ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಈ ವರ್ಷವೂ ಇಲ್ಲ ಮಾವು ಮೇಳ; ನಿರಾಸೆ

2019ರ ನಂತರ ನಡೆಯದ ಹಣ್ಣಿನ ಉತ್ಸವ, ಅಧಿಕಾರಿಗಳ ವಿರುದ್ಧ ಗ್ರಾಹಕರ ಅಸಮಾಧಾನ
Published 25 ಮೇ 2024, 8:01 IST
Last Updated 25 ಮೇ 2024, 8:01 IST
ಅಕ್ಷರ ಗಾತ್ರ

ಮಂಡ್ಯ: ಮಾರುಕಟ್ಟೆಯಲ್ಲಿ ಶುದ್ಧ, ರಾಸಾಯನಿಕ ರಹಿತ ಮಾವಿನಹಣ್ಣು ಇಲ್ಲವಾಗಿದ್ದು ಮಾವು ಪ್ರಿಯರ ನಾಲಗೆಗೆ ರುಚಿ ಸಿಗುತ್ತಿಲ್ಲ. ತೋಟಗಾರಿಕೆ ಇಲಾಖೆಯಾದರೂ ಮಾವುಮೇಳ ಆಯೋಜಿಸಿ ನೈಸರ್ಗಿಕ ಹಣ್ಣು ಮಾರುವ ವ್ಯವಸ್ಥೆ ಮಾಡುತ್ತದೆ ಎಂಬ ನಿರೀಕ್ಷೆಯೂ ಸುಳ್ಳಾಗಿದೆ.

2019ರ ನಂತರ ಜಿಲ್ಲೆಯಲ್ಲಿ ಮಾವು ಮೇಳ ಆಯೋಜನೆಯನ್ನೇ ತೋಟಗಾರಿಕೆ ಇಲಾಖೆ ಕೈಬಿಟ್ಟಿದೆ. ಈ ಬಾರಿಯೂ ಮಾವುಮೇಳ ನಡೆಯುತ್ತಿಲ್ಲ, ಹೀಗಾಗಿ ಮಾವು ಪ್ರಿಯರಿಗೆ ನಿರಾಸೆಯುಂಟಾಗಿದೆ. ರಸ್ತೆ ಬದಿಯಲ್ಲಿ, ಹಣ್ಣಿನ ಅಂಗಡಿಗಳಲ್ಲಿ ಮಾರಾಟವಾಗುವ ಮಾವಿನ ಹಣ್ಣಿನ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ಖಾತ್ರಿ ಇಲ್ಲ. ಹೀಗಾಗಿ ಸಾರ್ವಜನಿಕರು ಮಾವು ಮೇಳದ ನಿರೀಕ್ಷೆಯಲ್ಲಿದ್ದರು.

ರಾಜ್ಯ ಮಾವು ಅಭಿವೃದ್ಧಿ ಮಂಡಳಿ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಡೆಯುತ್ತಿದ್ದ ಮಾವು ಮೇಳ ಭರ್ಜರಿ ಯಶಸ್ವಿಯಾಗುತ್ತಿತ್ತು. ಜಿಲ್ಲೆ, ಹೊರ ಜಿಲ್ಲೆಗಳ ಮಾವು ಬೆಳೆಗಾರರು 40ಕ್ಕೂ ಅಧಿಕ ತಳಿಯ ಮಾವಿನ ಹಣ್ಣುಗಳನ್ನು ಮೇಳಕ್ಕೆ ತಂದು ಮಾರುತ್ತಿದ್ದರು. ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದ ರಸ್ತೆಯಲ್ಲಿ ಮಾವು ಹಣ್ಣುಗಳ ಮಳಿಗೆಗಳು ತಲೆ ಎತ್ತುತ್ತಿದ್ದವು.

4 ದಿನಗಳ ಕಾಲ ನಡೆಯುತ್ತಿದ್ದ ಮಾವು ಮೇಳದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ಹಲವು ಸಂದರ್ಭಗಳಲ್ಲಿ ಮೇಳವನ್ನು ಮತ್ತೆರಡು ದಿನ ವಿಸ್ತರಣೆ ಮಾಡಿದ ಉದಾಹರಣೆಯೂ ಉಂಟು. ಆದರೆ ಕೋವಿಡ್‌ ನಂತರ ಮಾವು ಮೇಳ ಆಯೋಜನೆ ಕೈಬಿಟ್ಟಿರುವುದು ನೈಸರ್ಗಿಕ ಮಾವಿನ ಹಣ್ಣು ತಿನ್ನುವ ಗ್ರಾಹಕರಿಗೆ ಬೇಸರ ಉಂಟಾಗಿದೆ.

‘ಮೈಸೂರಿನಲ್ಲಿ ಸದ್ಯ ಮಾವು ಮೇಳ ಆರಂಭವಾಗಿದ್ದು ಬಹುತೇಕ ಮಂಡ್ಯ ಗ್ರಾಹಕರು ಮೈಸೂರಿನಿಂದ ಹಣ್ಣು ತರಬೇಕಾಗಿದೆ. ಮಂಡ್ಯ ಜಿಲ್ಲೆಯ ಹಲವು ಮಾವು ಬೆಳೆಗಾರರು ಅಲ್ಲಿ ಮಳಿಗೆ ತೆರೆದಿದ್ದಾರೆ. ಇಲ್ಲಿಯೂ ಮೇಳ ಆಯೋಜಿಸಿದ್ದರೆ ಮಾರಾಟಗಾರರು ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲವಾಗುತ್ತಿತ್ತು’ ಎಂದು ಗ್ರಾಹಕರಾದ ಶಿವಕುಮಾರ್‌ ಹೇಳಿದರು.

ಕಡಿಮೆಯಾದ ಇಳುವರಿ: ಈ ಬಾರಿ ಜಿಲ್ಲೆಯಾದ್ಯಂತ ಮಾವು ಇಳುವರಿ ಕಡಿಮೆಯಾಗಿದ್ದು ಬೆಲೆ ದುಬಾರಿಯಾಗಿದೆ. ಬಾದಾಮಿ, ರಸಪೂರಿ, ತೋತಾಪುರಿ ತಳಿಯನ್ನು ಜಿಲ್ಲೆಯ ರೈತರು ಬೆಳೆಯುತ್ತಾರೆ. ಜಿಲ್ಲೆಯಾದ್ಯಂತ 1,800 ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಮರಗಳಿದ್ದು 1 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಫಸಲು ಬಂದಿದೆ. ಒಟ್ಟಾರೆ 7–8 ಸಾವಿರ ಮೆಟ್ರಿಕ್‌ ಟನ್‌ನಷ್ಟು ಮಾವಿನ ಹಣ್ಣು ಕಟಾವು ಮಾಡಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಬಾದಾಮಿ ಮಾವಿನ ಹಣ್ಣಿಗೆ  ₹ 200ವರೆಗೂ ಬೆಲೆ ಇದೆ. ರಸಪೂರಿ, ತೋತಾಪುರಿ ತಳಿಯನ್ನು ₹ 150ರವರೆಗೂ ಮಾರಾಟ ಮಾಡಲಾಗುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿ ಮಾವಿನ ಹಣ್ಣಿಗೆ ಹೆಚ್ಚಿನ ಬೆಲೆ ಇದೆ.

‘ಈ ಬಾರಿ ತೀವ್ರ ಬಿಸಿಲಿದ್ದ ಕಾರಣ ಮಾವಿನ ಫಸಲಿಗೆ ತೀವ್ರ ಹೊಡೆತ ಬಿತ್ತು. ಹೂವು ಹಣ್ಣಾಗಿ ಕಾಯು ಕಟ್ಟುವ ಸಮಯದಲ್ಲೇ ಹೀಚು ಉದುರಿ ಹಾಳಾದವು. ಹೀಗಾಗಿ ಹಣ್ಣುಗಳ ಪೂರೈಕೆಯಲ್ಲಿ ಕೊರತೆಯಾಗಿದ್ದು ಬೆಲೆ ಹೆಚ್ಚಾಗಿದೆ’ ಎಂದು ಮಾವು ಬೆಳೆಗಾರರೊಬ್ಬರು ತಿಳಿಸಿದರು.

ತೀವ್ರ ಬಿಸಿಲಿದ್ದ ಕಾರಣ ಮಾವಿನ ಹಣ್ಣಿನ ಫಸಲಿನ ಬಗ್ಗೆ ಸಮರ್ಪಕ ಮಾಹಿತಿ ದೊರೆಯಲಿಲ್ಲ. ಈಗಾಗಲೇ ತಡವಾಗಿದ್ದು ಈ ಸಂದರ್ಭದಲ್ಲಿ ಮಾವು ಮೇಳ ಆಯೋಜಿಸಲು ಸಾಧ್ಯವಾಗುತ್ತಿಲ್ಲ – ರೂಪಶ್ರೀ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ

Cut-off box - ಕ್ಯಾಲ್ಸಿಯಂ ಕಾರ್ಬೈಡ್‌ ತೀವ್ರ ಬಳಕೆ ಹಣ್ಣಿನ ವರ್ತಕರು ಮಾವಿನ ಹಣ್ಣು ಮಾಗಿಸಲು ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕವನ್ನು ತೀವ್ರವಾಗಿ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಮಾವು ಹಣ್ಣಾಗಿರುವಂತೆ ಕಂಡರೂ ಬಣ್ಣಗಟ್ಟಿದ್ದರೂ ತಿಂದಾಗ ನಾಲಗೆಗೆ ರುಚಿ ಹತ್ತುತ್ತಿಲ್ಲ. ಆಹಾರ ಸುರಕ್ಷತಾ ಕಾಯ್ದೆಯಡಿ ಆಹಾರ ಉತ್ಪನ್ನಗಳಿಗೆ ನಿಷೇಧಿತ ರಾಸಾಯನಿಕ ಬಳಸುವುದು ಶಿಕ್ಷಾರ್ಹ ಅಪರಾಧ. ಆದರೆ ತೋಟಗಾರಿಕೆ ಇಲಾಖೆ ಆಹಾರ ಸುರಕ್ಷತಾ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ವರ್ತಕರು ರಾಸಾಯನಿಕ ಬಳಕೆಯನ್ನು ಮುಂದುವರಿಸಿದ್ದಾರೆ ಎಂಬ ಆರೋಪವಿದೆ. ‘ಹಣ್ಣುಗಳ ಬಣ್ಣಕ್ಕಾಗಿ ಎಥಲೀನ್‌ ಬಳಸಲು ಅವಕಾಶವಿದೆ ಆದರೆ ಕ್ಯಾಲ್ಸಿಯಂ ಕಾರ್ಬೈಡ್‌ ಬಳಕೆ ಅವಕಾಶವಿಲ್ಲ. ಆದರೆ ನಿಷೇಧಿತ ಕೆಮಿಕಲ್‌ ಬಳಕೆಯನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT