ಮಂಗಳವಾರ, ಜನವರಿ 26, 2021
25 °C
ಗ್ರಾಮ ಪಂಚಾಯಿತಿಯಿಂದ ಪುರಸಭೆಗೆ ಸೇರಿದ 7 ಬಡಾವಣೆಗಳು: ಅಭಿವೃದ್ಧಿ ಕಾಮಗಾರಿ ಮರೀಚಿಕೆ

ಹೊಸ ವಾರ್ಡ್‌ಗಳ ಅಭಿವೃದ್ಧಿಗೆ ಗ್ರಹಣ

ಉಲ್ಲಾಸ್ ಯು.ವಿ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಹೊಸದಾಗಿ ಸೇರ್ಪಡೆಯಾದ ಕೆಲವು ವಾರ್ಡ್‌ಗಳ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಮೂಲ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿಯ ನಿವಾಸಿಗಳು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣ ಪಂಚಾಯಿತಿಯಿಂದ ಪುರಸಭೆಗೆ ಮೇಲ್ದರ್ಜೆಗೇರಿದ ನಂತರ 7 ಹೊಸ ವಾರ್ಡ್‌ಗಳು ಪುರಸಭೆ ವ್ಯಾಪ್ತಿಗೆ ವಿಲೀನಗೊಂಡಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಗದ್ದೇಭೂವನಹಳ್ಳಿ, ಬೀರೇಶ್ವರಪುರ, ಮಾಯಣ್ಣಗೌಡನಕೊಪ್ಪಲು, ಕಸುವಿನಹಳ್ಳಿ, ಮದಲಹಳ್ಳಿ, ಬಳಪದ ಮಂಟಿಕೊಪ್ಪಲು, ಉಪ್ಪಾರಹಳ್ಳಿ, ಬದ್ರಿಕೊಪ್ಪಲು, ಚೌಡೇನಹಳ್ಳಿ, ತೊಳಲಿ, ಬಸವೇಶ್ವರ ನಗರ, ಕೆ.ಮಲ್ಲೇನ
ಹಳ್ಳಿ ಮತ್ತು ಪಾಲಗ್ರಹಾರ ಗ್ರಾಮದ ಕೆಲವು ಭಾಗಗಳು ಪಟ್ಟಣ ವ್ಯಾಪ್ತಿಗೆ ಬಂದಿವೆ.

ಪುರಸಭೆ ವ್ಯಾಪ್ತಿಗೆ ಒಳಪಟ್ಟು ಮೂರು ವರ್ಷಗಳೇ ಕಳೆದರೂ ನೂತನ ವಾರ್ಡ್ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿದೀಪ ಸೇರಿದಂತೆ ನೈರ್ಮಲ್ಯದ ವ್ಯವಸ್ಥೆ ಇಲ್ಲವಾಗಿದೆ. ಜೊತೆಗೆ ಪುರಸಭೆ ಚುನಾವಣೆ ನಡೆದು ಎರಡು ವರ್ಷ ಕಳೆದಿದ್ದರೂ ಆಡಳಿತ ಮಂಡಳಿ ರಚನೆಯಾಗದೆ ಇದ್ದುದೂ ಈ ಪರಿಸ್ಥಿತಿಗೆ ಕಾರಣವಾಗಿದೆ. ಜೊತೆಗೆ ಗ್ರಾ.ಪಂ ವ್ಯಾಪ್ತಿಯ ದಾಖಲೆಗಳನ್ನು ಸಹ ಪುರಸಭೆಗೆ ವರ್ಗಾವಣೆ ಮಾಡದಿರುವುದೂ ಸಮಸ್ಯೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ನೂತನ ಗ್ರಾಮಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದಾಗ ಆಗಿದ್ದ ರಸ್ತೆಗಳು, ಚರಂಡಿಗಳು ಮಾತ್ರ ಇವೆ. ಇಲ್ಲಿ ಹೊಸದಾಗಿ ಯಾವುದೇ ಕಾಮಗಾರಿ ನಡೆಸಿಲ್ಲ. ದಶಕಗಳ ಹಿಂದಿನ ಅಭಿವೃದ್ಧಿ ಕಾಮಗಾರಿ ಮಾಡಲಾಗಿದ್ದು, ಹೊಸದಾಗಿ ಅಭಿವೃದ್ಧಿ ಕೆಲಸಗಳು ಇಲ್ಲವಾಗಿವೆ. ಹಳೆಯ ಕಾಮಗಾರಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಗ್ರಾಮಗಳ ರಸ್ತೆಗಳಲ್ಲಿ ತ್ಯಾಜ್ಯಯುಕ್ತ ನೀರು ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆಗಳ ಪಕ್ಕದಲ್ಲಿರುವ ಗುಂಡಿಗಳಲ್ಲಿ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿ ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯ ಸಮಸ್ಯೆ ಹೆಚ್ಚಾಗುತ್ತಿದೆ. ಎರಡು ಮೂರು ದಿನಗಳಿಗೊಮ್ಮೆ ಅರ್ಧ ಗಂಟೆ ಮಾತ್ರ ಕುಡಿಯುವ ನೀರು ಬರುತ್ತಿದೆ. ನೀರು ಸಂಗ್ರಹ ಮಾಡದಿದ್ದರೆ ಇಲ್ಲಿಯ ಜನರು ದೂರದ ಕೊಳವೆಬಾವಿಗಳಿಂದ ನೀರು ತರಬೇಕಾಗಿದೆ.

ಕಿತ್ತು ಹೋದ ರಸ್ತೆಗಳು: ಪುರಸಭೆಗೆ ಹೊಸದಾಗಿ ಸೇರ್ಪಡೆಯಾದ ಗ್ರಾಮಗಳ ಪೈಕಿ ಎಲ್ಲ ಗ್ರಾಮಗಳಲ್ಲೂ ರಸ್ತೆಗಳು ಕಿತ್ತು ಹೋಗಿವೆ. ಅಲ್ಲಲ್ಲಿ ಗುಂಡಿ ಬಿದ್ದಿದ್ದು, ಮಳೆಗಾಲ ಬಂತೆಂದರೆ ಇಲ್ಲಿ ಓಡಾಡುವುದು ಅಸಾಧ್ಯವಾಗಿದೆ. ಜೊತೆಗೆ ದಶಕಗಳ ಹಿಂದೆ ಕೆಲ ರಸ್ತೆಗಳಿಗೆ ಡಾಂಬರು ಹಾಕಿದ್ದು ಅವುಗಳನ್ನು ಮತ್ತೆ ರಿಪೇರಿ ಮಾಡಿಲ್ಲ. ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿದ ಘಟನೆಗಳು ಸಾಮಾನ್ಯವಾಗುತ್ತಿವೆ.

ಅಪೂರ್ಣ ಚರಂಡಿ ವ್ಯವಸ್ಥೆ: 7 ನೂತನ ವಾರ್ಡ್‌ಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಹಿಂದೆ ಗ್ರಾಮ ಪಂಚಾಯಿತಿಗೆ ಸೇರಿದ್ದಾಗಲೂ ಸಂಪೂರ್ಣ
ವಾಗಿ ಚರಂಡಿ ವ್ಯವಸ್ಥೆ ಇರಲಿಲ್ಲ. ಕಾಮಗಾರಿ ಅಪೂರ್ಣಗೊಂಡು ಗ್ರಾಮಗಳ ತ್ಯಾಜ್ಯಯುಕ್ತ ನೀರು ಸಂಗ್ರಹವಾಗಲು ನಿರ್ದಿಷ್ಟವಾದ ಮಾರ್ಗ ಎಂಬುದೇ ಇರಲಿಲ್ಲ. ಆದ್ದರಿಂದ ಗ್ರಾಮಗಳ ನಡುವಿನಲ್ಲೇ ನೀರು ಸಂಗ್ರಹವಾಗಿ ದುರ್ನಾತ ಮೂಗಿಗೆ ಬಡಿಯುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಈಗ ಪುರಸಭೆ ವ್ಯಾಪ್ತಿಯಲ್ಲೂ ಈ ಪರಿಸ್ಥಿತಿ ಮುಂದುವರಿದಿದೆ.

ಶೀಘ್ರ ಕಾಮಗಾರಿ ಆರಂಭ

‘ಒಳಚರಂಡಿ, ಕುಡಿಯುವ ನೀರಿನ ಕಾಮಗಾರಿ ಕಾರ್ಯಾದೇಶ ಸಿಕ್ಕಿದ್ದು ಶೀಘ್ರ ಕೆಲಸ ಆರಂಭಿಸಲಾಗುವುದು. ಒಳಚರಂಡಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ಕಾಮಗಾರಿ ಮಾಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಹೇಳಿದರು.

‘ಬೀದಿದೀಪ ಅಳವಡಿಕೆಗೆ ಸರ್ಕಾರದಂದಲೇ ಹೊಸ ಯೋಜನೆ ರೂಪಿಸಲಾಗಿದ್ದು, 7 ವರ್ಷಗಳವರೆಗೆ ನಿರ್ವಹಣೆ ಮಾಡಲಾಗುವುದು. ಈಗ ಹೊಸ ಬಡಾವಣೆಗಳಿಗೆ ಹೊಸ ರೂಪ ನೀಡಲು ನಿರ್ಧರಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿವೆ’ ಎಂದು ಹೇಳಿದರು.

ಅನುದಾನ ತಡೆದ ಸರ್ಕಾರ

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಹೊಸ ವಾರ್ಡ್‌ಗಳ ಅಭಿವೃದ್ಧಿಗೆ ಬೆಳ್ಳೂರು ಮತ್ತು ನಾಗಮಂಗಲ ಪುರಸಭೆಯ ಒಳಚರಂಡಿ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದ ₹ 80 ಕೋಟಿ ಅನುದಾನಗಳನ್ನು ಬಿಜೆಪಿ ಸರ್ಕಾರ ತಡೆದಿದೆ’ ಎಂದು ಶಾಸಕ ಸುರೇಶ್‌ಗೌಡ ಆರೋಪಿಸಿದರು.

‘ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅನುಮೋದನೆ ದೊರೆತು ಟೆಂಡರ್ ಆಗುವ ಹಂತದಲ್ಲಿ ತಡೆಹಿಡಿಯಲಾಗಿದೆ. ಕೊರೊನಾ ಲಾಕ್‌ಡೌನ್‌ಗಿಂತಲೂ ಮೊದಲು ಅನುದಾನ ತಡೆಯಲಾಗಿದೆ. ಆದರೂ ಕೊರೊನಾ ಸಂಕಷ್ಟದಿಂದ ತಡೆಹಿಡಿಯಲಾಗಿದೆ ಎಂದು ಸರ್ಕಾರ ಕಾರಣ ನೀಡುತ್ತಿದೆ’ ಎಂದರು.

‘ಸರ್ಕಾರವು ನಮ್ಮ‌ ಮೇಲಿನ ಹೊಟ್ಟೆಕಿಚ್ಚಿನಿಂದ ತಡೆಹಿಡಿದಿದೆ. ಮುಂದಿನ ಕೆಲ ತಿಂಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಗಬಹುದು ಎಂಬ ಆಶಾಭಾವನೆಯಿದೆ’ ಎಂದರು.

ಸಾರ್ವಜನಿಕರು ಏನಂತಾರೆ?

ಸ್ವಚ್ಛತೆ ಮರೀಚಿಕೆ

ಗ್ರಾಮದಲ್ಲಿ ಚರಂಡಿಗಳು ಹಾಳಾಗಿದ್ದು, ಕೊಳಕು ತುಂಬಿ ನಿಂತಿವೆ. ಅಲ್ಲದೆ, ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಿಲ್ಲ. ಪುರಸಭೆಯಿಂದ ಸ್ವಚ್ಛಗೊಳಿಸುವ ಕೆಲಸವೂ ಆಗುತ್ತಿಲ್ಲ. ಹಲವು ಬಾರಿ ಪುರಸಭೆಗೆ ಪತ್ರ ಬರೆದು ಸಮಸ್ಯೆಗಳನ್ನು ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳನ್ನು ಕೇಳಿದರೆ ಆಡಳಿತ ಮಂಡಳಿ ರಚನೆಯಾಗಿಲ್ಲ ಎಂಬ ಉತ್ತರ ನೀಡುತ್ತಾರೆ.

ಬಸವರಾಜು, ಗದ್ದೇಭೂವನಹಳ್ಳಿ

ಪುರಸಭೆ ಸದಸ್ಯ ಎಲ್ಲಿದ್ದಾರೆ?

ನಮ್ಮ ವಾರ್ಡ್‌ನಿಂದ ಆಯ್ಕೆಯಾದ ಅಭ್ಯರ್ಥಿ ಬೆಂಗಳೂರು ಸೇರಿದ್ದು, ಗ್ರಾಮದ ಕಡೆ ತಲೆಹಾಕಿಲ್ಲ. ಗ್ರಾಮದ ಅಭಿವೃದ್ಧಿಯಾಗಲಿ ಸಮಸ್ಯೆಗಳನ್ನಾಗಲಿ ಕೇಳಿಲ್ಲ. ರಸ್ತೆಗಳು ಗುಂಡಿ ಬಿದ್ದಿವೆ, ಚರಂಡಿಗಳು ಮುಚ್ಚಿ ಹೋಗಿವೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ.

ನಾರಾಯಣ್, ಬದ್ರಿಕೊಪ್ಪಲು

ಸಂಕಷ್ಟದ ಪರಿಸ್ಥಿತಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದಾಗಲೇ ಹಲವು ಗ್ರಾಮಾಭಿವೃದ್ಧಿ ಕೆಲಸಗಳು ಜರುಗಿದ್ದವು. ಆದರೆ, ಪುರಸಭೆಗೆ ಸೇರಿದ ನಂತರ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲ ಸೌಕರ್ಯಗಳಿಲ್ಲದೆ ಜನ ಕಾಲ ಕಳೆಯುವಂತಾಗಿದೆ

ಸುರೇಶ್, ಬೀರೇಶ್ವರಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.