ಮಂಗಳವಾರ, ಮೇ 11, 2021
20 °C
‘ಬೆಡ್‌ ಇಲ್ಲ’ ಬರಹ ಅನಾವರಣ, ಬಿಡುಗಡೆ ಹೊಂದಿದರಷ್ಟೇ ಹೊಸ ರೋಗಿಗಳಿಗೆ ಅವಕಾಶ

ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಾಗಿ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮಿಮ್ಸ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಸಕಲ ಹಾಸಿಗೆಗಳು ಭರ್ತಿಯಾಗಿದ್ದು ಹೊಸದಾಗಿ ಬರುತ್ತಿರುವ ರೋಗಿಗಳಲ್ಲಿ ಹಾಸಿಗೆಗಾಗಿ ಹಾಹಾಕಾರ ಉಂಟಾಗಿದೆ. ನಿತ್ಯ ನೂರಾರು ಮಂದಿ ಆಸ್ಪತ್ರೆ ಆವರಣಕ್ಕೆ ಬಂದು ಹಾಸಿಗೆ ಕೊಡುವಂತೆ ಮೊರೆ ಇಡುತ್ತಿದ್ದಾರೆ.

ಕೋವಿಡ್‌ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದ ಎಲ್ಲಾ 400 ಹಾಸಿಗೆಗಳು ಭರ್ತಿಯಾಗಿದ್ದು ಆ ವಿವರವನ್ನು ಬೋರ್ಡ್‌ನಲ್ಲಿ ಬರೆಯಲಾಗಿದೆ. ಆದರೂ ನಿತ್ಯ ನೂರಾರು ಸೋಂಕಿತರು ಆಸ್ಪತ್ರೆಗೆ ಬಂದು ಹಾಸಿಗೆ ಕೊಡುವಂತೆ ಬೇಡುತ್ತಿದ್ದಾರೆ. ನಿತ್ಯ ಸಾವಿರಾರು ಜನರಿಗೆ ಕೋವಿಡ್‌ ದೃಢಪಡುತ್ತಿದ್ದು ಬಹುತೇಕ ಮಂದಿಗೆ ಆಮ್ಲಜನಕದ ಅವಶ್ಯಕತೆ ಕಂಡು ಬರುತ್ತಿದೆ. ಜಿಲ್ಲಾಸ್ಪತ್ರೆ ವೈದ್ಯರು ಬೇರೆಬೇರೆ ತಾಲ್ಲೂಕು ಆಸ್ಪತ್ರೆಗಳಿಗೆ ರೋಗಿಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ.

ತಾಲ್ಲೂಕು ಆಸ್ಪತ್ರೆಗಳಲ್ಲೂ ಇದೇ ಸ್ಥಿತಿ ಇದ್ದು ಮುಂದೆ ರೋಗಿಗಳನ್ನು ಕಳುಹಿಸುವುದು ಎಲ್ಲಿಗೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಈಗಾಗಲೇ 6 ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಆ ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಾಗದ ಕಾರಣ ಆ ಪ್ರಕ್ರಿಯೆಗೆ ತಡೆ ಬಿದ್ದಿದೆ. ಸಮಪರ್ಕವಾಗಿ ಆಮ್ಲಜನಕ ಪೂರೈಕೆಯಾದ ನಂತರವಷ್ಟೇ ರೋಗಿಗಳನ್ನು ದಾಖಲು ಮಾಡಲು ನಿರ್ಧಾರ ಮಾಡಲಾಗಿದೆ.

‘ಸದ್ಯ ಆದಿಚುಂಚನಗಿರಿ ಆಸ್ಪತ್ರೆ, ಮಾದೇಗೌಡ ಆಸ್ಪತ್ರೆ, ಎಂಎಂಎಚ್‌ನಲ್ಲಿ ರೋಗಿಗಳನ್ನು ದಾಖಲಿಸಲಾಗಿದೆ. ಆದರೆ ಅಲ್ಲಿಗೂ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ಆಮ್ಲಜನಕ ಅವಶ್ಯಕತೆಯುಳ್ಳ ರೋಗಿಗಳನ್ನು ದಾಖಲು ಮಾಡಲು ತೀರಾ ಸಮಸ್ಯೆಯಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಳಸಿಕೊಳ್ಳೋಣವೆಂದರೆ ಅಲ್ಲಿಗೂ ಆಮ್ಲಜನಕ ಪೂರೈಕೆ ಇಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಸರತಿ ಸಾಲು: ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ ಇಲ್ಲದಿದ್ದರೂ ರೋಗಿಗಳನ್ನು ದಾಖಲು ಮಾಡಿಕೊಳ್ಳುವಂತೆ ಜನರು ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ತೀವ್ರ ರೋಗ ಲಕ್ಷಣಗಳಿವೆ, ಉಸಿರಾಟ ತೊಂದರೆಯಾಗಿದೆ, ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿದೆ ಎಂದು ಹೇಳುತ್ತಾ ಜಿಲ್ಲಾಸ್ಪತ್ರೆ ಸೇರಲು ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅವರಿಗೆ ಎಲ್ಲಿ ಜಾಗ ಹೊಂದಿಸುವುದು ಎಂಬ ಪ್ರಶ್ನೆ ವೈದ್ಯರನ್ನು ಕಾಡುತ್ತಿದೆ.

ಗುಣಮುಖರಾಗುವವರ ಸಂಖ್ಯೆ ಕಡಿಮೆ ಇರುವ ಕಾರಣ ಹೊಸದಾಗಿ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತುರ್ತು ಅಗತ್ಯವುಳ್ಳ ರೋಗಿಗಳನ್ನು  ಮಾತ್ರ ಬೇರೆ ತಾಲ್ಲೂಕು ಆಸ್ಪತ್ರೆ, ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಕೆಲವರು ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ಜೊತೆ ಜಗಳಕ್ಕಿಳಿಯುತ್ತಿದ್ದು ಆಸ್ಪತ್ರೆ ಆವರಣ ಗೊಂದಲದ ಗೂಡಾಗುತ್ತಿದೆ. ಇನ್ನೊಂದೆಡೆ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಳವಾಗುತ್ತಿರುವ ಕಾರಣ ಆಸ್ಪತ್ರೆ ಆವರಣದಲ್ಲಿ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸೋಂಕಿತರು ಬಿಡುಗಡೆಯಾದ ನಂತರ ಮಿಮ್ಸ್‌ನಲ್ಲಿ ಖಾಲಿಯಾಗುವ ಹಾಸಿಗೆಗೆ ದಾಖಲಾಗಲು ನೂರಾರು ಜನರು ಹರಸಾಹಸ ಪಡುತ್ತಿದ್ದಾರೆ. ನಿಗದಿತ ರೋಗಿಯೊಬ್ಬರು ಬಿಡುಗಡೆಯಾಗುತ್ತಿದ್ದು ಆ ಹಾಸಿಗೆ ತಮಗೇ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ಉದ್ದದ ಸಾಲಿನಲ್ಲಿ ನಿಂತು ದಿನಗಟ್ಟಲೇ ಕಾಯುತ್ತಿದ್ದಾರೆ.

ಕೋವಿಡ್‌ ಸೋಂಕಿತರಾಗಿರುವ ಭಯ ಒಂದೆಡೆ ಇದ್ದರೆ, ಎಷ್ಟು ಹೊತ್ತಿಗೆ ನಮ್ಮನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಾರೋ ಎಂಬ ಕಾತರ ಜನರನ್ನು ಕಾಡುತ್ತಿದೆ. ತಾಮುಂದು ನಾಮುಂದು ಎಂದು ಒಬ್ಬರಿಗೊಬ್ಬರೂ ಅಂಟಿಕೊಂಡೇ ನಿಂತಿರುತ್ತಾರೆ.

‘ವಯಸ್ಸಾದವರು, ತೀವ್ರ ಉಸಿರಾಟ ಸಮಸ್ಯೆ, ರೋಗ ಲಕ್ಷಣ ಉಲ್ಬಣಿಸಿರುವವರು ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ದಾಖಲಾಗಬೇಕಿದೆ. ದೇಹಸ್ಥಿತಿ ಬಿಗಡಾಯಿಸಿರುವವರಿಗಾಗಿ ಪ್ರತ್ಯೇಕ ಸಾಲು ಮಾಡಿ ಅವರ ದಾಖಲಾತಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಗಂಟೆಗಟ್ಟೆಲೆ ಕಾಯಬೇಕಿದ್ದು, ಕೂಡಲೇ ಶಾಮಿಯಾನ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಬೇಕು’ ಎಂದು ಸೋಂಕಿತರೊಬ್ಬರು ಒತ್ತಾಯಿಸಿದರು.

****

ಹೊಸ ವಾರ್ಡ್‌: ಆಮ್ಲಜನಕ ಪೂರೈಕೆ ಇಲ್ಲ

ಮಿಮ್ಸ್‌ನಲ್ಲಿ ಹೆಚ್ಚುವರಿಯಾಗಿ 150 ಹಾಸಿಗೆ ಸೌಲಭ್ಯದ ವಾರ್ಡ್‌ ಸಿದ್ಧಗೊಂಡಿದೆ. ಆದರೆ ಅಲ್ಲಿಗೆ ಸಾಕಾಗುವಷ್ಟು ಆಮ್ಲಜನಕ ಪೂರೈಕೆಯಾಗದ ಕಾರಣ ಆ ವಾರ್ಡ್‌ನಲ್ಲಿ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

‘ಜಿಲ್ಲಾಸ್ಪತ್ರೆಗೆ ಇನ್ನೊಂದು ದ್ರವರೂಪದ ಆಮ್ಲಜನಕ ಘಟಕ ಬೇಕು. ಅದು ಸಾಧ್ಯವಾದರೆ ಮಾತ್ರ ಹೆಚ್ಚುವರಿ ವಾರ್ಡ್‌ಗೆ ರೋಗಿಗಳನ್ನು ದಾಖಲು ಮಾಡಲು ಸಾಧ್ಯವಾಗುತ್ತದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು