ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಗಾಡಿ ದುರಂತ: ದೂರು ನೀಡಲು ಹಿಂದೇಟು

ತಲೆಮರೆಸಿಕೊಂಡ ಆಯೋಜಕರು, ತಪ್ಪಿತಸ್ಥರನ್ನು ಬಂಧಿಸುವರೇ ಪೊಲೀಸರು?
Last Updated 9 ಜನವರಿ 2023, 16:14 IST
ಅಕ್ಷರ ಗಾತ್ರ

ಮಂಡ್ಯ: ಸುರಕ್ಷತಾ ಕ್ರಮ ಕೈಗೊಳ್ಳದೇ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸಿ ಭಾನುವಾರ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಚಿಕ್ಕಮಂಡ್ಯ ಗ್ರಾಮದ ಸ್ಪರ್ಧೆ ಆಯೋಜಕರನ್ನು ಇಲ್ಲಿಯವರೆಗೂ ಬಂಧಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ವಿರುದ್ಧ ದೂರು ನೀಡಲು ಕೂಡ ಹಿಂದೇಟು ಹಾಕಿರುವುದು ಬೆಳಕಿಗೆ ಬಂದಿದೆ.

ಹಳ್ಳಿಕೇಶ್ವರ ಬೋರೇಶ್ವರ ಹಾಗೂ ರೈತ ಮಿತ್ರ ಬಳಗದಿಂದ ಚಿಕ್ಕಮಂಡ್ಯ ಗ್ರಾಮದ ಬಳಿ ನಡೆದ 8ನೇ ವರ್ಷದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಗಾಡಿಯ ಚಕ್ರ ಹರಿದು ಯುವ ರೈತ ಮುಖಂಡ ನಾಗರಾಜು ಮೃತಪಟ್ಟಿದ್ದರು. ಮತ್ತೊಬ್ಬ ಬಾಲಕ, ಹುಲಿವಾನದ ಬಾಲಕ ಋತ್ವಿಕ್‌ ತೀವ್ರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದು 1 ದಿನ ಕಳೆದಿದ್ದರೂ ತಪ್ಪಿತಸ್ಥರ ವಿರುದ್ಧ ಯಾರೂ ದೂರು ನೀಡಲು ಮುಂದಾಗಿರಲಿಲ್ಲ. ಸೋಮವಾರ ಸಂಜೆ ‘ಬಿದ್ದು ಗಾಯಗೊಂಡು ನಾಗರಾಜು ಮೃತಪಟ್ಟಿದ್ದಾರೆ’ ಎಂಬ ದೂರು ದಾಖಲಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಸ್ಪರ್ಧೆಗೆ ಪೊಲೀಸ್‌ ಅನುಮತಿ ಪಡೆಯದೇ, ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಳ್ಳದೇ 80ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಕರೆಸಿ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸ್ಪರ್ಧೆ ಆಯೋಜಿಸಿದ್ದ ಸಂಘದ ಸದಸ್ಯರು ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನರ ಮೇಲೆ ಎತ್ತಿನ ಗಾಡಿ ಓಡಿಸಿದ್ದು ಯಾರು ಎಂಬುದನ್ನು ಮುಚ್ಚಿಡಲಾಗಿದೆ. ಪೊಲೀಸರು ಸ್ಪರ್ಧೆ ಆಯೋಜಕರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಬಂಧಿಸಬೇಕಾಗಿತ್ತು. ಎಲ್ಲರೂ ಸೇರಿ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ. ಪೊಲೀಸರು ಕೂಡಲೇ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಕೀಲಾರ ಗ್ರಾಮದ ರೈತ ಮುಖಂಡರು ಒತ್ತಾಯಿಸಿದರು.

‘ಬಿದ್ದು ಗಾಯಗೊಂಡು ಮೃತಪಟ್ಟಿದ್ದಾರೆ ಎಂಬ ದೂರು ದಾಖಲಾಗಿರುವ ಮಾಹಿತಿ ಇದೆ. ಹೇಗೆ ದೂರು ನೀಡಿದ್ದರೂ ತನಿಖೆ ನಡೆಸಿ ವಾಸ್ತವಾಂಶ ಪತ್ತೆ ಮಾಡುವಂತೆ ಕೇಂದ್ರ ಠಾಣೆ ಪೊಲೀಸರಿಗೆ ದೂರು ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು.

ಕಲಾವಿದ ಆರಾಧಾಕ ನಾಗರಾಜು: ಎತ್ತಿನ ಗಾಡಿ ದುರಂತದಲ್ಲಿ ಮೃತಪಟ್ಟಿರುವ ನಾಗರಾಜು ಯುವ ರೈತ ಮುಖಂಡರಾಗಿದ್ದರು. ಜೊತೆಗೆ ಜನಪದ ಕಲಾವಿದರಗಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳಿಗೆ ಜನಪದ ಗೀತೆಗಳನ್ನು ಕಲಿಸುತ್ತಿದ್ದರು. ಇಂತಹ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದಕ್ಕೆ ಕೀಲಾರ ಗ್ರಾಮದ ಜನರು ಶೋಕ ವ್ಯಕ್ತಪಡಿಸಿದ್ದಾರೆ.

‘ನಾಗರಾಜು ಅವರು ತನ್ನ ಮಗಳನ್ನು ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗೆ ಸೇರಿಸಲು ಅರ್ಜಿ ಸಲ್ಲಿಸುವಂತೆ ನನಗೆ ತಿಳಿಸಿ ಎತ್ತಿನಗಾಡಿ ಸ್ಪರ್ಧೆ ವೀಕ್ಷಣೆಗೆ ತೆರಳಿದ್ದರು. ಸಂಜೆ ಅವರ ಸಾವಿನ ಸುದ್ದಿ ಕೇಳಿ ನೋವಾಯಿತು’ ಎಂದು ಶಿಕ್ಷಕ ನಂದೀಶ್‌ ನೋವು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT