ಮಂಡ್ಯ: ‘ದುಡ್ಡು ಇದ್ರೆ ಏನು ಬೇಕಾದರೂ ಕೊಂಡುಕೊಳ್ಳಬಹುದು ಎಂಬಂತಾಗಿದೆ. ರೇಣುಕಸ್ವಾಮಿ ಕುಟುಂಬಸ್ಥರು ನೋವಿನಲ್ಲಿದ್ದಾರೆ. ಗೃಹ ಸಚಿವ ಪರಮೇಶ್ವರ್ ಪ್ರತಿ ದಿನ ಒಂದೊಂದು ಕತೆ ಹೇಳ್ತಾರೆ. ಪಾರದರ್ಶಕ ಮತ್ತು ಹೈಟೆಕ್ ಸರ್ಕಾರ ನಮ್ಮದು ಅಂತಾರೆ. ಪರಪ್ಪನ ಅಗ್ರಹಾರದಲ್ಲಿ ಕೊಡ್ತಾ ಇರುವುದೇ ಹೈಟೆಕ್. ಇದಕ್ಕೆ ಸರ್ಕಾರವೇ ಹೊಣೆ ಆಗಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದರು.
‘ಜೈಲಿನ ಈ ವ್ಯವಸ್ಥೆ ಹೊಸದಾಗಿ ಆಗಿಲ್ಲ. ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಹಿಂದೆ ಡಿಜಿ ಮತ್ತು ಡಿಸಿಪಿ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ಪಂಚತಾರಾ ಸೌಲಭ್ಯವಿದೆ. ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ. ಈ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ. ಅಧಿಕಾರಿಗಳಿಂದ ನ್ಯಾಯ ಸಿಗುವುದಿಲ್ಲ. ನ್ಯಾಯಾಲಯದಿಂದ ಮಾತ್ರ ನ್ಯಾಯ ಸಿಗಬೇಕು’ ಎಂದರು.
‘ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರು ಬೀದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಸರ್ಕಾರದ ಮಂತ್ರಿಗಳಿಗೆ ಕೆಲಸವಿಲ್ಲ. ಸಿಎಂಗೆ ಹಗರಣ ಬಗ್ಗೆ ಮಾತನಾಡಲು ಸಮಯ ಸಾಕಾಗುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ’ ಎಂದು ಕಿಡಿಕಾರಿದರು.