ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಕೂಗು ಅಭಿಯಾನ: ಮುಂಗಾರು ಮಳೆಯೇ ನೀರಿನ ಮೂಲ

ಈಶ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್‌ ಅಭಿಮತ
Last Updated 6 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮಂಡ್ಯ: ‘ನೀರಿನ ಮೂಲ ಕೆರೆ–ಕಟ್ಟೆಗಳಲ್ಲ, ಮುಂಗಾರು ಮಳೆಯೇ ನೀರಿನ ಮೂಲ. ಮಳೆ ಬಾರದಿದ್ದರೆ ಕೆರೆ, ಕುಂಟೆ, ನದಿಗಳು ಖಾಲಿಯಾಗುತ್ತವೆ. ಸಮತೋಲನದ ಮಳೆ ಸುರಿಯಬೇಕಾದರೆ ಮರ ಬೆಳೆಸಬೇಕು’ ಎಂದು ಈಶ ಫೌಂಡೇಷನ್‌ ಮುಖ್ಯಸ್ಥ ಜಗ್ಗಿ ವಾಸುದೇವ್‌ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ನಡೆದ ಕಾವೇರಿ ಕೂಗು ಅಭಿಯಾನದಲ್ಲಿ ಪಾಲ್ಗೊಂಡು ಅವರು ಮತನಾಡಿದರು.

‘ಅರಣ್ಯ ಬೇಸಾಯದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಬೇಕು. ಆಕಾಶದಿಂದ ಸುರಿಯುವ ಮಳೆಯು ನೆಲಕ್ಕೆ ಬಿದ್ದು ಅಂತರ್ಜಲ ಪುನಶ್ಚೇತನಗೊಳ್ಳಬೇಕಾದರೆ ಮರಗಳಿರಬೇಕು, ಎಲೆಗಳು, ಪ್ರಾಣಿಗಳು ಸಗಣಿ ಇರಬೇಕು. ಅವು ಇಲ್ಲದಿದ್ದರೆ ನೀರು ಕೇವಲ ಮಣ್ಣಿನ ಜೊತೆ ಹರಿದು ಹೋಗುತ್ತಿದೆ. ಈಚೆಗೆ ಕೆಆರ್‌ಎಸ್‌ಗೆ ಭೇಟಿ ನೀಡಿದ್ದಾಗ, ಜಲಾಶಯ ನಾಲ್ಕು ದಿನಗಳಲ್ಲಿ ತುಂಬಿದೆ ಎಂಬ ಮಾಹಿತಿ ಸಿಕ್ಕಿತು. ಆದರೆ ಜಲಾಶಯ ಕೇವಲ ನಾಲ್ಕು ದಿನಗಳಲ್ಲಿ ತುಂಬುವುದು ಮಣ್ಣಿನ ಫಲವತ್ತತೆಗೆ ಒಳ್ಳೆಯದಲ್ಲ’ ಎಂದು ಹೇಳಿದರು.

‘ಕಾವೇರಿ ಓಡುತ್ತಾ ಬರುವುದೂ ಒಳ್ಳೆಯದಲ್ಲ, ಕಾವೇರಿ ನೀರು ಮರಗಿಡಗಳ ನಡುವೆ ನಡೆದು ಬರಬೇಕು. ಬೇರು, ಎಲೆಗಳ ನಡುವೆ ಮೆದುವಾಗಿ ಹರಿದು ಬರಬೇಕು. ಈಗ ಮಣ್ಣಿನ ಜೊತೆ ವೇಗವಾಗಿ ಹರಿಯುತ್ತಿರುವ ಕಾರಣ ನೀರು ಕೊಳಚೆಯಾಗಿದೆ. ನಾವು 12 ಸಾವಿರ ವರ್ಷಗಳಿಂದಲೂ ವ್ಯವಸಾಯ ಮಾಡುತ್ತಿದ್ದೇವೆ. ಆದರೆ ಈಚೆಗೆ ನಾವು ಮಣ್ಣಿನ ಆರೋಗ್ಯ ಹಾಳು ಮಾಡಿದ್ದೇವೆ. ಈ ಕಾರಣದಿಂದಲೇ ಅತೀವೃಷ್ಟಿ, ಅನಾವೃಷ್ಟಿ ಸಮಸ್ಯೆಗಳು ಕಾಣಿಸಿಕೊಂಡಿವೆ’ ಎಂದು ಹೇಳಿದರು.

‘ಊಟಕ್ಕೆ ಒಂದು ಚಿಟಿಕೆ ಉಪ್ಪು ಬಳಸುತ್ತಿದ್ದೇವೆ. ಆದರೆ ಕೃಷಿಯಲ್ಲಿ ನಾವು ಮಣ್ಣಿಗೆ ಮೂಟೆಗಟ್ಟೆಲೆ ಉಪ್ಪು ಸುರಿಯುತ್ತಿದ್ದೇವೆ. ಇದರಿಂದ ಮಣ್ಣಿನ ಆರೋಗ್ಯ ಹಾಳಾಗಿದ್ದು ಫಲವತ್ತತೆ ಕಾಣದಾಗಿದೆ. ವಿಶ್ವವಿದ್ಯಾಲಯಗಳಲ್ಲಿ, ಕೃಷಿ ಪ್ರಯೋಗಶಾಲೆಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಕೇವಲ ಪ್ರಯೋಗಶಾಲೆಗೆ ಮಾತ್ರ ಸೀಮಿತವಾಗಿವೆ. ಅವು ರೈತರ ಮನೆಬಾಗಿಲಿನವರೆಗೂ ಬಂದಿಲ್ಲ. ಹೀಗಾಗಿ ರೈತರಿಗೆ ಅರಣ್ಯ ಕೃಷಿಯ ಬಗ್ಗೆ ತಿಳಿಯುತ್ತಿಲ್ಲ’ ಎಂದು ಹೇಳಿದರು.

‘ಕಾವೇರಿ ನದಿಗೆ 120 ಉಪ ನದಿಗಳಿವೆ. ಆದರೆ ಈಗ ಕೇವಲ 35 ನದಿಗಳು 12 ತಿಂಗಳು ಹರಿಯುತ್ತವೆ, ಉಳಿದವು ಮಾಯವಾಗಿವೆ. ಉಪ ನದಿಗಳನ್ನು ಉಳಿಸುವ ಯತ್ನ ಮಾಡಬೇಕಾಗಿದೆ’ ಎಂದು ಹೇಳಿದರು.

ಕೃಷಿ ವಿಜ್ಞಾನಿ ಡಾ.ಶಂಕರ್‌ ಮಾತನಾಡಿ ‘ದೈವದತ್ತ ಪಂಚಭೂತಗಳಲ್ಲಿ ನೀರು, ಭೂಮಿ ಹಾಗೂ ಗಾಳಿ ಅತ್ಯಂತ ಪ್ರಮುಖವಾಗಿವೆ. ಸಮತೋಲಿತವಾದ ಮಳೆ ಸುರಿಯಬೇಕಾದರೆ ಅರಣ್ಯ ಕೃಷಿ ಅತ್ಯಂತ ಪ್ರಮುಖವಾದುದು. ಒಂದು ಮರ ಬೆಳೆಸಿದರೆ ಅದು 40 ವರ್ಷಗಳ ಕಾಲ 1 ಟನ್‌ನಷ್ಟು ಇಂಗಾಲದ ಡೈ ಆಕ್ಸೈಡ್‌ ಹಿಡಿಟ್ಟುಕೊಂಡು ಆಮ್ಲಜನಕ ನೀಡುತ್ತದೆ. ಬೇಸಿಗೆ ಕಾಲದಲ್ಲೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲು ಅರಣ್ಯ ಕೃಷಿ ಮಾಡಬೇಕಾಗಿದೆ’ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ, ಸಂಸದೆ ಎ.ಸುಮಲತಾ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ರಾಕ್‌ಲೈನ್‌ ವೆಂಕಟೇಶ್‌ ಹಾಜರಿದ್ದರು.

**

ಉದ್ಯೋಗ ಖಾತ್ರಿ ಅಡಿ ಸಸಿ ನೆಡುವ ಯೋಜನೆ ಸಿದ್ಧ

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ ‘ಉದ್ಯೋಗ ಖಾತ್ರಿ ಯೋಜನೆ ಅಡಿ ಕಾವೇರಿ ನದಿ, ಅದರ ಉಪನದಿಗಳಾದ ಶಿಂಷಾ, ಲಕ್ಷ್ಮಣತೀರ್ಥ ಮುಂತಾದ ನದಿ ಪಾತ್ರದ ಇಕ್ಕೆಲಗಳಲ್ಲಿ ಸಸಿ ಬೆಳೆಸಲು ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಅಡಿಯಲ್ಲೂ ರೈತರಿಗೆ ಉಚಿತವಾಗಿ ಸಸಿ ವಿತರಿಸಲು ಉದ್ದೇಶಿಸಲಾಗಿದೆ. ರೈತರು ಸಸಿ ನೆಟ್ಟು ಮೂರು ವರ್ಷಗಳ ಕಾಲ ಅವರೇ ನಿರ್ವಹಣೆ ಮಾಡಲಿದ್ದಾರೆ. ಆ ಮೂಲಕ ಆರ್ಥಿಕವಾಗಿ ಲಾಭಗಳಿಸಿಸುವಂತೆಯೂ ಯೋಜನೆ ರೂಪಿಸಲಾಗಿದೆ. ಈ ಕುರಿತು ಈಗಾಗಲೇ ಕ್ರಿಯಾಯೋಜನೆ ಸಿದ್ಧಗೊಂಡಿದ್ದು ಶೀಘ್ರ ಅನುಷ್ಠಾನಗೊಳಿಸಲಾಗುವುದು. ಯೋಜನೆ ಸದುಪಯೋಗ ಮಾಡಿಕೊಳ್ಳುವ ಕುರಿತು ರೈತರಲ್ಲಿ ಅರಿವು ಮೂಡಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT