಜ್ಯಗಳಲ್ಲಿ ಮಂಡ್ಯ ಬೆಲ್ಲಕ್ಕೆ ಒಳ್ಳೆಯ ಬೇಡಿಕೆ ಇತ್ತು. ಆದರೆ ಈಗ ಆಲೆಮನೆಗಳಲ್ಲಿ ಕಳಪೆ ಗುಣಮಟ್ಟದ ಬೆಲ್ಲ ತಯಾರಿಕೆಯಾಗುತ್ತಿದೆ. ರಾಸಾಯನಿಕ ಬಳಕೆ ವಿಪರೀತವಾಗಿದೆ. ಹೀಗಾಗಿ ಗುಜರಾತ್‌ ರಾಜ್ಯದಲ್ಲಿ ಮಂಡ್ಯ ಬೆಲ್ಲವನ್ನು ನಿಷೇಧಿಸಲಾಗಿದೆ’ ಎಂದರು.

‘ಆತ್ಮನಿರ್ಭರ ಯೋಜನೆ ಅನುಷ್ಠಾನಕ್ಕೂ ಮೊದಲು ಆಲೆಮನೆ ಮಾಲೀಕರು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಒದಗಿಸಬೇಕು. ಕೇರಳ, ತಮಿಳುನಾಡು ಮಾದರಿಯಲ್ಲಿ ಪಡಿತರ ಚೀಟಿದಾರರಿಗೆ ಸರ್ಕಾರ ತಲಾ 1 ಕೆ.ಜಿ ಬೆಲ್ಲ ವಿತರಣೆ ಮಾಡಬೇಕು. ರಾಸಾಯನಿಕ ಬೆಲ್ಲ ಉತ್ಪಾದನೆ, ತಳಿ ಬದಲಾವಣೆ, ತಂತ್ರಜ್ಞಾನ ಅಳವಡಿಕೆ, ತರಬೇತಿಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ಆಲೆಮನೆ ಮಾಲೀಕ ರಮೇಶ್‌ ಬಾಬು ಮಾತನಾಡಿ ‘ಆತ್ಮನಿರ್ಭರ ಭಾರತ ಯೋಜನೆಯಡಿ ಆಲೆಮನೆಗಳಿಗೆ ನೀಡಲು ಉದ್ದೇಶಿಸಲಾಗಿರುವ ಹಣದಲ್ಲಿ ಆಲೆಮನೆಗಳ ಉದ್ಧಾರ ಆಗುವುದಿಲ್ಲ. ರಾಸಾಯನಿಕ ಮುಕ್ತ ಬೆಲ್ಲ ಉತ್ಪಾದನೆ ಮಾಡುವ ಒಂದು ಆಲೆಮನೆ ರೂಪಿಸಲು ₹ 50 ಲಕ್ಷದ ಅವಶ್ಯಕತೆ ಇದೆ. ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳ ಅಗತ್ಯತೆ ಇದೆ. ಬೆಲ್ಲ ತಯಾರಿಕೆ ಪ್ರಕ್ರಿಯೆಯಲ್ಲಿ ಸಕ್ಕರೆ ಬಳಕೆ, ರಾಸಾಯನಿಕ ಬಳಕೆ ನಿಷೇಧಿಸಬೇಕು’ ಎಂದರು.

‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಲೆಮನೆಗಳಿಗೆ ಅನುಮತಿ ನೀಡಲಾಗುತ್ತದೆ. ಬೆಲ್ಲ ರಕ್ಷಣೆಗೆ ಶೀಥಲೀಕರಣಗಳ ಅಗತ್ಯವೂ ಇಲ್ಲ. ಬೆಲ್ಲದಲ್ಲಿರುವ ತೇವಾಂಶವನ್ನು ಬೇರ್ಪಡಿಸಿದರೆ ವರ್ಷಗಟ್ಟಲೆ ಬೆಲ್ಲವನ್ನು ಇಡಬಹುದು. ಬೇಡದ ವಿಚಾರಗಳಿಗೆ ಚರ್ಚೆ ನಡೆಸದೇ ಅಗತ್ಯವಾಗಿ ನಡೆಯಬೇಕಿರುವ ವಿಚಾರ ಚರ್ಚಿಸಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕರಾದ ಎಂ.ಶ್ರೀನಿವಾಸ್‌, ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಇದ್ದರು.

1 ಕೆ.ಜಿ ಬೆಲ್ಲಕ್ಕೆ ₹ 1 ಸಾವಿರ!

ಸಂಸದೆ ಎ.ಸುಮಲತಾ ಮಾತನಾಡಿ ‘ಯೂರೋಪ್‌ ದೇಶಗಳಲ್ಲಿ 1 ಕೆ.ಜಿ ಬೆಲ್ಲಕ್ಕೆ ₹ 1 ಸಾವಿರದವರೆಗೂ ಬೆಲೆ ಇದೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗಿ ಉತ್ಪಾದಿಸುವ ಬೆಲ್ಲಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ಎಲ್ಲಾ ಅವಕಾಶಗಳಿವೆ’ ಎಂದು ಹೇಳಿದರು.

‘ಮಂಡ್ಯಕ್ಕೆ ಬ್ರ್ಯಾಂಡ್‌ ರೂಪ ನೀಡುವಲ್ಲಿ ನಾವು ಸೋತಿದ್ದೇವೆ. ಧಾರವಾಡ ಪೇಢ, ಮೈಸೂರು ಪಾಕ್‌ನಂತೆ ಮಂಡ್ಯ ಬೆಲ್ಲ ಎಂಬ ಬ್ರ್ಯಾಂಡ್‌ ರೂಪ ಸಿಗಬೇಕು. ಅದಕ್ಕಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಬೆಲ್ಲ ಉತ್ಪಾದನೆಗೆ ಆದ್ಯತೆ ನೀಡಬೇಕು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು