ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಕೆದಾಟು ಯೋಜನೆ |ತಮಿಳುನಾಡನ್ನು ಒಪ್ಪಿಸಿ, ಅನುಮತಿ ಕೊಡಿಸುವೆ: ಕುಮಾರಸ್ವಾಮಿ

Published : 8 ಆಗಸ್ಟ್ 2024, 0:04 IST
Last Updated : 8 ಆಗಸ್ಟ್ 2024, 0:04 IST
ಫಾಲೋ ಮಾಡಿ
Comments

ಮಂಡ್ಯ: ‘ಅಧಿಕಾರಕ್ಕೆ ಬಂದಲ್ಲಿ ಐದೇ ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದ್ದು ನಿಜ. ಆದರೆ, ನಿಮ್ಮ ‘ಇಂಡಿಯಾ’ ಮಿತ್ರಕೂಟದಲ್ಲಿರುವ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಜವಾಬ್ದಾರಿ ನಿಮ್ಮದೇ ಎಂಬ ಮಾತನ್ನೂ ಹೇಳಿದ್ದೆ. ಅದನ್ನು ಪ್ರಸ್ತಾಪಿಸದೆ ಕಾಂಗ್ರೆಸ್‌ ನಾಯಕರು ನಮ್ಮ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

ನಗರದಿಂದ ಬುಧವಾರ ಹೊರಟ ಐದನೇ ದಿನದ ‘ಮೈಸೂರು ಚಲೋ’ ಪಾದಯಾತ್ರೆಯಲ್ಲಿ ಅವರು ಮಾತನಾಡಿ, ‘ಯೋಜನೆ ಅನುಷ್ಠಾನಕ್ಕೆ ಇಲ್ಲಿನ ಕಾಂಗ್ರೆಸ್ ಸರ್ಕಾರವೂ ಸಹಕರಿಸಬೇಕು. ಕೇಂದ್ರವೇ ಎಲ್ಲವನ್ನೂ ಮಾಡಲಾಗದು. ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ ಒಪ್ಪಿಸಿದರೆ, ನಾನು ಪ್ರಧಾನಿಯೊಂದಿಗೆ ಮಾತನಾಡಿ ಒಪ್ಪಿಸುತ್ತೇನೆ ಎಂದಿದ್ದೆ. ಅದಕ್ಕೆ ಈಗಲೂ ಬದ್ಧ’ ಎಂದರು.

ವಿಡಿಯೊ ಬಿಡುವ ಚಾಳಿ:

‘ಕೊಚ್ಚೆಗಳ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೆ. ಆದರೆ, ಕಾಂಗ್ರೆಸ್‌ ಜನಾಂದೋಲನ ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ನನ್ನ ಬಗ್ಗೆ ವಿಡಿಯೊ ಪ್ಲೇ ಮಾಡಿದ್ದಾರೆ. ನಾನು ಅದಕ್ಕೆ ಹೇಳಿದ್ದು ‘ಸಿಡಿ ಶಿವು’ ಅಂತ. ವಿಡಿಯೊ ಬಿಡುವ ಚಾಳಿ ಎಲ್ಹೋಗುತ್ತೆ’ ಎಂದು ಕುಮಾರಸ್ವಾಮಿ ಹರಿಹಾಯ್ದರು.

‘ಹಳೇ ವಿಡಿಯೊ ಬಿಟ್ಟಿದ್ದೀರಲ್ಲ, ನಿಮ್ಮ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್‌ ಬಗ್ಗೆ ಮತ್ತು ನಿಮ್ಮ ಹೈಕಮಾಂಡ್‌ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ ಎಂಬುದನ್ನು ಮರೆತಿದ್ದೀರಾ’ ಎಂದು ಕೇಳಿದರು.  

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಈ ಭಂಡ ಸರ್ಕಾರದಿಂದ ಜನರಿಗೆ ಒಳಿತಾಗುವುದಿಲ್ಲ. ಹಗರಣಗಳನ್ನು ಮುಚ್ಚಿ ಹಾಕಲು ಹುನ್ನಾರ ನಡೆಸುತ್ತಿದೆ. ಪೊಲೀಸರ ಮೇಲೆ ನಮಗೆ ನಂಬಿಕೆ ಇದೆಯೇ ಹೊರತು ಸರ್ಕಾರದ ಮೇಲಲ್ಲ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದೇ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಗುಡುಗಿದರು. 

ಪ್ರೀತಂಗೌಡ ಪರ ಘೋಷಣೆ: ಮಾತಿನ ಚಕಮಕಿ
‘ಮೈಸೂರು ಚಲೋ’ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ಬೆಂಬಲಿಗರು ‘ಗೌಡರ ಗೌಡ ಪ್ರೀತಂ ಗೌಡ’ ಎಂದು ಜೈಕಾರ ಕೂಗಿದರು.  ಇದನ್ನು ಕೇಳಿದ ಜೆಡಿಎಸ್‌ ಕಾರ್ಯಕರ್ತರು ಕೆರಳಿದರು. ಪ್ರೀತಂ ಪರ ಘೋಷಣೆ ಕೂಗದಂತೆ ಅವರ ಬೆಂಬಲಿಗರೊಂದಿಗೆ ವಾಗ್ವಾದ ನಡೆಸಿದರು. ಕೆಲಹೊತ್ತು ಎರಡೂ ಬಣಗಳ ನಡುವೆ ಮಾತಿನ ಚಕಮಕಿ ಮುಂದುವರಿಯಿತು.  ಮಧ್ಯ ಪ್ರವೇಶಿಸಿದ ನಿಖಿಲ್‌ ಕುಮಾರಸ್ವಾಮಿ ’ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. 
‘ಕೆರೆ ಕಳ್ಳ’ ಎಂದು ಆರೋಪ
ನಾಗಮಂಗಲದ ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ ‘ಕೆರೆ ಕಳ್ಳನನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾಂಗ್ರೆಸ್‌ ನಾಯಕರು ಭ್ರಷ್ಟಾಚಾರದ ಬಗ್ಗೆ ಭಾಷಣ ಹೊಡೆಯುತ್ತಾರೆ’ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ಹೆಸರು ಹೇಳದೆ ಆರೋಪಿಸಿದರು. ‘ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಗೆದ್ದಾಗ ಮಾನ ಮರ್ಯಾದೆ ಇದ್ದರೆ ಚಲುವರಾಯಸ್ವಾಮಿ ರಾಜೀನಾಮೆ ಕೊಡಬೇಕಿತ್ತು’ ಎಂದು ವಾಗ್ದಾಳಿ ನಡೆಸಿದರು.  ‘ಉಸ್ತುವಾರಿ ಸಚಿವರಾಗಿ ಅಧಿಕಾರಿಗಳಿಂದ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆ. ಡಿ.ಕೆ.ಶಿವಕುಮಾರ್‌ ಅವರು ಹೆಂಡ ಕುಡಿದವರಂತೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ’ ಎಂದು ಆರೋಪಿಸಿದರು. 
ಹಾಸನದಿಂದ ಮಂಡ್ಯಕ್ಕೆ ಪ್ರೀತಂಗೌಡ ಬೆಂಬಲಿಗರು
- ಹಾಸನ: ‘ಬಿಜೆಪಿ–ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರ ಸಾವಿರಾರು ಬೆಂಬಲಿಗರು ಬುಧವಾರ ಇಲ್ಲಿಂದ ಮಂಡ್ಯಕ್ಕೆ ಪ್ರಯಾಣ ಬೆಳೆಸಿದರು. ‘ಎಚ್‌.ಡಿ.ಕುಮಾರಸ್ವಾಮಿ ಅವರ ಎದುರು ಶಕ್ತಿ ಪ್ರದರ್ಶಿಸಲೆಂದೇ ಪ್ರೀತಂಗೌಡ ಸಾವಿರಾರು ಬೆಂಬಲಿಗರನ್ನು ಮಂಡ್ಯಕ್ಕೆ ಕರೆಸಿಕೊಳ್ಳುತ್ತಿದ್ದಾರೆ’ ಎಂಬ ಚರ್ಚೆಯೂ ಜಿಲ್ಲೆಯಲ್ಲಿ ಶುರುವಾಗಿದೆ. ಪಾದಯಾತ್ರೆ ಆರಂಭಕ್ಕೂ ಮುನ್ನವೇ ಪ್ರೀತಂಗೌಡರ ವಿರುದ್ಧ ಕಿಡಿಕಾರಿದ್ದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ‘ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿದವರ ಜೊತೆಗೆ ಕುಳಿತು ಚರ್ಚಿಸಲು ಆಗುತ್ತದೆಯೇ’ ಎಂದು ಖಾರವಾಗಿ ಪ್ರಶ್ನಿಸಿದ್ದರು. ಬಿಜೆಪಿ ವರಿಷ್ಠ ನಾಯಕರು ಮಾತುಕತೆ ನಡೆಸಿದ ಬಳಿಕ ಪಾದಯಾತ್ರೆಗೆ ಒಪ್ಪಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT