ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯ: ಮಂಡ್ಯದಲ್ಲಿ ನಿತ್ಯ 50 ಟನ್ ಕಳಪೆ ಸಕ್ಕರೆ ಬಳಸಿ ಬೆಲ್ಲ ತಯಾರಿ

ಕನಿಷ್ಠ ಮಟ್ಟಕ್ಕೆ ಕುಸಿದ ಬೆಲ್ಲದ ಗುಣಮಟ್ಟ, ನಿಗಾ ವಹಿಸದ ಆಹಾರ ಸುರಕ್ಷತಾ ಅಧಿಕಾರಿಗಳು
Last Updated 31 ಜುಲೈ 2021, 3:08 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ವಿವಿಧೆಡೆ ಆಲೆಮನೆಗಳಲ್ಲಿ ಸಕ್ಕರೆ ಬಳಕೆ ಹೆಚ್ಚಾಗುತ್ತಿದ್ದು ಬೆಲ್ಲದ ಗುಣಮಟ್ಟ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಪ್ರತಿನಿತ್ಯ ಹೊರಜಿಲ್ಲೆ, ಹೊರರಾಜ್ಯಗಳಿಂದ ಬರುವ 50 ಟನ್‌ ಕಳಪೆ ಗುಣಮಟ್ಟದ ಸಕ್ಕರೆ ಬಳಸಿ ಬೆಲ್ಲ ತೆಗೆಯುತ್ತಿರುವ ವಿಷಯ ಆತಂಕಕಾರಿಯಾಗಿದೆ.

ನಾಲ್ಕು ತಿಂಗಳ ಹಿಂದಷ್ಟೇ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಆಲೆಮನೆಗಳಿಗೆ ದಾಳಿ ಮಾಡಿ ಕಳಪೆ ಬೆಲ್ಲ ಜಪ್ತಿ ಮಾಡಿದ್ದರು. ಕೆಲವು ಆಲೆಮನೆ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಆದರೆ ನಿಯಮಿತವಾಗಿ ಆಲೆಮನೆಗಳ ಮೇಲೆ ಅಧಿಕಾರಿಗಳು ನಿಗಾ ವಹಿಸದ ಕಾರಣ ಸಕ್ಕರೆ, ರಾಸಾಯನ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಸದ್ಯ ಜಿಲ್ಲೆಯಾದ್ಯಂತ 7 ಲಕ್ಷ ಟನ್‌ ಕಬ್ಬು ಕಟಾವಿಗೆ ಬಂದಿದ್ದು ಮುಚ್ಚಿದ್ದ ಆಲೆಮನೆಗಳು ತೆರೆಯುತ್ತಿವೆ. ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲ್ಲೂಕಿನಲ್ಲಿ 500ಕ್ಕೂ ಹೆಚ್ಚು ಆಲೆಮನೆಗಳು ಚಟುವಟಿಕೆ ನಡೆಸುತ್ತಿವೆ. ಹೊಳಪು ಹೊಂದಿರುವ ಬೆಲ್ಲ ತೆಗೆಯುವ ಸ್ಪರ್ಧೆಗೆ ಬಿದ್ದಿರುವ ಆಲೆಮನೆ ಮಾಲೀಕರು ನಿತ್ಯ ಅಪಾರ ಪ್ರಮಾಣದ ಸಕ್ಕರೆ, ರಾಸಾಯನಿಕ ಬಳಸಿ ಬೆಲ್ಲ ತೆಗೆಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಅವಧಿ ಮುಗಿದಿರುವ ಸಕ್ಕರೆಯನ್ನು ಕಡಿಮೆ ಬೆಲೆಗೆ ತರಿಸುತ್ತಾರೆ. ಶೀತದ ಅಂಶ ಜಾಸ್ತಿಯಾಗಿ, ಕೊಳಕಾಗಿ ಕಂದು ಬಣ್ಣಕ್ಕೆ ತಿರುಗಿರುವ ಸಕ್ಕರೆ ತಿನ್ನಲು ಅಯೋಗ್ಯವಾಗಿರುತ್ತಿದೆ. ಅಂತಹ ಸಕ್ಕರೆಯನ್ನು ತರಿಸಿ ಆಲೆಮನೆಗಳಲ್ಲಿ ರಾಸಾಯನಿಕದೊಂದಿಗೆ ಬಳಸಿ ಬೆಲ್ಲ ತೆಗೆಯಲಾಗುತ್ತಿದೆ. ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ಆಲೆಮನೆಗಳಲ್ಲಿ ಸಕ್ಕರೆ ಬಳಕೆ ವಿಪರೀತವಾಗಿದೆ ಎಂದು ಮೂಲಗಳು ತಿಳಿಸಿವೆ.

‘ಸಾಗಣೆ ವೆಚ್ಚ, ಜಿಎಸ್‌ಟಿ ಸೇರಿ ಕೇವಲ ₹ 25ಕ್ಕೆ ಕಳಪೆ ಹಾಗೂ ಅವಧಿ ಮುಗಿದಿರುವ ಸಕ್ಕರೆ ದೊರೆಯುತ್ತಿದೆ. ಧೂಳಿನಂತಿರುವ ಈ ಸಕ್ಕರೆಯನ್ನು ವರ್ತಕರು ತರಿಸಿಕೊಡುತ್ತಾರೆ. ಆನ್‌ಲೈನ್‌ನಲ್ಲೂ ದೊರೆಯುತ್ತದೆ. ಮಂಡ್ಯ ತಾಲ್ಲೂಕಿನಲ್ಲಿ ಕದ್ದು ಮುಚ್ಚಿ ಸಕ್ಕರೆ ಬೆರೆಸುತ್ತಾರೆ. ಆದರೆ ಪಾಂಡವಪುರ, ಶ್ರೀರಂಗಪಟ್ಟಣ ತಾಲ್ಲೂಕಿನ ಆಲೆಮನೆಗಳಲ್ಲಿ ಯಾವುದೇ ಭಯ ಇಲ್ಲದೇ ಸಕ್ಕರೆ ಬಳಸುತ್ತಿದ್ದಾರೆ’ ಎಂದು ರಾಸಾಯನಿಕ ಮುಕ್ತ ಬೆಲ್ಲ ತಯಾರಿಸುವ ಕಬ್ಬಿನ ಕ್ರಷರ್‌ ಮಾಲೀಕರೊಬ್ಬರು ತಿಳಿಸಿದರು.

ಬೆಳಗಾವಿ ಹಾಗೂ ಮಹಾತಾಷ್ಟ್ರದಿಂದ ದಿನಕ್ಕೆ 10 ಲಾರಿಗಳಲ್ಲಿ ಸಕ್ಕರೆ ಸರಬರಾಜಾಗುತ್ತಿದ್ದು ಸ್ಥಳೀಯ ಹಂತದಲ್ಲಿ ಆಲೆಮನೆ ಮಾಲೀಕರು ಖರೀದಿ ಮಾಡುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿರುವ ವರ್ತಕರೇ ಆಲೆಮನೆ ಮಾಲೀಕರಿಗೆ ಸಕ್ಕರೆ ತರಿಸಿ ಮಾರುತ್ತಿದ್ದಾರೆ. ಬೆಲ್ಲ ಕೊಂಡೊಯ್ಯುವ ಲಾರಿಗಳೇ ಸಕ್ಕರೆ ತುಂಬಿಕೊಂಡು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.

ಚಕ್ಕೆ ಬೆಲ್ಲ ಬಿಸ್ಕತ್‌ ಕಾರ್ಖಾನೆಗೆ: ಸಕ್ಕರೆ ಜೊತೆಗೆ ಸಫೋಲೈಟ್‌ ರಾಸಾಯನಿಕ ಬೆರೆಸಿ ಬೆಲ್ಲ ತಯಾರಿಸುತ್ತಿದ್ದು ಬಣ್ಣದ ಅಚ್ಚು, ಕುರಿಕಾಲಚ್ಚು ಬೆಲ್ಲ ಹೆಚ್ಚಾಗಿ ತಯಾರಿಸುತ್ತಿದ್ದಾರೆ. ಇದರ ಜೊತೆಗೆ ಪಾಂಡವಪುರ ತಾಲ್ಲೂಕಿನಲ್ಲಿ ಚಕ್ಕೆ ಬೆಲ್ಲೆ ತಯಾರಿಸುತ್ತಿದ್ದು ಅದನ್ನು ಬಿಸ್ಕತ್‌ ಸೇರಿ ಸಿಹಿ ತಿನಿಸು ತಯಾರಿಸುವ ಕಾರ್ಖಾನೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಆಲೆಮನೆ ಮಾಲೀಕರೇ ತಿಳಿಸುತ್ತಾರೆ.

‘ಚಕ್ಕೆ ಬೆಲ್ಲಕ್ಕೆ ಸಕ್ಕರೆ ಹೆಚ್ಚಾಗಿ ಬೆರೆಸುವ ಕಾರಣ ಸಿಹಿಯ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ ಬಿಸ್ಕತ್‌ ಕಾರ್ಖಾನೆಗಳಿಂದ ಈ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ’ ಎಂದು ಪಾಂಡವಪುರ ತಾಲ್ಲೂಕು ಬ್ಯಾಡರಹಳ್ಳಿಯ ಆಲೆಮನೆ ಮಾಲೀಕರೊಬ್ಬರು ತಿಳಿಸಿದರು.

ಸಕ್ಕರೆ ಬೆರೆಸಿದರೆ ಅದು ಬೆಲ್ಲವೇ ಅಲ್ಲ
‘ಬೆಲ್ಲ ತಯಾರಿಕೆಯಲ್ಲಿ ಸಕ್ಕರೆ ಬಳಸಿದರೆ ಅದು ಬೆಲ್ಲವಾಗುವುದಿಲ್ಲ, ಬೇರೆ ಯಾವುದೋ ಸಿಹಿ ಪದಾರ್ಥ ಎನ್ನಬೇಕಷ್ಟೇ. ಕಬ್ಬಿನ ಹಾಲಿನಿಂದ ತಯಾರಿಸಿದ ಬೆಲ್ಲದಲ್ಲಿ ಕಬ್ಬಿಣಾಂಶ, ಕ್ಯಾಲ್ಶಿಯಂ ಇರಬೇಕು. ಸಕ್ಕರೆ ಬೆರೆಸಿದರೆ ಬೆಲ್ಲದ ಪೋಷಕಾಂಶ ನಾಶವಾಗುತ್ತದೆ’ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಬೆಟ್ಟಸ್ವಾಮಿ ಹೇಳಿದರು.

‘ಸಕ್ಕರೆಯಿಂದ ತಯಾರಿಸಿದ ಬೆಲ್ಲ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಆಲೆಮನೆ ಮಾಲೀಕರಿಗೆ ಅರಿವು ಮೂಡಿಸುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT