ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ದೂರಿನ ಪಾಸ್‌ಪೋರ್ಟ್‌ ಕೇಂದ್ರ ಮಂಡ್ಯಕ್ಕೆ ಸ್ಥಳಾಂತರ?

Published : 4 ಸೆಪ್ಟೆಂಬರ್ 2024, 6:34 IST
Last Updated : 4 ಸೆಪ್ಟೆಂಬರ್ 2024, 6:34 IST
ಫಾಲೋ ಮಾಡಿ
Comments

ಮದ್ದೂರು: ದೇಶದಲ್ಲಿಯೇ ಪ್ರಥಮ ಬಾರಿಗೆ ತಾಲ್ಲೂಕು ಕೇಂದ್ರವೊಂದರಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಹೊಂದಿರುವ ಹೆಗ್ಗಳಿಕೆ ಹೊಂದಿದ ಪಟ್ಟಣದ ಪಾಸ್‌ಪೋರ್ಟ್ ಕೇಂದ್ರವು ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ. 

ಮಂಡ್ಯದಲ್ಲಿ ಈಚೆಗೆ ನಡೆದ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿರುವುದು ಮದ್ದೂರು ತಾಲ್ಲೂಕಿನ ಜನರ ಕಳವಳಕ್ಕೆ ಕಾರಣವಾಗಿದೆ.

2019ರ ಫೆಬ್ರುವರಿ 28ರಂದು ಮದ್ದೂರಿನಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಕಚೇರಿ ಆರಂಭಗೊಂಡಿತು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿ ಸಂಸದರಾಗಿದ್ದ ಎಲ್. ಆರ್. ಶಿವರಾಮೇಗೌಡರವರು ಕೇಂದ್ರವನ್ನು ಉದ್ಘಾಟಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ‘ಪಾಸ್ ಪೋರ್ಟ್ ಕೇಂದ್ರವು ಮಂಡ್ಯಕ್ಕೆ ಬದಲಾಗಿ ಮದ್ದೂರಿನಲ್ಲಿ ಆರಂಭವಾಗಲು ಆಗಿನ ಕ್ಷೇತ್ರದ ಶಾಸಕ, ಸಾರಿಗೆ ಸಚಿವರಾಗಿದ್ದ ಡಿ.ಸಿ. ತಮ್ಮಣ್ಣ ಅವರು ಒತ್ತಾಸೆಯೇ ಕಾರಣ’ ಎಂದಿದ್ದರು. 

ಅಲ್ಲಿಯವರೆಗೆ ಮಂಡ್ಯ ಸೇರಿದಂತೆ ತಾಲ್ಲೂಕಿನ ಸಾವಿರಾರು ಜನರು ಪಾಸ್‌ಪೋರ್ಟ್‌ ಮಾಡಿಸಲು ಬೆಂಗಳೂರಿಗೆ ಹೋಗಬೇಕಾದ ಪರಿಸ್ಥಿತಿಯಿತ್ತು. ಪಟ್ಟಣದಲ್ಲಿ ಕೇಂದ್ರ ಆರಂಭವಾದ ನಂತರ ಜಿಲ್ಲೆಯ ಜನರಿಗೆ ಅನುಕೂಲವಾಗಿತ್ತು. 

2019ರಲ್ಲಿ ಮದ್ದೂರು ಪಟ್ಟಣದಲ್ಲಿ ಆರಂಭವಾಗಿದ್ದ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಪಟ್ಟಣದಲ್ಲಿಯೇ ಮುಂದುವರಿಸಬೇಕು. ಅನಿವಾರ್ಯವಾದರೆ ಮಂಡ್ಯದಲ್ಲಿ ಉಪ ಕಚೇರಿಯನ್ನು ತೆರೆಯಲಿ ಎಂದು ಮದ್ದೂರು ಪಟ್ಟಣದ ಸ್ಥಳೀಯ ನಿವಾಸಿ ಸಂತೋಷ್‌ ಒತ್ತಾಯಿಸಿದ್ದಾರೆ. 

‘ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಪಾಸ್‌ಪೋರ್ಟ್‌ ಸ್ಥಳಾಂತರವಾದರೆ ಜಿಲ್ಲೆಯ ಏಳು ತಾಲ್ಲೂಕುಗಳ ಜನರಿಗೂ ಅನುಕೂಲವಾಗುತ್ತದೆ. ಇಂಥ ಕಚೇರಿಗಳು ಸಹಜವಾಗಿಯೇ ಜಿಲ್ಲಾ ಕೇಂದ್ರದಲ್ಲಿರಬೇಕು’ ಎಂಬುದು ಮಂಡ್ಯ ನಗರದ ನಿವಾಸಿಗಳ ಅಭಿಪ್ರಾಯ. 

ಪಾಸ್‌ಪೋರ್ಟ್‌ 
ಪಾಸ್‌ಪೋರ್ಟ್‌ 

ಸ್ಥಳಾಂತರಕ್ಕೆ ಬಿಡಲ್ಲ: ತಮ್ಮಣ್ಣ

ಮದ್ದೂರಿನಲ್ಲಿರುವ ಪಾಸ್ ಪೋರ್ಟ್ ಸೇವಾಕೇಂದ್ರವನ್ನು ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಳಿಸುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಿಂದ ಒತ್ತಡ ಬಂದಿರುವುದು ನಿಜ. ಆದರೆ ಮದ್ದೂರಿನಿಂದ ಮಂಡ್ಯಕ್ಕೆ ಪಾಸ್ ಪೋರ್ಟ್ ಸೇವಾ ಕೇಂದ್ರವು ಸ್ಥಳಾಂತರಗೊಳ್ಳಲು ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಸಚಿವ ಡಿ. ಸಿ ತಮ್ಮಣ್ಣ ಹೇಳಿದರು.

 ಸ್ಥಳಾಂತರ ಚರ್ಚೆಯಾಗಿಲ್ಲ: ಡಿಸಿ

ಮಂಡ್ಯದ ಅಂಚೆ ಕಚೇರಿಯಲ್ಲಿ ಮತ್ತೊಂದು ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ತೆರೆಯಲು ಪ್ರಸ್ತಾವ ಬಂದಿದೆಯಷ್ಟೇ. ಮದ್ದೂರಿನಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರ ಮಾಡುವ ಕುರಿತು ಯಾವುದೇ ಚರ್ಚೆಯಾಗಿಲ್ಲ  ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT