ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಂದಾವನ ಮತ್ತಷ್ಟು ಮನಮೋಹಕ; ಸಂಗೀತ ಕಾರಂಜಿಗೆ ಇನ್ನಷ್ಟು ಬಣ್ಣದ ಬೆಳಕು

ಮನಸೂರೆಗೊಳ್ಳುತ್ತಿರುವ ಉದ್ಯಾನ
Last Updated 29 ಜೂನ್ 2019, 19:36 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಶ್ರೀಕೃಷ್ಣನ ಬೃಂದಾವನ ಹೇಗಿತ್ತೋ ಕಂಡವರಿಲ್ಲ. ಆದರೆ, ಕೆಆರ್‌ಎಸ್‌ ಜಲಾಶಯದ ತಗ್ಗಿನಲ್ಲಿರುವ ಬೃಂದಾವನದ ಸಿರಿ ನೋಡಿದರೆ ಇಂದ್ರಲೋಕವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ.

ಬೃಂದಾವನ ಈಗ ಮತ್ತಷ್ಟು ಕಳೆಗಟ್ಟಿದ್ದು, ನೋಡಗರ ಮನಸೂರೆ ಗೊಳ್ಳುತ್ತಿದೆ. ಸಸ್ಯಗಳನ್ನು ಸುಂದರ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಹೊಸ ರೂಪ ನೀಡಲಾಗಿದೆ. ಇಡೀ ಆವರಣಕ್ಕೆ ಹೊಸದಾಗಿ ವಿದ್ಯುತ್‌ ವೈರಿಂಗ್‌ ಮಾಡಲಾಗಿದ್ದು, ಹೊಸ ದೀಪಗಳನ್ನು ಅಳವಡಿಸಲಾಗಿದೆ. ಮೊದಲು ನೋಡಿದ ಉದ್ಯಾನಕ್ಕೂ, ಈಗ ನೋಡುವ ಉದ್ಯಾನಕ್ಕೂ ಸಾಕಷ್ಟು ವ್ಯತ್ಯಾಸಗಳನ್ನು ಪ್ರವಾಸಿಗರು ಗುರುತಿಸುತ್ತಾರೆ.

‘ಬರ್ಡ್‌ ಆಫ್‌ ಪ್ಯಾರಾಡೈಸ್‌’ ವಿನ್ಯಾಸದಿಂದ ಗಿಡಗಳಿಗೆ ಹೊಸ ರೂಪ ನೀಡಲಾಗಿದೆ. ವಿವಿಧ ಬಣ್ಣಗಳ ಹೂವುಗಳಿಂದ ಆಕರ್ಷಣೆಯನ್ನು ಹೆಚ್ಚಿಸಲಾಗಿದೆ.

ಮರ, ಗಿಡ, ಬಳ್ಳಿ, ಹೂವು ಮತ್ತು ಹಸಿರು ಹುಲ್ಲಿನ ರಾಶಿ ಕಣ್ಮನ ಸೆಳೆಯುತ್ತದೆ. ಕ್ಯಾಕ್ಟಸ್, ಹೆಲಿಕೋನಿಯಾ, ಸೆಲೋಸಿಯಾ, ಮಾರಿಗೋಲ್ಡ್, ಬೋಗೇನ್ವಿಲ್ಲಾ ಸೇರಿ ದಂತೆ ಬಗೆಬಗೆಯ ಬಣ್ಣದ ಹೂವು ಗಳು ಬೃಂದಾವನದ ಸೊಬಗನ್ನು ಹೆಚ್ಚಿಸಿವೆ. ಬೃಂದಾವನದ ಮಧ್ಯೆ ಕಾರಂಜಿಗಳು ಚಿಮ್ಮುವ ಪರಿ ನಿಜಕ್ಕೂ ಮನಮೋಹಕ. ಬಗೆಬಗೆಯ ಗಿಡಗಳಲ್ಲಿ ಮೂಡಿರುವ ಪ್ರಾಣಿ, ಪಕ್ಷಿಗಳ ಚಿತ್ರಗಳು ನೋಡುಗರ ಗಮನ ಸೆಳೆಯುತ್ತವೆ. ಮೆತ್ತನೆ ಹುಲ್ಲುಹಾಸು ಕಣ್ಣಿಗೆ ಮುದ
ನೀಡುತ್ತದೆ.

ಕೆಆರ್‌ಎಸ್‌ ಬೃಂದಾವನ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಕನಸಿನ ಕೂಸು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಮಿರ್ಜಾ ಇಸ್ಮಾಯಿಲ್‌ ದಿವಾನರಾಗಿದ್ದರು. ಬೀಳು ಬಿದ್ದಿದ್ದ ಜಾಗವನ್ನು ಸಸ್ಯೋದ್ಯಾನವನ್ನಾಗಿ ರೂಪಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. 1927ರಲ್ಲಿ ಆರಂಭವಾದ ಬೃಂದಾವನ ಅಭಿವೃದ್ಧಿ ಕಾರ್ಯ 1932ರಲ್ಲಿ ಮುಕ್ತಾಯಗೊಂಡಿತು. 60 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಬೃಂದಾವನ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು.

ಸಿಮ್ಮೆಟ್ರಿಕ್ ಶೈಲಿಯಲ್ಲಿ ರೂಪು ಗೊಂಡಿರುವ ಬೃಂದಾವನ 2005ರಲ್ಲಿ ಜೀರ್ಣೋದ್ಧಾರ ಕಂಡಿದ್ದು, ಮತ್ತಷ್ಟು ಆಕರ್ಷಣೆ ಪಡೆದಿದೆ. ಬೃಂದಾವನಕ್ಕೆ ಹೊಂದಿಕೊಂಡಂತೆ 30 ಎಕರೆ ವಿಸ್ತೀರ್ಣದ ನಾಗವನ ಮತ್ತು 5 ಎಕರೆ ವಿಸ್ತೀರ್ಣದ ಚಂದ್ರವನ ಇದ್ದು, ಇವು ತೋಟಗಾರಿಕೆ ಇಲಾಖೆ ಸುಪರ್ದಿಯಲ್ಲಿವೆ.

ಕಾರಂಜಿಗೆ ಮತ್ತಷ್ಟು ಬಣ್ಣ: ಬೃಂದಾವನದ ಉತ್ತರ ಭಾಗದಲ್ಲಿರುವ ಸಂಗೀತ ಕಾರಂಜಿಯೇ ಇಲ್ಲಿನ ಹೈಲೈಟ್. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.45ರಿಂದ 8ರವರೆಗೆ, ಶನಿವಾರ ಮತ್ತು ಭಾನುವಾರ ಸಂಜೆ 6.45ರಿಂದ ರಾತ್ರಿ 9ರವರೆಗೆ ಸಂಗೀತ ಕಾರಂಜಿಯ ಪ್ರದರ್ಶನ ಇರುತ್ತದೆ.

ಕನ್ನಡ ಮತ್ತು ಹಿಂದಿ ಹಾಡುಗಳ ಲಯಕ್ಕೆ ತಕ್ಕಂತೆ ಬಣ್ಣ ಬಣ್ಣದ ನೀರು ಚಿಮ್ಮುವ ದೃಶ್ಯ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಹೊಸ ದೀಪ ಗಳನ್ನು ಅಳವಡಿಸಲಾಗಿದ್ದು, ಕಾರಂಜಿಗೆ ಮತ್ತಷ್ಟು ಬಣ್ಣ ತುಂಬಲಾಗಿದೆ. ಪ್ರತಿ 10 ನಿಮಿಷಕ್ಕೆ ಒಂದು ಶೋ ಸಂಗೀತ ಕಾರಂಜಿಯ ಪ್ರದರ್ಶನ ನಡೆಯಲಿದೆ. ಏಕ ಕಾಲಕ್ಕೆ 250ರಿಂದ 300 ಮಂದಿ ಕುಳಿತು ಲಾಸ್ಯವಾಡುವ ಕಾರಂಜಿಯನ್ನು ಕಣ್ತುಂಬಿ ಕೊಳ್ಳಬಹುದು.

ದೋಣಿ ವಿಹಾರದ ಮೋಜು

ಬೃಂದಾವನದ ದೋಣಿ ವಿಹಾರ ಕೇಂದ್ರದಲ್ಲಿ 5 ಮೋಟರ್ ದೋಣಿಗಳಿವೆ. ಇವುಗಳನ್ನು ಪ್ರವಾಸೋದ್ಯಮ ಇಲಾಖೆಯು ನಿರ್ವಹಣೆ ಮಾಡುತ್ತಿದೆ. ಬೃಂದಾವನಕ್ಕೆ ಬರುವವರು ₹20 ಶುಲ್ಕ ಕೊಟ್ಟು ದೋಣಿ ವಿಹಾರದ ಮೋಜು ಅನುಭವಿಸಬಹುದು. ಮೀನುಗಾರಿಕೆ ಇಲಾಖೆಯು ಇಲ್ಲಿ ಮತ್ಸ್ಯಾಗಾರವನ್ನೂ ಆರಂಭಿಸಿದೆ. ಬೃಂದಾವನ ನೋಡಲು ಬರುವವರು ಬಣ್ಣ ಬಣ್ಣದ ಹತ್ತಾರು ಬಗೆಯ ಮೀನುಗಳನ್ನು ಕಣ್ತುಂಬಿಕೊಳ್ಳಬಹುದು. ಮೀನು ಸಾಕಣೆ ಬಗ್ಗೆ ಮಾಹಿತಿಯೂ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT