ಮಂಡ್ಯ: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ ಖರ್ಗೆ ದೇಶಕ್ಕೆಲ್ಲಾ ಬುದ್ಧಿ ಹೇಳುತ್ತಾರೆ. ಯಾವ ಆಧಾರದಲ್ಲಿ ಕೆಐಎಡಿಬಿನಲ್ಲಿ ಜಾಗವನ್ನು ತೆಗೆದುಕೊಂಡಿದ್ದಾರೆ? ಖಾಸಗಿ ಜಮೀನು ಖರೀದಿಸಬಹುದಿತ್ತು. ಇದು ಅಧಿಕಾರ ದುರುಪಯೋಗವಲ್ಲದೇ ಮತ್ತೇನು?’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರಸಭೆ ಚುನಾವಣೆಯಲ್ಲಿ ಮತ ಹಾಕಿದ ನಂತರ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ನಾಯಕರು ರಾಜಭವನ ಚಲೋ ಮಾಡುತ್ತಿರುವುದು ಬಹಳ ಸಂತೋಷ. ‘ರಾಷ್ಟ್ರಪತಿ ಭವನ ಚಲೋ’ ಕೂಡ ಮಾಡಲಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಗೂ ಹೋಗಲಿ’ ಎಂದು ವ್ಯಂಗ್ಯವಾಡಿದರು.
‘ಸತ್ತಿರುವ ವಿಚಾರವನ್ನಿಟ್ಟುಕೊಂಡು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾನ್ ಅಪರಾಧ ಮಾಡಿರುವುದಾಗಿ ಹೇಳುತ್ತಿದ್ದಾರೆ. ನಾನೇ ಕೈ ಜೋಡಿಸಿ ಮನವಿ ಮಾಡುತ್ತೇನೆ. ರಾಜ್ಯಪಾಲರ ಅನುಮತಿ ಪಡೆದು ತನಿಖೆ ಮಾಡಲಿ’ ಎಂದು ಸವಾಲು ಹಾಕಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನನ್ನ ಬಗ್ಗೆ ಮಾತನಾಡುವ ಆಸಾಮಿಯ ಬಗ್ಗೆ ಚರ್ಚಿಸಲು ಬಹಳಷ್ಟು ವಿಚಾರಗಳಿವೆ. ಪಾಪ, ನಮ್ಮನ್ನು ಕೆಣಕಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸತ್ತವರ ಹೆಸರಲ್ಲಿ ಭೂಮಿ ಖರೀದಿಸಿದ್ದಾರೆ. ಡಿನೋಟಿಫಿಷನ್ ಮಾಡಿಕೊಂಡು ಜೀವನ ಮಾಡುವವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಹಗರಣ ಕುರಿತು ಪ್ರತಿಕ್ರಿಯಿಸಿ, ‘ಕಾನೂನು ಪ್ರಕಾರ ಎಷ್ಟು ಸೈಟ್ ಬೇಕಾದರೂ ಪಡೆಯಿರಿ. ನಮ್ಮ ವಿರೋಧವಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಇಂಥ ಕೆಲಸ ಮಾಡಿದ್ದಾರೆ. ಸಾಮಾನ್ಯ ರೈತನೊಬ್ಬನಿಗೆ ಜಮೀನು ಖಾತೆ ಮಾಡಿಕೊಡುತ್ತಾರಾ? ಭೂಪರಿವರ್ತನೆ ಮಾಡಿದ್ದೀರಲ್ಲವೇ? ಅದು ಯಾರ ಭೂಮಿ? ಆ ವ್ಯಕ್ತಿ ಸತ್ತು 25 ವರ್ಷವಾಗಿದೆ. ಸತ್ತಿರುವ ಲಿಂಗನ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿಸಿದ್ದು ಯಾರು? ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.