ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ ಜಿಲ್ಲೆಯ ಋಣ ತೀರಿಸುವೆ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ

Published 15 ಜೂನ್ 2024, 14:01 IST
Last Updated 15 ಜೂನ್ 2024, 14:01 IST
ಅಕ್ಷರ ಗಾತ್ರ

ಮದ್ದೂರು (ಮಂಡ್ಯ) : "ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮಂಡ್ಯ ಜಿಲ್ಲೆಯ ಋಣ ತೀರಿಸುತ್ತೇನೆ" ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ವೇಳೆ ಜಿಲ್ಲೆಯ ಗಡಿಭಾಗವಾದ ನಿಡಘಟ್ಟದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ಸ್ವೀಕರಿಸಿದ ಬಳಿಕ ಪಟ್ಟಣದ ಶಿವಪುರ ಹಾಗೂ ಐ.ಬಿ. ವೃತ್ತದಲ್ಲಿ ಹೆದ್ದಾರಿಯುದ್ದಕ್ಕೂ ಕಿಕ್ಕಿರಿದು ನೆರೆದಿದ್ದ ಜನರನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಗೆಲ್ಲಿಸಿದ್ದೀರಿ. ಅದರಲ್ಲೂ ವಿಶೇಷವಾಗಿ ಮದ್ದೂರು ತಾಲ್ಲೂಕಿನ ಜನತೆ 56 ಸಾವಿರಕ್ಕೂ ಹೆಚ್ಚು ಬಹುಮತಗಳನ್ನು ನೀಡಿರುವುದನ್ನು ನಾನು ಮರೆಯುವುದಿಲ್ಲ ಎಂದರು.

ಮಂಡ್ಯ ಜಿಲ್ಲೆಗೂ ನನಗೂ ಹಾಗೂ ನನ್ನ ತಂದೆಯವರಾದ ದೇವೇಗೌಡರಿಗೂ ವಿಶೇಷವಾದ ಅನುಬಂಧ ಹಿಂದಿನಿಂದಲೂ ಇದೆ. ಕಳೆದ ಚುನಾವಣೆಯಲ್ಲಿ ನಾನು ಚುನಾವಣೆಯಲ್ಲಿ ನಿಲ್ಲಲು ಒತ್ತಡವಿತ್ತು. ಹಾಗಾಗಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಎರಡೂ ಇಲಾಖೆಗಳ ಖಾತೆ ಕೊಟ್ಟಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ದೇಶ ಹಾಗೂ ನನ್ನ ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸುವ ಆಸೆ ನನ್ನದು. ಅಷ್ಟೇ ಅಲ್ಲದೇ ಯುವಕರಿಗೆ ಉದ್ಯೋಗಗಳನ್ನು ಕೊಡಿಸುವ ಜವಾಬ್ದಾರಿ ಇದೆ. ಸುಮಾರು 50 ವರ್ಷದಿಂದ ಜಿಲ್ಲೆಯು ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತೇನೆ. ನನ್ನ ಬೆಳೆಸಿದ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾವುಕರಾದರು.

15 ದಿನ ಸಮಯ ಕೊಡಿ, ಇಲಾಖೆ ಬಗ್ಗೆ ಮಾಹಿತಿ ಪಡೆಯುವ ಕೆಲಸಗಳು ಇರುತ್ತವೆ ಎಂದ ಅವರು, ಬಳಿಕ ಪ್ರತಿ ಹಳ್ಳಿಗೆ ಬರುತ್ತೇನೆ. ವಾರದಲ್ಲಿ ಒಂದು ದಿನವಾದರೂ ಜಿಲ್ಲೆಗೆ ಬಂದು ನಿಮ್ಮ ಸೇವೆಯನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಸಮಾಜದ ಒಳಿತಿಗೂ ಉತ್ತಮ ಕೆಲಸ ಮಾಡುತ್ತೇನೆ ಎಂದರು.

ನಿಖಿಲ್ ಅವರಿಗೆ ಜವಾಬ್ದಾರಿ ಕೊಟ್ಟಿದ್ದೇನೆ. ನಿಮ್ಮ ಕಷ್ಟ-ಸುಖದಲ್ಲಿ ಅವರು ಭಾಗಿ ಯಾಗುತ್ತಾರೆ. ನಿಮ್ಮ ಋಣದ ಭಾರ ನಮ್ಮ ಮೇಲೆ ಇದೆ. ಕೊನೆಯವರೆಗೂ ನಿಮ್ಮ ಆಶೀರ್ವಾದ ಇರಲಿ ಎಂದರು.

ಮುಖ್ಯವಾಗಿ ಜಿಲ್ಲೆಗೆ ಕಾವೇರಿ ನೀರಿನ ವಿಷಯದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದು ನ್ಯಾಯ ಒದಗಿಸುವ ಕೆಲಸವನ್ನು ಮಾಡುವುದೇ ನನ್ನ ಪರಮ ಗುರಿಯಾಗಿದೆ ಎಂದರು.

ಪಟಾಕಿ ಸಿಡಿಸಿ, ಬೃಹತ್ ಹಾರ ಹಾಕಿ, ಜೈಕಾರ ಕೂಗಿದ ಕಾರ್ಯಕರ್ತರು

ಮಂಡ್ಯ: ಕೇಂದ್ರ ಸಚಿವ ಎಚ್‌ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಗಡಿಭಾಗವಾದ ನಿಡಘಟ್ಟ ಬಳಿ ಶನಿವಾರ ಸಂಜೆ ಆಗಮಿಸುತ್ತಿದ್ದಂತೆ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಜೈಕಾರ ಕೂಗಿ ಅದ್ದೂರಿ ಸ್ವಾಗತ ಕೋರಿದರು.

ಪಟಾಕಿ ಸಿಡಿಸಿ, ಕ್ರೇನ್ ಮೂಲಕ ಬೃಹತ್ ಹಾರ ಹಾಕಿ, ಹೂ ಮಳೆ ಸುರಿಸಿದರು.

ತೆರದ ವಾಹನದಲ್ಲಿ ನಿಡಘಟ್ಟದಿಂದ ಮದ್ದೂರು ಪಟ್ಟಣದವರೆಗೆ ಮೆರವಣಿಗೆ ನಡೆಸಲಾಯಿತು.

ಈ ವೇಳೆ ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಜಿ.ಟಿ. ದೇವೇಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ, ಕೆ.ಅನ್ನದಾನಿ, ಬಿಜೆಪಿ ಮುಖಂಡರಾದ ಎಸ್.ಪಿ. ಸ್ವಾಮಿ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT