ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಭೂಮಿತಾಯಿ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಪಟ್ಟಣದಲ್ಲಿ ಬುಧವಾರ ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.
ಇಲ್ಲಿನ ಸೋಪಾನ ಕಟ್ಟೆ ಬಳಿ ನದಿಗೆ ಇಳಿದು ಅರ್ಧ ಗಂಟೆ ಕಾಲ ಪ್ರತಿಭಟಿಸಿದರು. ರಾಜ್ಯ ಸರ್ಕಾರ ಮತ್ತು ಜಲ ಸಂಪನ್ಮೂಲ ಸಚಿವರ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲೆಯ ಶಾಸಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಮಳೆಗಾಲ ಬೇಸಿಗೆ ಕಾಲದಂತಾಗಿದೆ. ಹೊಲದಲ್ಲಿ ಬಿತ್ತಿದ ಕಾಳುಗಳು ಮೊಳಕೆ ಬಂದು ಕಮರಿ ಹೋಗಿವೆ. ನೀರಾವರಿ ಪ್ರದೇಶದಲ್ಲಿ ಭತ್ತ ನಾಟಿ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿ ರೈತರು ಇದ್ದಾರೆ. ನಿಂತಿರುವ ಬೆಳೆ ಉಳಿಸಿಕೊಳ್ಳುವುದೂ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬಂದ ಅಲ್ಪ ಪ್ರಮಾಣದ ನೀರನ್ನೂ ತಮಿಳುನಾಡಿಗೆ ಹರಿಸುವ ಮೂಲಕ ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೊಣೆಗೇಡಿಯಂತೆ ಮಾತನಾಡುತ್ತಿದ್ದಾರೆ. ಅವರಿಗೆ ಕೃಷಿ ಜ್ಞಾನ ಲವಲೇಶವೂ ಇಲ್ಲ. ನೀರು ಬೇಕಾದರೆ ನ್ಯಾಯಾಲಯಕ್ಕೆ ಹೋಗಿ ಎನ್ನುವ, ರೈತರ ಪ್ರಭಟನೆ ರಾಜಕೀಯ ಪ್ರೇರಿತ ಎಂದು ಹೇಳುವ ಡಿ.ಕೆ. ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ ಆಗ್ರಹಿಸಿದರು.
ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು. ರೈತರು ರಭಸವಾಗಿ ಹರಿಯುತ್ತಿದ್ದ ನದಿಗೆ ಇಳಿದ ಕಾರಣ ಪೊಲೀಸರು ಹಗ್ಗದಿಂದ ತಾತ್ಕಾಲಿಕ ಬೇಲಿ ನಿರ್ಮಿಸಿದ್ದರು.
ಹನಿಯಂಬಾಡಿ ನಾಗರಾಜು, ಬೆಳಗೊಳ ಸುನಿಲ್, ಚಂದಗಾಲು ಶಿವಣ್ಣ, ರಾಮಕೃಷ್ಣ, ಎಂ.ವಿ. ಕೃಷ್ಣ, ಮಹದೇವು, ಕೆಂಪೇಗೌಡ, ಮಹೇಶ್, ಮಂಜುನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.