ಶನಿವಾರ, ಫೆಬ್ರವರಿ 27, 2021
31 °C
ಮಹಾರಾಷ್ಟ್ರದಿಂದ ಐದು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ನಂತರ ಗಂಭೀರ ಪರಿಗಣನೆ

ಮಂಡ್ಯ | ಕೋವಿಡ್‌–19: ಮುಂಬೈ ವಲಸಿಗರತ್ತ ಜಿಲ್ಲಾಡಳಿತದ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧೆಡೆಯಿಂದ ಬಂದ ವಲಸಿಗರನ್ನು ಈಚೆಗೆ ಬೆಳ್ಳೂರು ಕ್ರಾಸ್‌ ಚೆಕ್‌ಪೋಸ್ಟ್‌ನಲ್ಲಿ ಥರ್ಮಲ್‌ ಸ್ಕ್ಯಾನ್‌ ಮಾಡುತ್ತಿರುವುದು (ಸಂಗ್ರಹ ಚಿತ್ರ)

ಮಂಡ್ಯ: ಇಲ್ಲಿಯವರೆಗೂ ಮಳವಳ್ಳಿ ಪಟ್ಟಣದಲ್ಲಿ ಕಾಣಿಸಿಕೊಂಡ ಕೋವಿಡ್‌ – 19 ಪ್ರಕರಣಗಳತ್ತ ಜಿಲ್ಲಾಡಳಿತ ತನ್ನ ಸಂಪೂರ್ಣ ಗಮನ ಕೇಂದ್ರೀಕರಿಸಿತ್ತು. ಆದರೆ ಈಗ ಮುಂಬೈನಿಂದ ಬಂದವರಿಂದ ಹೆಚ್ಚು ಅಪಾಯ ಸೃಷ್ಟಿಯಾಗಿದ್ದು ಜಿಲ್ಲಾಡಳಿತದ ಚಿತ್ತ ಮುಂಬೈ ವಲಸಿಗರತ್ತ ನೆಟ್ಟಿದೆ.

ದೆಹಲಿ ಮೂಲದ ಧರ್ಮಗುರುಗಳು ಮಳವಳ್ಳಿ, ನಾಗಮಂಗಲ ಪ್ರದೇಶದಲ್ಲಿ ನಡೆಸಿದ ಪ್ರವಾಸ, ದೆಹಲಿಯ ತಬ್ಲಿಗಿ ಜಮಾತೆ ಧರ್ಮಸಭೆಯಲ್ಲಿ ಪಾಲ್ಗೊಂಡ ಮಳವಳ್ಳಿಯ ಜನರಿಂದ ಅಲ್ಲಿಯ 15 ಜನರಿಗೆ ಕೋವಿಡ್‌–19 ದೃಢಪಟ್ಟಿದೆ. ನಂಜನಗೂಡು ಔಷಧಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಔಷಧಿ ಕಂಪನಿಗಿಂತಲೂ ಮಳವಳ್ಳಿಯ ತಬ್ಲಿಗಿ ನಂಟಿನ ಕುರಿತಂತೆ ಅಧಿಕಾರಿಗಳು ಹೆಚ್ಚು ತಲೆಕೆಡಿಸಿಕೊಂಡಿದ್ದರು. ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವಲ್ಲಿ ಸವಾಲು ಎದುರಾಗಿತ್ತು.

ಲಾಕ್‌ಡೌನ್‌ ಘೋಷಣೆಯಾದ ನಂತರ ಮುಂಬೈನಿಂದ ಬರುತ್ತಿದ್ದ ವಲಸಿಗರತ್ತ ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಮುಂಬೈಗೆ ತೆರಳಿದವರು ಸಿಕ್ಕಸಿಕ್ಕ ವಾಹನಗಳು, ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿ, ಟ್ರಕ್‌ಗಳಲ್ಲಿ ರಹಸ್ಯವಾಗಿ ಬರುತ್ತಿರುವ ವಿಚಾರದ ಬಗ್ಗೆಯೂ ಗಮನ ಹರಿಸಲಿಲ್ಲ. ಜಿಲ್ಲೆಯ ಸುತ್ತಲೂ ಇರುವ ಪೊಲೀಸ್‌ ಚೆಕ್‌ ಪೋಸ್ಟ್‌ ಸಿಬ್ಬಂದಿ ಕೂಡ ಈ ಬಗ್ಗೆ ಎಚ್ಚರಿಕೆ ನೀಡಲಿಲ್ಲ.

ಮುಂಬೈನಲ್ಲಿ ಹೋಟೆಲ್‌ ನಡೆಸುವ ನಾಗಮಂಗಲ ತಾಲ್ಲೂಕು ಸಾತೇನಹಳ್ಳಿ ಗ್ರಾಮದ ವ್ಯಕ್ತಿ (505ನೇ ರೋಗಿ) ಖರ್ಜೂರ ಸಾಗಿಸುವ ಕ್ಯಾಂಟರ್‌ನಲ್ಲಿ ಬಂದು ಕೋವಿಡ್‌–19 ದೃಢಪಟ್ಟ ನಂತರವಷ್ಟೇ ಜಿಲ್ಲಾಡಳಿತದ ಗಮನ ಮುಂಬೈ ವಲಸಿಗರತ್ತ ಹರಿಯಿತು. ನಂತರ ಮುಂಬೈನಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ತಂದ ನಾಲ್ವರಿಗೆ ರೋಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಬೈ ವಲಸಿಗರನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ.

ಗೊಂದಲ: ಕೆ.ಆರ್‌.ಪೇಟೆ, ನಾಗಮಂಗಲ, ಪಾಂಡವಪುರ ತಾಲ್ಲೂಕುಗಳಲ್ಲಿ ಹೆಚ್ಚಿನ ಜನರು ಮುಂಬೈನಿಂದ ಬಂದಿದ್ದಾರೆ. ಹಿಂದೆ ಜನರಿಲ್ಲದೇ ಬಿಕೋ ಎನ್ನುತ್ತಿದ್ದ ಹಳ್ಳಿಗಳು ಈಗ ಜನರಿಂದ ತುಂಬಿ ತುಳುಕುತ್ತಿವೆ. ವಲಸಿಗರು ಮುಂಬೈನಿಂದ ಮಾತ್ರ ಬಂದಿಲ್ಲ. ಬೆಂಗಳೂರು, ಮೈಸೂರು ಹಾಗೂ ಇತರ ನಗರಗಳಿಂದಲೂ ತಮ್ಮ  ಹಳ್ಳಿಗಳಿಗೆ ಬಂದಿದ್ದಾರೆ.

ಆಯಾ ತಾಲ್ಲೂಕು ಆಡಳಿತ ಮುಂಬೈನಿಂದ ಬಂದವರು ಹಾಗೂ ಬೆಂಗಳೂರಿನಿಂದ ಬಂದ ವಲಸಿಗರನ್ನು ಪ್ರತ್ಯೇಕ ಮಾಡಿಲ್ಲ. ಆಶಾ ಕಾರ್ಯಕರ್ತೆಯರು ಎಲ್ಲಾ ವಲಸಿಗರನ್ನು ಒಟ್ಟಾಗಿ ಗುರುತಿಸಿ ಕೈಗೆ ಸೀಲ್‌ ಹಾಕಿ ಹೋಂ ಕ್ವಾರಂಟೈನ್‌ ಮಾಡಿದ್ದಾರೆ. ಇಲ್ಲಿಯವರೆಗೂ ಎಷ್ಟು ಮಂದಿ ಮುಂಬೈನಿಂದ ಬಂದಿದ್ದಾರೆ, ಎಷ್ಟು ಜನರು ಬೆಂಗಳೂರಿನಿಂದ ಬಂದಿದ್ದಾರೆ ಎಂಬ ಬಗ್ಗೆ ನಿಖರವಾದ ಸಮೀಕ್ಷೆ ನಡೆದಿಲ್ಲ.

‘ಬೆಂಗಳೂರಿನಿಂದ ಬಂದವರಿಂದ ಹೆಚ್ಚು ಅಪಾಯವಿಲ್ಲ. ಅವರು ಹೆಚ್ಚೆದಂರೆ 200 ಕಿ.ಮೀ ದೂರದಿಂದ ಬಂದಿದ್ದಾರೆ. ಆದರೆ ಮುಂಬೈನಿಂದ ಬಂದವರು ಸಾವಿರಾರು ಕಿ.ಮೀ ಕ್ರಮಿಸಿದ್ದಾರೆ. ಹತ್ತಾರು ವಾಹನಗಳನ್ನು ಬದಲಿಸಿದ್ದಾರೆ. ಹೀಗಾಗಿ ಅವರಿಂದ ಹೆಚ್ಚು ಅಪಾಯವಿದೆ. ಹೀಗಾಗಿ ಮುಂಬೈನಿಂದ ಬಂದ ವಲಸಿಗರನ್ನು ಗುರುತಿಸಿ ಪ್ರತ್ಯೇಕವಾಗಿ ಕ್ವಾರಂಟೈನ್‌ ಮಾಡಬೇಕು’ ಎಂದು ಕೆ.ಆರ್‌.ಪೇಟೆ ನಿವಾಸಿ ಕೃಷ್ಣೇಗೌಡ ಒತ್ತಾಯಿಸಿದರು.

ಕೋವಿಡ್‌– 19 ವಿವರ

ದೃಢಪಟ್ಟ ಪ್ರಕರಣ: 26

ಮಾದರಿ ಸಂಗ್ರಹ: 3,604

ನೆಗೆಟಿವ್‌: 3,019

ಫಲಿತಾಂಶ ನಿರೀಕ್ಷೆ: 559

ಗುಣಮುಖರಾದವರು: 07

ಬಿಡುಗಡೆಯಾದವರು: 04

ಆಸ್ಪತ್ರೆ ಪ್ರತ್ಯೇಕ ವಾರ್ಡ್‌‌: 22

ಹೋಂ ಕ್ವಾರಂಟೈನ್‌: 3,466

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು