ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಕೆಲಸ ಮೈಸೂರಿನಲ್ಲಿ ವಾಸ: ಕೇಂದ್ರ ಸ್ಥಾನದಲ್ಲಿ ಇಲ್ಲದ ಅಧಿಕಾರಿಗಳು

ಮಧ್ಯಾಹ್ನದ ನಂತರ ಕಚೇರಿ ಖಾಲಿ, ಕುಸಿದ ಆಡಳಿತ ಯಂತ್ರ
Last Updated 8 ಜೂನ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಾಧಿಕಾರಿಗಳು, ಇತರ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ವಾಸ ಮಾಡದೇ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಬಹುತೇಕ ಅಧಿಕಾರಿಗಳು ಮೈಸೂರು, ಬೆಂಗಳೂರಿನಿಂದ ಬಂದು ಹೋಗುವ ಕಾರಣ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ.

ನಿಯಮದ ಪ್ರಕಾರ ಯಾವುದೇ ಅಧಿಕಾರಿ ತಾನು ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸ್ಥಳದಲ್ಲೇ ವಾಸ ಮಾಡಬೇಕು, ಆದರೆ ಶೇ 90ರಷ್ಟು ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ವಾಸ ಮಾಡುತ್ತಿಲ್ಲ. ನಗರದಲ್ಲಿ ಸರ್ಕಾರಿ ವಸತಿ ಗೃಹ ಇದ್ದರೂ ಕೇಂದ್ರದಲ್ಲಿ ಇಲ್ಲದೇ ಬೇರೆ ನಗರಗಳಿಂದ ಬಂದು ಹೋಗುತ್ತಾರೆ. ಮೈಸೂರು 40 ಕಿ.ಮೀ ಅಂತರದಲ್ಲಿರುವ ಕಾರಣ ಹೆಚ್ಚಿನವರು ಅಲ್ಲಿಯೇ ಉಳಿದುಕೊಂಡಿದ್ದಾರೆ, ಕೆಲವರು ಬೆಂಗಳೂರಿನಿಂದಲೂ ಬರುತ್ತಾರೆ.

ಬಹುತೇಕ ಎಲ್ಲಾ ಇಲಾಖೆಗಳ ಉಪ ನಿರ್ದೇಶಕರು ಹೊರಗಿನಿಂದ ಬರುತ್ತಾರೆ. ಬೆಳಿಗ್ಗೆ 10ಗಂಟೆಯಿಂದ 11.30ರ ಅವಧಿಯಲ್ಲಿ ವಿವಿಧ ಇಲಾಖೆಗಳ ಜೀಪು, ಕಾರುಗಳು ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಬಳಿ ನಿಂತಿರುತ್ತವೆ. ಅಧಿಕಾರಿಗಳು ವೋಲ್ವೊ ಬಸ್‌ಗಳಲ್ಲಿ ಬಂದಿಳಿಯುತ್ತಾರೆ. ಕಾಯುತ್ತಾ ನಿಂತಿರುವ ವಾಹನಗಳು ಅಧಿಕಾರಿಗಳನ್ನು ಹತ್ತಿಸಿಕೊಂಡು ಕಚೇರಿಗೆ ತೆರಳುತ್ತವೆ. ಬೆಳಿಗ್ಗೆ ಕಚೇರಿಗೆ ಬರುವುದು ಕೂಡ ತಡವಾಗುತ್ತಿದ್ದು ಆಡಳಿತ ಯಂತ್ರ ಕುಸಿತ ಕಂಡಿದೆ.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಕೃಷಿ, ತೋಟಗಾರಿಕೆ, ಕೈಗಾರಿಕೆ, ಗಣಿ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌, ಜಲಮಂಡಳಿ, ಆರೋಗ್ಯ, ಕ್ರೀಡೆ, ಶಿಕ್ಷಣ, ಸಹಕಾರ ಇಲಾಖೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಕೇಂದ್ರ ಸ್ಥಳದಲ್ಲಿ ಇಲ್ಲ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ ಸಿಬ್ಬಂದಿ ಕೂಡ ಬೇರೆ ನಗರಗಳಿಂದಲೇ ಬಂದು ಕೆಲಸ ಮಾಡುತ್ತಾರೆ.

ಸಭೆ ಸಮಾರಂಭ ಇದ್ದಾಗ ಮಾತ್ರ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರುತ್ತಾರೆ, ಇಲ್ಲದಿದ್ದರೆ ತಡವಾಗಿ ಬರುತ್ತಾರೆ. ಮಧ್ಹಾಹ್ನ 3 ಗಂಟೆಗೆಲ್ಲಾ ಕಚೇರಿಗಳಲ್ಲಿ ಸಿಗುವುದಿಲ್ಲ. ಕಚೇರಿಗಳು ಖಾಲಿ ಇರುತ್ತವೆ, ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂದು ವಿವಿಧ ಸಂಘಟನೆಗಳ ಮುಖಂಡರು ಆರೋಪಿಸುತ್ತಾರೆ.

‘ಜಿಲ್ಲೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗೆ ಈ ವಿಚಾರ ಗೊತ್ತಿದೆ, ಆದರೂ ಕ್ರಮ ಜರುಗಿಸುವುದಿಲ್ಲ. ಇಲಾಖೆಗಳ ಮುಖ್ಯಸ್ಥರೇ ಕೇಂದ್ರ ಸ್ಥಳದಲ್ಲಿ ಇರುವುದಿಲ್ಲ, ಹೀಗಾಗಿ ಇತರ ಸಿಬ್ಬಂದಿಯೂ ಅದೇ ದಾರಿ ಅನುಸರಿಸುತ್ತಿದ್ದಾರೆ. ಹಣ ಕೊಟ್ಟು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ, ಆದರೆ ಬೆಂಗಳೂರು ಅಥವಾ ಮೈಸೂರಿನಲ್ಲಿ ವಾಸ ಮಾಡುತ್ತಾರೆ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಆರೋಪಿಸಿದರು.

ಸ್ಥಳದಲ್ಲಿ ಇಲ್ಲದ ವೈದ್ಯರು: ನಗರದ ಮಿಮ್ಸ್‌ ಆಸ್ಪತ್ರೆಯ ಬಹುತೇಕ ತಜ್ಞ ವೈದ್ಯರು ಕೂಡ ಹೊರಗಿನಿಂದ ಬಂದು ಹೋಗುತ್ತಾರೆ. ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ವೈದ್ಯರಿಗಾಗಿ ಸುಸಜ್ಜಿತವಾದ ವಸತಿ ಸಂಕೀರ್ಣ ನಿರ್ಮಾಣ ಮಾಡಿದ್ದರೂ ಬಹುತೇಕ ಫ್ಲ್ಯಾಟ್‌ಗಳು ಖಾಲಿ ಉಳಿದಿವೆ. ತರಬೇತಿ ವೈದ್ಯರು ಮಾತ್ರ ಕೇಂದ್ರ ಸ್ಥಳದಲ್ಲಿದ್ದು ಉಳಿದವರು ಹೊರಗಿದ್ದಾರೆ.

‘ವೈದ್ಯರು ಕರ್ತವ್ಯಕ್ಕೂ ಹಾಜರಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲರೂ ಸಿಗುತ್ತಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಕರುನಾಡ ಸೇವರು ಸಂಘಟನೆ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಅಸಮಾಧಾನ ವ್ಯಕ್ತಪಡಿಸಿದರು.

****

ವಸತಿಗೃಹಗಳ ಒಳಬಾಡಿಗೆ ದಂಧೆ

ಬಹುತೇಕ ಅಧಿಕಾರಿಗಳು, ಇತರ ಸಿಬ್ಬಂದಿ ಸರ್ಕಾರದಿಂದ ಪಡೆದಿರುವ ವಸತಿ ಗೃಹಗಳನ್ನು ಬೇರೆಯವರಿಗೆ ಉಪ ಬಾಡಿಗೆ, ಒಳಬಾಡಿಗೆ ನೀಡಿರುವುದು ಬೆಳಕಿಗೆ ಬಂದಿದೆ, ಇದು ದಂಧೆಯ ಸ್ವರೂಪ ಪಡೆದಿದೆ. ಈ ಕುರಿತು ವಿವಿಧ ಇಲಾಖೆಗಳಲ್ಲಿ ದೂರು ದಾಖಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ವಸತಿ ಗೃಹಗಳನ್ನು ತಾವು ಪಾವತಿಸುವ ಎಚ್‌ಆರ್‌ಎಗಿಂತಲೂ 4–5 ಪಟ್ಟು ಹೆಚ್ಚಿಗೆ ಉಪ ಬಾಡಿಗೆ ನೀಡಿದ್ದಾರೆ. ಕಾವೇರಿ ನೀರಾವರಿ ನಿಗಮದ ಅತೀ ಹೆಚ್ಚು ವಸತಿ ಗೃಹಗಳನ್ನು ಒಳ ಬಾಡಿಗೆ ನೀಡಿರುವ ದೂರುಗಳಿವೆ. ಕೆಲವರು ವರ್ಗಾವಣೆಯಾಗಿದ್ದರೂ, ನಿವೃತ್ತಿಯಾಗಿದ್ದರೂ ವಸತಿ ಗೃಹ ಖಾಲಿ ಮಾಡದಿರುವುದು ಕಂಡುಬಂದಿದೆ.

‘ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ವಸತಿ ಗೃಹಗಳನ್ನು ಉಪ ಬಾಡಿಗೆ ನೀಡಿರುವುದನ್ನು ಸಾಕ್ಷಿ ಸಮೇತ ಕಾರ್ಯಪಾಲಕ ಎಂಜಿನಿಯರ್‌, ಅಧೀಕ್ಷಕ ಎಂಜಿನಿಯರ್‌, ಮುಖ್ಯ ಎಂಜಿನಿಯರ್‌, ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಕೊಟ್ಟಿದ್ದೇನೆ. ಇಲ್ಲಿಯವರೆಗೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಆರ್‌ಟಿಐ ಕಾರ್ಯಕರ್ತ ಪುಟ್ಟಸ್ವಾಮಿಗೌಡ ಹೇಳಿದರು.

******

ಅಧಿಕಾರಿಗಳು ಕೇಂದ್ರ ಸ್ಥಳದಲ್ಲೇ ಇರಬೇಕು, ಈ ಕುರಿತು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ದಿಢೀರ್‌ ಭೇಟಿ ನೀಡಿ, ಪರಿಶಿಲಿಸಿ ತಡವಾಗಿ ಬರುವವರ ವಿರುದ್ಧ ಕ್ರಮ ಜರುಗಿಸಲಾಗುವುದು

–ಎಸ್‌.ಅಶ್ವತಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT