ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಚಿತ್ರ ಕಲಾವಿದೆಯರಾದ ಶಿಕ್ಷಕಿಯರು

ಕೋವಿಡ್‌ ಕಾಲದಲ್ಲಿ ಕುಂಚ ಹಿಡಿದು ಕಟ್ಟಡಕ್ಕೆ ಕಲಾಕೃತಿ ರೂಪ ಕೊಟ್ಟರು, ಮಾದರಿ ಪ್ರಯತ್ನ
Last Updated 4 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ಸಮಯದ ಬಿಡುವಿನ ಅವಧಿಯಲ್ಲಿ ಶಿಕ್ಷಕಿಯರಿಬ್ಬರು ಚಿತ್ರಕಲಾವಿದೆಯರಾಗಿದ್ದಾರೆ, ತಾವು ಕರ್ತವ್ಯ ನಿರ್ವಹಿಸುವ ಶಾಲಾ ಕಟ್ಟಡವನ್ನು ಸಂಪೂರ್ಣವಾಗಿ ಕಲಾಕೃತಿಯನ್ನಾಗಿಸಿದ್ದಾರೆ.

ತಾಲ್ಲೂಕಿನ ಉತ್ತರ ವಲಯ ವ್ಯಾಪ್ತಿಯ ಹೊಸೂರು ಕಾಲೊನಿಯ ಕಿರಿಯ ಪ್ರಾಥಮಿಕ ಶಾಲೆಯೊಳಗೆ ಕಾಲಿಟ್ಟರೆ ಮನಸೆಳೆಯುವ ಬಣ್ಣಬಣ್ಣದ ಚಿತ್ರಗಳು ಮನಸೂರೆಗೊಳ್ಳುತ್ತವೆ. ಮಕ್ಕಳ ಕಲರವವಿಲ್ಲದ ಕೋವಿಡ್‌ ಕಾಲವನ್ನು ಸದುಪಯೋಗ ಮಾಡಕೊಂಡ ಶಿಕ್ಷಕಿಯರು ಶಾಲಾ ಗೋಡೆಗಳಲ್ಲಿ ಚಿತ್ತಾರ ಬಿಡಿಸಿದ್ದಾರೆ. ತಾವೇ ಸ್ವತಃ ಕುಂಚ ಹಿಡಿದು ಗೋಡೆಗಳಿಗೆ ರೂಪ ಕೊಟ್ಟಿರುವ ಇವರು ಶಾಲೆಯ ಒಳಾಂಗಣ, ಹೊರಾಂಗಣಕ್ಕೆ ಬಣ್ಣ ತುಂಬಿದ್ದಾರೆ.

ಶಿಕ್ಷಕಿಯರಾದ ಎಂ.ಸಿ.ಗೀತಾ– ಎಸ್‌.ಪೂಜಾ ಜೋಡಿ ಚಿತ್ರಕಲಾವಿದೆಯರಾಗಿ ಗೋಡೆಗಳನ್ನು ಮನಸ್ಸಿಗೆ ಹಚ್ಚಿಕೊಂಡಿದ್ದಾರೆ. ಶಾಲೆ ತುಂಬೆಲ್ಲಾ ನಲಿ– ಕಲಿ ಕಲಿಕಾ ಉಪಕರಣ (ಟಿಎಲ್‌ಎಂ) ಅಳವಡಿಸುವುದರ ಜೊತೆಗೆ ಗೋಡೆಗಳ ಮೇಲೆ ಬಣ್ಣದ ಚಿತ್ತಾರ ಸೃಷ್ಟಿಸಿದ್ದಾರೆ. ಶಾಲೆ ಪ್ರವೇಶಿಸುತ್ತಿದ್ದಂತೆ ಹೊರಾಂಗಣದ ಗೋಡೆಯ ಮೇಲೆ ಮರದ ಚಿತ್ರ ಗಮನ ಸೆಳೆಯುತ್ತದೆ. ಮರದ ಪ್ರತಿ ಎಲೆಯೂ ಅಕ್ಷರಗಳಾಗಿ ರೂಪ ಪಡೆದಿದ್ದು ನೋಡುತ್ತಲೇ ಪಾಠ ಕಲಿಸುತ್ತದೆ. ‘ಪರಿಸರ ರಕ್ಷಿಸಿ– ಭವಿಷ್ಯ ಉಳಿಸಿ’ ಸಂದೇಶ ಹೊತ್ತ ಭೂಮಂಡಲ ಹಾಗೂ ಮರದ ಚಿತ್ರ ಮಕ್ಕಳಿಗೆ ಹೊಸ ನೋಟ ಕಟ್ಟಿಕೊಡುತ್ತದೆ.

ಹೊರಾಂಗಣದ ಗೋಡೆಯ ಕೆಳಭಾಗವನ್ನು ಕ್ಷಣ ಇಲಾಖೆ ಮಕ್ಕಳಿಗೆ ನೀಡುವ ವಿವಿಧ ಸೌಲಭ್ಯಗಳನ್ನು ಚಿತ್ರಗಳ ಮೂಲಕ ಚಿತ್ರಿಸಲಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಸಮವಸ್ತ್ರ ಸೌಲಭ್ಯವನ್ನು ರಂಗೋಲಿ, ಹಸೆಕಲೆ ಚಿತ್ರಗಳ ಮೂಲಕ ಚಿತ್ರಿಸಲಾಗಿದೆ. 1–3ನೇ ತರಗತಿಯ ಕೊಠಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಕಲಿಕಾ ಉಪಕರಣಗಳು ಗಮನ ಸೆಳಯುತ್ತಿವೆ. ಗೋಡೆಯ ಕೆಳ ಹಂತವನ್ನು ಗೋಡೆ ಸ್ಲೇಟ್‌ಗಳನ್ನಾಗಿ ರೂಪಿಸಿದ್ದು ಪ್ರತಿ ಮಗುವಿಗೂ ಹಂಚಿಕೆ ಮಾಡಲಾಗಿದೆ.

ಕೊಠಡಿ ಸುತ್ತಲೂ ಅಕ್ಷರಗಳ ಬಳ್ಳಿ ಸೃಷ್ಟಿ ಮಾಡಲಾಗಿದ್ದು ಪ್ರತಿ ಎಲೆಯೂ ಅಕ್ಷರ ರೂಪ ಹೊಂದಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಕ್ರ ರೂಪಿಸಲಾಗಿದೆ. ಗಿಳಿಯು ವರ್ಣಮಾಲೆ ಬೋಧಿಸುವಂತಿರುವ ಚಿತ್ರ, ಸಿಹಿಜೇನಿನ ನಡುವೆ ಸವಿಗನ್ನಡದ ಒತ್ತಕ್ಷರಗಳು, ಶಾಲಾ ಮಂತ್ರಿಮಂಡಲ ಚಿತ್ರಗಳು ಗಮನ ಸೆಳೆಯುತ್ತವೆ. ಚಿತ್ರಪಟಕ್ಕೆ ಧಾನ್ಯ ತುಂಬಿ ಅವುಗಳನ್ನು ಪರಿಚಯ ಮಾಡಿಕೊಡುವ ಚಿತ್ರ, ಹಣ್ಣು, ಸಸಿಗಳ ಚಿತ್ರಗಳು ಮಕ್ಕಳಿಗೆ ನೋಡನೋಡುತ್ತಲೇ ಪಾಠ ಬೋಧಿಸುತ್ತವೆ.

4–5ನೇ ತರಗತಿಗಳ ಇನ್ನೊಂದು ಕೊಠಡಿಯೂ ಬಣ್ಣ ಹಾಗೂ ಕಲಿತಾ ಉಪಕರಣಗಳಿಂದ ಗಮನ ಸೆಳೆಯುತ್ತದೆ. ಬಾಹ್ಯಾಕಾಶ, ರಾಕೆಟ್‌ ಚಿತ್ರಗಳು ಮನಸೂರೆಗೊಳ್ಳುತ್ತವೆ. ಗೀತಾ, ಪೂಜಾ ಇಬ್ಬರೂ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಯಾರ ಸಹಾಯವೂ ಇಲ್ಲದೇ ಶಾಲೆಗೆ ಹೊಸ ರೂಪ ನೀಡಿದ್ದಾರೆ. ಇವರ ಪ್ರಯತ್ನ ಬೇರೆ ಶಿಕ್ಷಕರಿಗೂ ಇಷ್ಟವಾಗಿದ್ದು ವಿವಿಧ ಶಾಲೆಗಳ ಶಿಕ್ಷಕರು ಇಂಥದೇ ಮಾದರಿಯನ್ನು ಅನುಸರಿಸಲು ಮುಂದಾಗಿದ್ದಾರೆ. ಜೊತೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌ ಕಾಲದಲ್ಲಿ ಮಕ್ಕಳು ಶಾಲೆಗೆ ಬರುತ್ತಿಲ್ಲ, ಈ ಸಂದರ್ಭದಲ್ಲಿ ಶಾಲೆಯಲ್ಲಿ ಚಿತ್ರ ಬಿಡಿಸಲು ನಿರ್ಧರಿಸಿದೆವು. ಹೊರಗೆ ಪೇಂಟರ್‌, ಕಲಾವಿದರನ್ನು ವಿಚಾರಿಸಿದಾಗ ಅದಕ್ಕೆ ತುಂಬಾ ಹಣ ಖರ್ಚಾಗುತ್ತಿತ್ತು. ನಮಗೂ ಆಸಕ್ತಿ ಇರುವ ಕಾರಣ ನಾವೇ ಬಣ್ಣ ತಂದು ಚಿತ್ರ ಬಿಡಿಸಿದೆವು. ಇದು ಇಲಾಖೆಯ ಮೇಲಾಧಿಕಾರಿಗಳಿಗೂ ಇಷ್ಟವಾಗಿದ್ದು ಅಪಾರ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಗೀತಾ, ಪೂಜಾ ಹೇಳಿದರು.

‘ಗೀತಾ, ಪೂಜಾ ಅವರು ಶಾಲೆಯ ಬಗ್ಗೆ ಇಟ್ಟುಕೊಂಡಿರುವ ಪ್ರೀತಿ ಮಾದರಿಯಾದುದು. ಬೆಳಿಗ್ಗೆಯಿಂದ ಸಂಜೆ 7ರವರೆಗೂ ಕೆಲಸ ಮಾಡಿ ಇಡೀ ಕಟ್ಟಡಕ್ಕೆ ಹೊಸ ರೂಪ ನೀಡಿದ್ದಾರೆ. ಇಂತಹ ಮಾದರಿ ಶಿಕ್ಷಕರಿಗೆ ಇಡೀ ಸಮಾಜ ಪ್ರೋತ್ಸಾಹಿಸಬೇಕು’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ನಾಗರಾಜು ತಿಳಿಸಿದರು.

********

ಕೊರತೆ ಮೀರಿ ರೂಪ ಕೊಟ್ಟರು

ಜೋರು ಮಳೆ ಬಂದಾಗ ಶಾಲ ಕಟ್ಟಡ ಸೋರುತ್ತದೆ, ಹಲವು ವೇಳೆ ನೀರು ಬಿದ್ದು ಕಲಿಕಾ ಸಾಮಗ್ರಿ ಹಾಳಾಗಿವೆ. ಆದರೆ ಶಿಕ್ಷಕಿಯರು ಮತ್ತೆ ಮತ್ತೆ ಸಾಮಗ್ರಿ ಮಾಡಿ ರೂಪ ಕೊಟ್ಟಿದ್ದಾರೆ. ಶಾಲೆಯ ಮುಂದೆಯೇ ರಸ್ತೆಯ ದೂಳು ಒಳಗೆ ನುಗ್ಗುತ್ತದೆ. ಕೆಲವರು ಜಗುಲಿ ಮೇಲೆಯೇ ಬೈಕ್‌ ನಿಲ್ಲಿಸುತ್ತಾರೆ. ಹೀಗಾಗಿ ಕಟ್ಟಡದ ಸುತ್ತಲೂ ರಕ್ಷಣ ಬೇಲಿ ಅವಶ್ಯಕತೆ ಇದೆ.

ಶಾಲೆಯಲ್ಲಿ ಹಲವು ಸಮಸ್ಯೆ, ಕೊರೆತೆಗಳಿದ್ದರೂ ಅವುಗಳನ್ನು ಮೀರಿ ಶಾಲಾ ಕಟ್ಟಡಕ್ಕೆ ಹೊಸ ರೂಪ ನೀಡಿರುವುದು ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT