ಗುರುವಾರ , ಮಾರ್ಚ್ 4, 2021
25 °C
ಕಾಳೇನಹಳ್ಳಿ ಅರಣ್ಯದಲ್ಲಿ ಪರಿಶೀಲಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ

ಡಿಬಿಎಲ್‌ ಕಂಪನಿಯಿಂದ ಗಣಿ ಅಕ್ರಮ: ಸಚಿವ ಮುರುಗೇಶ್‌ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಡಿಬಿಎಲ್‌ ಹೆಸರಿನ ಗುತ್ತಿಗೆ ಕಂಪನಿ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಹೇಳಿದರು.

ತಾಲ್ಲೂಕಿನ ಕಾಳೇನಹಳ್ಳಿ ಬಳಿ ಅರಣ್ಯದಲ್ಲಿ ಡಿಬಿಎಲ್‌ ಕಂಪನಿ ನಡೆಸು ತ್ತಿರುವ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಸೋಮ ವಾರ ಸಂಸದೆ ಸುಮಲತಾ ಹಾಗೂ ಅಧಿಕಾರಿಗಳ ಜತೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿ ಮಾತನಾಡಿದರು.

ಡಿಬಿಎಲ್‌ ಕಂಪನಿ ಸುಮಾರು 1.5 ಲಕ್ಷ ಟನ್ ಕಲ್ಲು ತೆಗೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ತೆಗೆದಿರುವ ಕಲ್ಲಿಗೆ ಆ ಕಂಪನಿಯಿಂದ ರಾಜಧನ ವಸೂಲು ಮಾಡಲಾಗುವುದು. ಕಾನೂನು ಕ್ರಮದ ಬಗೆಗೂ ಚಿಂತನೆ ನಡೆದಿದೆ ಎಂದು ಹೇಳಿದರು.

ಡಿಬಿಎಲ್‌ ಕಂಪನಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೂ ಅಧಿಕಾರಿಗಳು ಸುಮ್ಮನಿರುವುದು ಅನುಮಾನ ಮೂಡಿಸಿದೆ. ಈ ಅಕ್ರಮದಲ್ಲಿ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ. ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಅಪಾಯ ಇದೆ ಎಂಬ ಬಗೆಗೂ ದೂರುಗಳಿವೆ. ಸಂಸದರು ಕೂಡ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಜಲಾಶಯದ ಅಸ್ತಿತ್ವಕ್ಕೆ ಧಕ್ಕೆ ಬರದಂತೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊಸ ಗಣಿ ನೀತಿ

ಗಣಿ ಅಕ್ರಮ ತಡೆಗೆ ಹೊಸ ಗಣಿ ನೀತಿ ರೂಪಿಸಲಾಗುವುದು ಎಂದು ಸಚಿವ ನಿರಾಣಿ ತಿಳಿಸಿದರು. ಅಭಿವೃದ್ಧಿ ಕೆಲಸ ನಡೆಯಲು ಗಣಿಗಾರಿಕೆ ಅನಿವಾರ್ಯ. ಆದರೆ, ಕಾನೂನು ಬದ್ಧವಾಗಿ ನಡೆಯುವಂತೆ ನಿಯಮ ಜಾರಿ ಮಾಡುತ್ತೇವೆ. ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರು ಪ್ರಭಾವಿಗಳಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಚೆಕ್‌ಪೋಸ್ಟ್‌ಗಳಲ್ಲಿ ಕೂಡ ಮಾಹಿತಿ ಪಡೆಯಲಾಗುತ್ತದೆ. ಕಲ್ಲು ಗಣಿಗಾರಿಕೆಗಾಗಿ ಅರಣ್ಯ, ಕೆರೆ, ಕಟ್ಟೆಗಳ ನಾಶ ಆಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.

ಕೆಆರ್‌ಎಸ್‌ ಉಳಿಸಲು ಪಣ

ಸಂಸದೆ ಸುಮಲತಾ ಮಾತನಾಡಿ, ಜಿಲ್ಲೆಯ ಜೀವನಾಡಿಯಾಗಿರುವ ಕೆಆರ್‌ಎಸ್‌ ಜಲಾಶಯಕ್ಕೆ ಕಲ್ಲು ಗಣಿಗಾರಿಕೆಯಿಂದ ಅಪಾಯ ಎದುರಾಗಿದೆ. ಹಾಗಾಗಿ ಈ ಭಾಗದ ರೈತರು ಆತಂಕಗೊಂಡಿದ್ದಾರೆ. ಈ ಬಗ್ಗೆ ಸಂಸತ್‌ನಲ್ಲಿ ಕೂಡ ಮಾತನಾಡಿದ್ದು, ಸಂಬಂಧಿಸಿದ ಸಚಿವರ ಗಮನ ಸೆಳೆದಿದ್ದೇನೆ. ಜಲಾಶಯಕ್ಕೆ ಅಪಾಯ ಉಂಟಾಗದಂತೆ ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ ಇದ್ದೇನೆ ಎಂದು ತಿಳಿಸಿದರು.

ತಹಶೀಲ್ದಾರ್‌ ಎಂ.ವಿ.ರೂಪಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಾ, ವಲಯ ಅರಣ್ಯಾಧಿಕಾರಿ ಸುನೀತಾ, ಅಧಿಕಾರಿಗಳು ಜತೆಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು