ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೋಸಿಸ್‌ ನಾರಾಯಣಮೂರ್ತಿ ಓದಿದ ಶಾಲೆ ಶಿಥಿಲ

ಮಂಡ್ಯದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿವರೆಗೆ ಓದು; ದಾಖಲಾತಿ ಕಾಪಾಡಿಕೊಂಡು ಬಂದ ಸಿಬ್ಬಂದಿ
Last Updated 22 ಜನವರಿ 2021, 1:38 IST
ಅಕ್ಷರ ಗಾತ್ರ

ಮಂಡ್ಯ: ಇನ್ಫೋಸಿಸ್‌ ಕಂಪನಿ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಅವರು 1, 2 ಹಾಗೂ 3ನೇ ತರಗತಿ ಓದಿದ, ನಗರದ ಐತಿಹಾಸಿಕ ಸರ್ಕಾರಿ ಶಾಲಾ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದೆ. ಕೊಠಡಿಗಳ ಚಾವಣಿ ಸೋರುತ್ತಿದ್ದು ಮಕ್ಕಳು, ಸಿಬ್ಬಂದಿ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

1940ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಮಂಡ್ಯದ ಬಹುತೇಕ ರಾಜಕಾರಣಿಗಳೂ ಓದಿದ್ದಾರೆ. ಎಕ್ಸ್‌ಟೆನ್ಶನ್‌ (ವಿಸ್ತರಣಾ) ಮಿಡ್ಲ್‌ ಸ್ಕೂಲ್‌ ಎಂದೇ ಪ್ರಸಿದ್ಧಿ ಪಡೆದಿದ್ದ ಶಾಲೆ, ಈಗ ನಗರದ ಹೃದಯ ಭಾಗದಲ್ಲಿದೆ. 1954–55ನೇ ಶೈಕ್ಷಣಿಕ ವರ್ಷದಲ್ಲಿ ನಾರಾಯಣಮೂರ್ತಿ 1ನೇ ತರಗತಿಗೆ ದಾಖಲಾಗಿದ್ದಾರೆ. ಇದೇ ಶಾಲೆಯಲ್ಲಿ ಅವರ ಅಣ್ಣ ಎನ್‌.ಆರ್‌.ಶ್ರೀಧರಮೂರ್ತಿ 2ನೇ ತರಗತಿಗೆ ಸೇರಿದ್ದಾರೆ.

ಅವರ ದಾಖಲಾತಿ ವಿವರಗಳನ್ನು, ಇಂದಿಗೂ ಸಿಬ್ಬಂದಿ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. 1958ರಲ್ಲಿ ಅವರು ವರ್ಗಾವಣೆ ಪತ್ರ ಪಡೆದು ತೆರಳಿರುವ ವಿವರಗಳನ್ನು ದಾಖಲಾತಿಯಲ್ಲಿ ನಮೂದಿಸಲಾಗಿದೆ. ಇನ್‌ಸ್ಪೆಕ್ಟರ್‌ ಆಫ್‌ ಸ್ಕೂಲ್ಸ್‌ (ಐಒಎಸ್) ಆಗಿದ್ದ ನಾರಾಯಣಮೂರ್ತಿ ಅವರ ತಂದೆ ಎನ್‌.ರಾಮರಾವ್‌, ಮೂರು ವರ್ಷ ಮಂಡ್ಯದಲ್ಲಿದ್ದರು. ಆಗ ತಮ್ಮಿಬ್ಬರು ಮಕ್ಕಳನ್ನು ಇಲ್ಲಿಯ ಶಾಲೆಯಲ್ಲಿ ಓದಿಸಿದ್ದರು.

‘ಖಾಸಗಿ ವಾಹಿನಿಯ ‘ವೀಕೆಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮದಲ್ಲಿ ನಾರಾಯಣಮೂರ್ತಿ ಅವರ ಸಂದರ್ಶನ ಪ್ರಸಾರವಾದಾಗ ಅವರು ಓದಿದ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳನ್ನು ತೋರಿಸಿದ್ದರು. ಆದರೆ ಮಂಡ್ಯದಲ್ಲಿ ಓದಿದ ಶಾಲೆಯನ್ನು ತೋರಿಸಲಿಲ್ಲ’ ಎಂದು ಬೇಸರಪಟ್ಟುಕೊಳ್ಳುತ್ತಾರೆ ಇಲ್ಲಿಯ ಸಿಬ್ಬಂದಿ.

‘ನಾರಾಯಣಮೂರ್ತಿ ಅವರು ಮಂಡ್ಯದಲ್ಲಿ ಓದಿದ್ದಾರೆ ಎಂಬ ವಿಚಾರ ತಿಳಿದಿತ್ತು. ಆದರೆ ಎಕ್ಸ್‌ಟೆನ್ಶನ್‌ ಮಿಡ್ಲ್‌ ಸ್ಕೂಲ್‌ನಲ್ಲೇ ಓದಿದ್ದಾರೆ ಎಂಬ ವಿಚಾರ ಗೊತ್ತಿರಲಿಲ್ಲ. ನಾನೂ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪೂರೈಸಿದೆ’ ಎಂದು ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ ಹೇಳಿದರು.

ಕುಸಿದು ಬೀಳುತ್ತಿರುವ ಕಟ್ಟಡ: ಒಂದು ಕಾಲದಲ್ಲಿ 400ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದ ಶಾಲೆಯಲ್ಲಿ ಈಗ ಕೇವಲ 30 ಮಂದಿ ಮಕ್ಕಳಿದ್ದಾರೆ. ಮೂವರು ಶಿಕ್ಷಕರಿದ್ದಾರೆ. 17 ಕೊಠಡಿಗಳಲ್ಲಿ 3 ಮಾತ್ರ ಬಳಕೆಗೆ ಯೋಗ್ಯವಾಗಿವೆ. ಮಳೆ ಬಂದರೆ ಅವುಗಳ ಚಾವಣಿಯೂ ಸೋರುತ್ತದೆ. ರಂಗಮಂದಿರದ ಚಾವಣಿ ಕುಸಿಯುತ್ತಿದೆ.

ಶಾಲೆಯ ಆವರಣದಲ್ಲಿ 10 ತೆಂಗಿನಮರ, 1 ಬೇವಿನ ಮರ, ಅಶೋಕ ಮರ ಹಾಗೂ ಹೂವಿನ ಗಿಡಗಳ ಸುಂದರ ವಾತಾವರಣವಿದೆ. ಕಾಂಪೌಂಡ್‌ ಇಲ್ಲದ ಕಾರಣ ಶಾಲಾ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈಚೆಗೆ ಕಳ್ಳರು ಪ್ರಯೋಗಾಲಯಕ್ಕೆ ನುಗ್ಗಿ, ವಿಜ್ಞಾನ ಮಾದರಿ ಹಾಗೂ ಇತರ ಪರಿಕರಗಳನ್ನು ಹೊತ್ತೊಯ್ದಿದ್ದಾರೆ.

‘ನಾರಾಯಣಮೂರ್ತಿ ಅವರನ್ನು ಭೇಟಿ ಮಾಡಿ ಶಾಲೆಯ ಸ್ಥಿತಿ ಬಗ್ಗೆ ವಿವರಿಸಲು ಹಲವು ಸಂಘಸಂಸ್ಥೆಗಳು ಮಾಹಿತಿ ಪಡೆದಿವೆ. ಆದರೂ ಅವರನ್ನು ಇಲ್ಲಿಯವರೆಗೆ ಭೇಟಿಯಾಗಲು ಸಾಧ್ಯವಾಗಿಲ್ಲ. ನಾರಾಯಣ ಮೂರ್ತಿ ಅವರು ತಾವು ಶಿಕ್ಷಣ ಆರಂಭಿಸಿದ ಶಾಲೆಯ ಸ್ಥಿತಿಯನ್ನು ಕಂಡು ಸಹಾಯ ಮಾಡಿದರೆ, ಈ ಶಾಲೆಯನ್ನು ಮಂಡ್ಯ ಜಿಲ್ಲೆಯ ಮಾದರಿ ಶಾಲೆಯಾಗಿ ರೂಪಿಸಬಹುದು’ ಎನ್ನುತ್ತಾರೆ ಮುಖ್ಯಶಿಕ್ಷಕಿ ಎಂ.ಗಾಯತ್ರಿ.

ಫೌಂಡೇಷನ್‌ಗೆ ಮನವಿ

‘ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಎಲ್ಲಾ ಶಾಲೆಗಳ ವಿವರವನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಆದರೆ ಇಲ್ಲಿಯವರೆಗೂ ದುರಸ್ತಿ ಸಾಧ್ಯವಾಗಿಲ್ಲ. ಮಂಡ್ಯದ ಶಾಲೆಯಲ್ಲಿ ನಾರಾಯಣಮೂರ್ತಿ ಅವರು ಓದಿರುವ ಕಾರಣ
ಶಾಲಾ ಕಟ್ಟಡ ದುರಸ್ತಿಗೆ ಸಹಾಯ ಮಾಡುವಂತೆ ಇನ್ಫೋಸಿಸ್‌ ಫೌಂಡೇಷನ್‌ಗೆ ಮನವಿ ಮಾಡಲಾಗುವುದು’ ಎಂದು ಡಿಡಿಪಿಐ ಆರ್‌.ರಘುನಂದನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT