ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟುತ್ತಲೇ ದತ್ತು ಸೇವಾ ಕೇಂದ್ರ ಸೇರಿದ ಹೆಣ್ಣುಮಗು

ಮೂರನೇ ಮಗುವೂ ಹೆಣ್ಣಾಗಿದ್ದಕ್ಕೆ ಬೇಸರ
Last Updated 8 ಜೂನ್ 2021, 1:46 IST
ಅಕ್ಷರ ಗಾತ್ರ

ಮಳವಳ್ಳಿ (ಮಂಡ್ಯ): ತಮಗೆ ಜನಿಸಿದ ಮಗು ಹೆಣ್ಣು ಎಂದು, ತಾಯಿಯೊಬ್ಬರು ಆ ಮಗುವನ್ನು ವಿಶೇಷ ದತ್ತು ಸೇವಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಚೆಗೆ ಕನಕಪುರ ತಾಲ್ಲೂಕಿನ ಗ್ರಾಮವೊಂದರ ಮಹಿಳೆ, ಹೆರಿಗೆಗಾಗಿ ದಾಖಲಾಗಿದ್ದರು. ಆದರೆ, ಜನಿಸಿದ ಮಗು ಹೆಣ್ಣು ಎಂದು ತಿಳಿಯುತ್ತಲೇ ಕೆಲವೇ ಗಂಟೆಗಳಲ್ಲಿ ಅದನ್ನು ದತ್ತು ಸೇವಾ ಕೇಂದ್ರಕ್ಕೆ ನೀಡಿದ್ದಾರೆ.

ದಂಪತಿಗೆ ಮದುವೆಯಾಗಿ ನಾಲ್ಕು ವರ್ಷವಾಗಿದ್ದು, ಈಗಾಗಲೇ ಎರಡು ಹೆಣ್ಣು ಮಕ್ಕಳಿವೆ. ಕಳೆದ ವರ್ಷ, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಈ ಮಹಿಳೆಗೆ ಇತ್ತೀಚೆಗೆ ಋತುಚಕ್ರ ನಿಂತು ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿತ್ತು. ಹೀಗಾಗಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಪಾಸಣೆಗಾಗಿ ಬಂದಿದ್ದರು.

ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ರೇಣುಕಾದೇವಿ ಅವರು ತಪಾಸಣೆ ನಡೆಸಿ ಗರ್ಭಿಣಿಯಾಗಿರುವುದನ್ನು ತಿಳಿಸಿದ್ದಾರೆ. ವೈದ್ಯರ ಮಾತಿನಿಂದ ಮಹಿಳೆ ಆತಂಕಗೊಂಡಿದ್ದಾರೆ. ಆಕೆಯ ಪತಿ ಗರ್ಭಪಾತ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮಗು ಬೆಳೆಯುತ್ತಿರುವುದರಿಂದ ಗರ್ಭಪಾತ ಅಸಾಧ್ಯ ಹಾಗೂ ಅದು ಕಾನೂನುಬಾಹಿರ ಎಂದು ತಿಳಿಹೇಳಿ, ದಂಪತಿಯನ್ನು ವಾಪಸ್‌ ಕಳುಹಿಸಿದ್ದರು.

ಈಚೆಗೆ ಪಟ್ಟಣದ ಆಸ್ಪತ್ರೆಯಲ್ಲಿ ಆ ಮಹಿಳೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಮತ್ತೆ ಹೆಣ್ಣು ಮಗುವಾಗಿರುವುದು ತಿಳಿದರೆ ಪತಿ ಮನೆಯವರು ಹಾಗೂ ಸಂಬಂಧಿಕರು ಅವಮಾನ ಮಾಡುತ್ತಾರೆ. ಹೀಗಾಗಿ ಮಗುವನ್ನು ಯಾರಿಗಾದರೂ ನೀಡುವಂತೆ ದಂಪತಿ ಮನವಿ ಮಾಡಿದ್ದಾರೆ. ವೈದ್ಯರು ಕೂಡಲೇ ಸಿಡಿಪಿಒ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಸಿಡಿಪಿಒ ಕುಮಾರ್ ಹಾಗೂ ಡಾ.ರೇಣುಕಾ ದೇವಿ, ದಂಪತಿಯ ಮನವೊಲಿಸಲು ಮಾಡಿದ ಪ್ರಯತ್ನ ವ್ಯರ್ಥವಾಯಿತು.

ಬಳಿಕ ಮೇಲುಕೋಟೆಯ ಜಾನಪದ ಮಕ್ಕಳ ರಕ್ಷಣಾ ಸೇವಾ ಕೇಂದ್ರದ ವಿಶೇಷ ದತ್ತು ಸೇವಾ ವಿಭಾಗವನ್ನು ಸಂಪರ್ಕಿಸಿ ಇಲಾಖೆಯ ಮಾರ್ಗಸೂಚಿಯಂತೆ ಪಾಲಕರ ಸಹಿ ಪಡೆದು ಸೇವಾಕೇಂದ್ರದ ಸಿಬ್ಬಂದಿಗೆ ಮಗುವನ್ನು ಒಪ್ಪಿಸಲಾಯಿತು ಎಂದು ಸಿಡಿಪಿಒ ಕುಮಾರ್ ತಿಳಿಸಿದರು.

ಇಂದೊಂದು ಅಪರೂಪದ ಪ್ರಕರಣ. ಮಗುವನ್ನು 60ದಿನ ವಿಶೇಷ ದತ್ತು ಸೇವಾ ಕೇಂದ್ರದಲ್ಲಿ ಆರೈಕೆ ಮಾಡಲಾಗುವುದು. ಅಷ್ಟರಲ್ಲಿ ಪೋಷಕರು ಮನಸ್ಸು ಬದಲಿಸಿ ಮರಳಿ ಪಡೆಯಬಹುದು. ಇಲ್ಲದೆ ಇದ್ದರೆ ನಿಯಮದಂತೆ ಮಗುವನ್ನು ದತ್ತು ನೀಡಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಿ.ಬಿ.ರಾಜೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT