ಮಂಡ್ಯ: ಮುಂಗಾರು ಮಳೆ ಮತ್ತು ಗಾಳಿಯ ಅಬ್ಬರದಿಂದ ವಿದ್ಯುತ್ ಜಾಲಕ್ಕೆ ತೀವ್ರ ಹಾನಿಯಾಗಿದ್ದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಸೆಸ್ಕ್) ಬರೋಬ್ಬರಿ ₹17.88 ಕೋಟಿ ನಷ್ಟವಾಗಿದೆ.
ಸೆಸ್ಕ್ ವ್ಯಾಪ್ತಿಯ ಮೈಸೂರು– ₹3.80 ಕೋಟಿ, ಚಾಮರಾಜನಗರ– ₹1.07 ಕೋಟಿ, ಕೊಡಗು– ₹5.02 ಕೋಟಿ, ಮಂಡ್ಯ– ₹4.42 ಕೋಟಿ ಹಾಗೂ ಹಾಸನ– ₹3.54 ಕೋಟಿಯಷ್ಟು ನಷ್ಟವಾಗಿದೆ.
ಒಟ್ಟು 10,713 ಕಂಬಗಳು ಹಾಳಾಗಿದ್ದು, ₹14.89 ಕೋಟಿ ನಷ್ಟವಾಗಿದೆ. 265 ಪರಿವರ್ತಕಗಳು ಹಾಳಾಗಿದ್ದು, ಅಂದಾಜು ₹2.68 ಕೋಟಿ ನಷ್ಟವಾಗಿದೆ. ಭಾರಿ ಮಳೆ–ಗಾಳಿಗೆ ಸುಮಾರು 57 ಕಿ.ಮೀ.ನಷ್ಟು ತಂತಿಗಳು ಹಾಳಾಗಿದ್ದು ₹29 ಲಕ್ಷ ನಷ್ಟವಾಗಿದೆ.
ದುರಸ್ತಿಗೆ ಆದ್ಯತೆ: ‘ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲೆಂದೇ ಸಿಬ್ಬಂದಿಯು ಸುರಿಯುವ ಮಳೆಯನ್ನು ಲೆಕ್ಕಿಸದೆ ದುರಸ್ತಿ ಮಾಡಿದ್ದಾರೆ. ಚಾಮರಾಜನಗರ ಮತ್ತು ಕೊಡಗಿನ ಬೆಟ್ಟ–ಗುಡ್ಡಗಳಲ್ಲಿ, ಕಡಿದಾದ ಕಣಿವೆ ಪ್ರದೇಶಗಳಲ್ಲಿ ಹರಸಾಹಸಪಟ್ಟಿದ್ದಾರೆ’ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಜಿ. ತಿಳಿಸಿದರು.
ಮಂಡ್ಯದಲ್ಲಿ ₹19.23 ಕೋಟಿ ನಷ್ಟ: ‘ಮಂಡ್ಯ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಒಟ್ಟು ₹19.23 ಕೋಟಿ ನಷ್ಟವಾಗಿದೆ. 2019–20ರಲ್ಲಿ ₹93.75 ಲಕ್ಷ, 2020–21ರಲ್ಲಿ ₹2.20 ಕೋಟಿ, 2021–22ರಲ್ಲಿ ₹3.16 ಕೋಟಿ, 2022–23ರಲ್ಲಿ ₹6.08 ಕೋಟಿ ನಷ್ಟವಾಗಿದೆ. 5 ವರ್ಷಗಳಲ್ಲಿ 12,122 ಕಂಬಗಳು, 220 ಪರಿವರ್ತಕಗಳು ಹಾಗೂ 76.63 ಕಿ.ಮೀ.ನಷ್ಟು ವಿದ್ಯುತ್ ಮಾರ್ಗ ಹಾಳಾಗಿದೆ’ ಎಂದು ಸೆಸ್ಕ್ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾಧಿಕಾರಿಗಳಿಗೆ ಪತ್ರ: ಪ್ರತಿ ವರ್ಷ ಮಳೆ–ಗಾಳಿ ಮತ್ತು ನೈಸರ್ಗಿಕ ವಿಕೋಪದಿಂದ ಹಾನಿಯಾಗುವ ವಿದ್ಯುತ್ ಜಾಲವನ್ನು ಸರಿಪಡಿಸುವ ವೆಚ್ಚವನ್ನು ಭರಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೆಸ್ಕ್ ಪ್ರಧಾನ ವ್ಯವಸ್ಥಾಪಕರು ಪತ್ರ ಬರೆದಿದ್ದಾರೆ.
‘ಪ್ರತಿ ವರ್ಷ ಪತ್ರ ಬರೆದರೂ ಅನುದಾನ ದೊರೆಯುತ್ತಿಲ್ಲ’ ಎಂದು ಸೆಸ್ಕ್ ಎಂಜಿನಿಯರ್‌ಗಳು ತಿಳಿಸಿದರು.
ಉಪ ಮುಖ್ಯಮಂತ್ರಿಗೂ ಮನವಿ: ಸೆಸ್ಕ್ ಅಧ್ಯಕ್ಷ, ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು, ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಇದೇ ಮನವಿ ಮಾಡಿದ್ದರು. ಕ್ರಮ ಕೈಗೊಳ್ಳುವ ಬಗ್ಗೆ ಡಿಸಿಎಂ ಭರವಸೆ ನೀಡಿದ್ದರು.
ಎನ್‌ಡಿಆರ್‌ಎಫ್‌ನಿಂದ ಹಣ ಬಿಡುಗಡೆಗೆ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮೈಸೂರು ಡಿಸಿ ₹50 ಲಕ್ಷ ಕೊಟ್ಟಿದ್ದಾರೆ. ಉಳಿದ ಜಿಲ್ಲೆಗಳಿಂದ ಹಣ ಬಂದಿಲ್ಲ– ಶೀಲಾ ಜಿ ವ್ಯವಸ್ಥಾಪಕ ನಿರ್ದೇಶಕರು ಸೆಸ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.