ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಕ್ಷೀಣಿಸಿದ ಕಾವೇರಿ ನೀರು ‘ಕನಕನ ಬಂಡೆ’ ದರ್ಶನ!

ತೆಪ್ಪದಲ್ಲಿ ತೆರಳಿ ಬಂಡೆ ಸ್ಪರ್ಶಿಸಿ ಪುಳಕಿತಗೊಂಡ ಜನರು
ಗಣಂಗೂರು ನಂಜೇಗೌಡ
Published 28 ಏಪ್ರಿಲ್ 2024, 5:46 IST
Last Updated 28 ಏಪ್ರಿಲ್ 2024, 5:46 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕ್ಷೀಣಿಸಿದ್ದು, ತಾಲ್ಲೂಕಿನ ಮಹದೇವಪುರ ಬಳಿ ಕಾವೇರಿ ನದಿಯ ಮಧ್ಯೆ ದಾಸ ಶ್ರೇಷ್ಠ ಕನಕದಾಸರು ಕುಳಿತು ಧ್ಯಾನ ಮಾಡಿದರು ಎನ್ನಲಾದ ಬಂಡೆ ಗೋಚರಿಸುತ್ತಿದೆ.

ಮಹದೇವಪುರದ ಪೂರ್ವ ದಿಕ್ಕಿನಲ್ಲಿ, ನದಿಯ ಮಧ್ಯೆ ಇರುವ ಕನಕನ ಬಂಡೆ ಮೂರು ದಿನಗಳ ಈಚೆಗೆ ಸಂಪೂರ್ಣ ಗೋಚರಿಸುತ್ತಿದೆ. ಸ್ಥಳೀಯರು ನದಿಯ ದಡದಿಂದ 100 ಮೀಟರ್‌ ದೂರದಲ್ಲಿರುವ ಕನಕನ ಬಂಡೆಯ ದರ್ಶನ ಪಡೆಯುತ್ತಿದ್ದಾರೆ. ಕೆಲವರು ಫೋಟೊ ಕ್ಲಿಕ್ಕಿಸುತ್ತಿದ್ದರೆ ಮತ್ತೆ ಕೆಲವರು ತೆಪ್ಪದಲ್ಲಿ ತೆರಳಿ ಬಂಡೆಯನ್ನು ಸ್ಪರ್ಶಿಸಿ ಪುಳಕಿತರಾಗುತ್ತಿದ್ದಾರೆ. ಕನಕದಾಸರು 16ನೇ ಶತಮಾನದಲ್ಲಿ ಯಾತ್ರಾರ್ಥಿಯಾಗಿ ಇತ್ತ ಬಂದಾಗ ಇದೇ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡಿದ್ದರು ಎಂಬ ಗಾಢ ನಂಬಿಕೆ ಈ ಭಾಗದ ಜನರಲ್ಲಿದೆ.

ಶ್ರೀರಂಗಪಟ್ಟಣದ ಆದಿ ರಂಗನ ದರ್ಶನ ಪಡೆದು ಶಿವನ ಸಮುದ್ರದ ಬಳಿಯ ಮಧ್ಯ ರಂಗ ಮತ್ತು ತಮಿಳುನಾಡಿನ ಅಂತ್ಯ ರಂಗನ ದರ್ಶನಕ್ಕೆ ತೆರಳುವ ಮಾರ್ಗದಲ್ಲಿ ಕನಕದಾಸರು ಮಹದೇವಪುರದಲ್ಲಿ ಕೆಲಕಾಲ ತಂಗಿದ್ದರು. ಶ್ರೀರಂಗನಾಥನನ್ನು ಕಂಡಾಗ ‘ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ ನಿನ್ನನೆಬ್ಬಿಸುವವರೊಬ್ಬರನೂ ಕಾಣೆ ರಂಗನಾಥ......’ ಎಂದು ಅವರು ಹಾಡಿರುವ ಕೀರ್ತನೆ ಪ್ರಸಿದ್ಧವಾಗಿದೆ.

‘ಮಹದೇವರಪುರದಿಂದ ಮಧ್ಯರಂಗನ ದರ್ಶನ ತೆರಳಲು ಕನಕದಾಸರು ಕಾವೇರಿ ನದಿಯನ್ನು ದಾಟಲು ಮುಂದಾದರಂತೆ. ಶೂದ್ರ ಕುಲದ ಕನಕನನ್ನು ಅಂಬಿಗನು ದೋಣಿಗೆ ಹತ್ತಿಸಿಕೊಳ್ಳಲು ನಿರಾಕರಿಸಿದನಂತೆ. ಬಾಳೆ ಎಲೆಯ ಮೇಲೆ ತೇಲುತ್ತಾ, ಹರಿ ನಾಮ ಸ್ಮರಣೆ ಮಾಡುತ್ತಾ ಕನಕದಾಸರು ನದಿಯನ್ನು ದಾಟಿದರಂತೆ. ನದಿಯನ್ನು ದಾಟುವಾಗ ಮಧ್ಯೆ ಸಿಕ್ಕಿದ ಬಂಡೆಯ ಮೇಲೆ ಕುಳಿತು ಬಟ್ಟೆ ಶುಚಿಗೊಳಿಸಿಕೊಂಡು, ಕೆಲಕಾಲ ಅಲ್ಲೇ ಧ್ಯಾನ ಮಾಡಿದರಂತೆ....’– ಎಂಬ ದೃಷ್ಟಾಂತ ಈ ಭಾಗದಲ್ಲಿ ಜನಜನಿತವಾಗಿದೆ.

ಗುಡಿ ಕಟ್ಟಿದ ಅಂಬಿಗ: ಕನಕದಾಸರು ಬಾಳೆ ಎಲೆ ಮೇಲೆ ತೇಲುತ್ತಾ ನದಿಯನ್ನು ದಾಟಿದ ದೃಶ್ಯವನ್ನು ಕಂಡ ಅಂಬಿಗನಿಗೆ ಅವರ ಬಗ್ಗೆ ಭಕ್ತಿ ಉಂಟಾಗಿದೆ ಗುಡಿ ಕಟ್ಟಿದ ಎಂದು ಸ್ಥಳೀಯರು ಹೇಳುತ್ತಾರೆ. ಅದಕ್ಕೆ ಪುಷ್ಠಿ ನೀಡುವಂತೆ ಕನಕನ ಬಂಡೆ ಸಮೀಪ, ನದಿಯ ದಡದಲ್ಲಿ ಕನಕನ ಗುಡಿ ಈಗಲೂ ಇದೆ. ‘ಪ್ರತಿ ಶನಿವಾರ ಮತ್ತು ವಿಶೇಷ ಸಂದರ್ಭಗಳಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತವೆ’ ಎಂದು ಕನಕನ ಗುಡಿಯ ಅರ್ಚಕ ಬೋರಯ್ಯ ಹೇಳುತ್ತಾರೆ.

ಅಭಿವೃದ್ಧಿಗೆ ಆಗ್ರಹ: ಕನಕನ ಬಂಡೆ ಪ್ರದೇಶವನ್ನು ಕೂಡಲ ಸಂಗಮ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ಕೂಗು ದಶಕದಿಂದಲೂ ಕೇಳಿ ಬರುತ್ತಿದೆ. ಸ್ಥಳೀಯರು ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ.

‘ಧಾರ್ಮಿಕ ಮುಖಂಡರು, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್‌ ಇಲ್ಲಿಗೆ ಭೇಟಿ ನೀಡಿ ಹೋಗಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಅಭಿವೃದ್ಧಿ ಕಾರ್ಯಗಳು ಯಾವುದೂ ನಡೆಯುತ್ತಿಲ್ಲ’ ಎಂದು ಸ್ಥಳೀಯ ಮುಖಂಡರಾದ ಜವರೇಗೌಡ, ಸುರೇಶ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT