ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಾಗಾಲ: ಹೆಚ್ಚಿದ ಕೋತಿಗಳ ಹಾವಳಿ

ಮಕ್ಕಳು, ವೃದ್ಧರನ್ನು ಪರಚುತ್ತಿರುವ ವಾನರ ಸೇನೆ
Published 8 ಜೂನ್ 2024, 7:14 IST
Last Updated 8 ಜೂನ್ 2024, 7:14 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಮರಳಾಗಾಲ ಗ್ರಾಮದಲ್ಲಿ ಕಳೆದ ಮೂರು ತಿಂಗಳುಗಳಿಂದ ಕೋತಿಗಳ ಹಾವಳಿ ಮಿತಿ ಮೀರಿದೆ.

ನೂರಾರು ಸಂಖ್ಯೆಯಲ್ಲಿರುವ ಈ ವಾನರ ಸೇನೆ ಊರೊಳಗೆ ಅಳುಕಿಲ್ಲದೆ ಓಡಾಡುತ್ತಿದೆ. ಮನೆಯಿಂದ ಮನೆಗೆ ಕೋತಿಗಳು ನೆಗೆದಾಡುತ್ತಿವೆ. ಮನೆಯ ಮೇಲೆ ಹತ್ತಿ ಹೆಂಚುಗಳನ್ನು ಒಡೆದು ಹಾಕುತ್ತಿವೆ. ನಾಡ ಹೆಂಚುಗಳು ಮತ್ತು ಮಂಗಳೂರು ಹೆಂಚುಗಳನ್ನು ತೆಗೆದು ಸಲೀಸಾಗಿ ಮನೆಗಳ ಒಳಕ್ಕೆ ಇಳಿಯುತ್ತಿವೆ. ಹೆಂಚು ತೆಗೆಯುವಾಗ ಅವು ಜಾರಿ ಬಿದ್ದು ಒಡೆದು ಚೂರಾಗುತ್ತಿವೆ. ಮನೆಯ ಒಳಗೆ ರಾಗಿ ಹಿಟ್ಟು, ಅಕ್ಕಿ, ಬೇಳೆ, ಹಣ್ಣು, ತರಕಾರಿ ಹೀಗೆ ಸಿಕ್ಕದ್ದನ್ನೆಲ್ಲ ಕೋತಿಗಳು ಮನಸೋ ಇಚ್ಛೆ ತಿಂದು ಹಾಕುತ್ತಿವೆ.

ಮನೆಯಲ್ಲಿ ಜನರು ಇದ್ದರೂ ಹೆದರದೆ ಮುಖ್ಯ ದ್ವಾರದ ಮೂಲಕವೇ ಒಳಕ್ಕೆ ನುಗ್ಗುತ್ತಿವೆ. ಅಂಗಡಿ, ಹೋಟೆಲ್‌ಗಳಿಗೂ ನುಗ್ಗಿ ಸಿಕ್ಕ ವಸ್ತುಗಳನ್ನು ಅರ್ಧಂಬರ್ಧ ತಿಂದು ಬಿಸಾಡುತ್ತಿವೆ. ಸುಮಾರು 200ಕ್ಕೂ ಹೆಚ್ಚು ಕೋತಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಊರಿನ ಆ ತುದಿಯಿಂದ ಈ ತುದಿಯ ವರೆಗೆ ಅಡ್ಡಾಡುತ್ತಿವೆ.

ವೃದ್ಧರು, ಮಕ್ಕಳ ಮೇಲೆ ದಾಳಿ: ಪಟಾಕಿ, ಬಡಿಗೆ, ಕಲ್ಲೇಟಿಗೂ ಈ ಕೋತಿಗಳು ಹೆದರುತ್ತಿಲ್ಲ. ಹೊಡೆಯಲು ಬರುವವರ ವಿರುದ್ಧವೇ ಗುರ್‌... ಎಂದು ತಿರುಗಿ ಬೀಳುತ್ತಿವೆ. ದಾರಿಯಲ್ಲಿ ಓಡಾಡುವ ವೃದ್ಧರು, ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ಮಾಡಿ ಪರಚುತ್ತಿವೆ. ಇದರಿಂದ ಜನರು ಭಯಭೀತರಾಗಿ ತಮ್ಮ ಮಕ್ಕಳು ಮತ್ತು ವೃದ್ಧರನ್ನು ಮನೆಯಿಂದ ಹೊರಗೆ ಕಳುಹಿಸಲು ಹೆದರುವ ಪರಿಸ್ಥಿತಿ ಬಂದಿದೆ.

‘ಕೋತಿಗಳು ಊರಿಗೆ ಬಂದು ಮೂರ್ನಾಲ್ಕು ತಿಂಗಳಾಗಿವೆ. ಯಾವ ಮನೆ, ಅಂಗಡಿ, ಹೋಟೆಲ್‌ಗಳನ್ನೂ ಬಿಡದೆ ನುಗ್ಗಿ ದಾಂದಲೆ ಮಾಡುತ್ತಿವೆ. ಸಿಕ್ಕಿದ್ದನ್ನೆಲ್ಲ ತಿಂದು ಹಾಳು ಮಾಡುತ್ತಿವೆ. ಅವು ಕಚ್ಚಿದ ವಸ್ತುಗಳನ್ನು ತಿಂದರೆ ಮಂಗನ ಕಾಯಿಲೆ ಬರುತ್ತದೆ ಎಂಬ ಕಾರಣಕ್ಕೆ ಉಳಿದ ವಸ್ತುಗಳನ್ನು ಬಿಸಾಡುತ್ತಿದ್ದೇವೆ. ಸ್ಥಳೀಯ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಗೆ ಮಂಗಗಳ ಉಪಟಳದ ಬಗ್ಗೆ ಮಾಹಿತಿ ನೀಡಿದ್ದರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರೂ ಆಗಿರುವ ಗ್ರಾಮದ ಮುಖಂಡ ಕೃಷ್ಣೇಗೌಡ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಮರಳಾಗಾಲ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿರುವ ಸಂಗತಿ ಗಮನಕ್ಕೆ ಬಂದಿದೆ. ಆದರೆ ಅವುಗಳನ್ನು ಹಿಡಿಯಲು ತಗಲುವ ವೆಚ್ಚವನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಯೇ ಭರಿಸಬೇಕು. ಹಾಗಾದರೆ ಅರಣ್ಯ ಇಲಾಖೆಯು ತಾಂತ್ರಿಕ ನೆರವು ನೀಡಲಿದೆ. ಕೋತಿಗಳನ್ನು ಹಿಡಿದ ನಂತರ ದೂರದ ಕಾಡಿಗೆ ಬಿಡುವ ಜವಾಬ್ದಾರಿಯನ್ನು ಇಲಾಖೆ ಹೊರಲಿದೆ’ ಎಂದು ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ಹೇಳುತ್ತಾರೆ.

‘ಕೋತಿ ಹಿಡಿಯಲು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅನುದಾನ ಲಭ್ಯವಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯವರೇ ಕ್ರಮ ವಹಿಸಿಬೇಕು’ ಎಂದು

ಕೆ.ಶೆಟ್ಟಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಹಾಲಕ್ಷ್ಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT