ಮಂಡ್ಯ: ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಮಿಮ್ಸ್) ಔಷಧ ಮುಖ್ಯ ಉಗ್ರಾಣದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಸುಮಾರು ₹80 ಲಕ್ಷ ಮೌಲ್ಯದ, ಅವಧಿ ಮೀರಿದ ಔಷಧಗಳನ್ನು ಪತ್ತೆ ಹಚ್ಚಿದ್ದಾರೆ.
ಲೋಕಾಯುಕ್ತ ಎಸ್ಪಿ ಸುರೇಶ್ ನೇತೃತ್ವದಲ್ಲಿ 20 ಅಧಿಕಾರಿಗಳ ತಂಡ, ಮಂಗಳವಾರ ಬೆಳಿಗ್ಗೆ 11ರಿಂದ ಬುಧವಾರ ಬೆಳಿಗ್ಗೆ 11ರವರೆಗೆ ನಿರಂತರವಾಗಿ 24 ಗಂಟೆ ಕಾರ್ಯಾಚರಣೆ ನಡೆಸಿದೆ. ಕೇಶವಮೂರ್ತಿ ಎಂಬುವರು ಸಲ್ಲಿಸಿದ ದೂರನ್ನು ಆಧರಿಸಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ದಾಳಿ ವೇಳೆ ₹40 ಲಕ್ಷ ಮೌಲ್ಯದ ರೆಮ್ಡಿಸೀವರ್ (ಕೋವಿಡ್ ಸೋಂಕಿತರಿಗೆ ನೀಡುವ ಔಷಧ) ಪತ್ತೆಯಾಗಿದೆ. 2015, 2016, 2017ರಲ್ಲಿ ಖರೀದಿಸಿದ ಔಷಧಗಳು ಅವಧಿ ಮೀರಿದ್ದರೂ ವಿಲೇವಾರಿ ಮಾಡದೇ ದಾಸ್ತಾನು ಮಾಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ವಿವಿಧ ಖಾಸಗಿ ಕಂಪನಿಗಳ ಅವಧಿ ಮೀರಿದ ಲಕ್ಷಾಂತರ ಮೌಲ್ಯದ ಔಷಧಗಳು ಪತ್ತೆಯಾಗಿವೆ.
2016ರಲ್ಲೂ ಪ್ರಕರಣ:
‘2016-17ರಲ್ಲೂ ₹5 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧ ಶೇಖರಿಸಿದ್ದರಿಂದ, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಲೂ ಅದೇ ರೀತಿ ಔಷಧಗಳು ಪತ್ತೆಯಾಗಿರುವುದು ‘ಮೆಡಿಕಲ್ ಮಾಫಿಯಾ’ದ ಕರಾಳ ಮುಖವನ್ನು ಬಯಲು ಮಾಡಿದೆ’ ಎಂದು ಸಾರ್ವಜನಿಕರು ದೂರಿದ್ದಾರೆ.
‘ಅವಧಿ ಮೀರಿದ ಔಷಧಗಳನ್ನು ಸಂಬಂಧಪಟ್ಟ ಕಂಪನಿಗಳಿಗೆ ವಾಪಸ್ ಕಳುಹಿಸಿ, ಬದಲಿ ಔಷಧಗಳನ್ನು ಪಡೆಯಬೇಕು ಎಂಬ ನಿಯಮವಿದೆ. ಅದಕ್ಕಾಗಿಯೇ ‘ಡ್ರಗ್ ಡಿಸ್‌ಪೋಸಲ್ ಕಮಿಟಿ’ ಇದೆ. ಆದರೆ, ಔಷಧ ಪೂರೈಕೆದಾರರು ಮತ್ತು ಮಿಮ್ಸ್ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ಅಕ್ರಮ ಎಸಗಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ’ ಎಂಬ ಆರೋಪ ಕೇಳಿಬಂದಿದೆ.
‘ರೋಗಿಗಳಿಗೆ ಉಚಿತವಾಗಿ ಕೊಡಬೇಕಿದ್ದ ಔಷಧಗಳನ್ನು ವಿತರಿಸದೇ, ದಾಸ್ತಾನು ಮಾಡಿ ವ್ಯರ್ಥ ಮಾಡಿದ್ದಾರೆ. ಅವಧಿ ಮೀರಿದ ಕೆಲವು ಔಷಧಗಳನ್ನು ರೋಗಿಗಳಿಗೆ ನೀಡಿದ್ದಾರೆಯೇ ಎಂಬ ಅನುಮಾನವೂ ಇದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂಬ ಒತ್ತಾಯವೂ ಮೂಡಿದೆ.
ಡಿವೈಎಸ್ಪಿಗಳಾದ ಸುನಿಲ್‌ಕುಮಾರ್, ಮ್ಯಾಥ್ಯೂ, ಇನ್‌ಸ್ಪೆಕ್ಟರ್‌ಗಳಾದ ಬ್ಯಾಟರಾಯಗೌಡ, ಮೋಹನರೆಡ್ಡಿ, ಲೋಕೇಶ್, ಶಶಿಕುಮಾರ್, ಲೋಹಿತ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.