ಬುಧವಾರ, ಜನವರಿ 26, 2022
26 °C

ಕುಟುಂಬಕ್ಕೊಬ್ಬನೇ ಶಾಸಕ; ಸಂವಿಧಾನಕ್ಕೆ ತಿದ್ದುಪಡಿ ತರಲಿ –ಎಚ್‌.ಡಿ.ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಒಂದು ಕುಟುಂಬದಲ್ಲಿ ಎಷ್ಟು ಜನರು ಶಾಸಕರಾಗಬೇಕು ಎಂಬ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟತೆ ಇಲ್ಲ. ಮನೆಗೆ ಒಬ್ಬರೇ ಶಾಸಕರಾಗಬೇಕು ಎಂದು ಸಂವಿಧಾನಕ್ಕೆ ತಿದ್ದುಪಡಿ ತಂದರೆ ಅದನ್ನು ಪಾಲಿಸಬಹುದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ಹೇಳಿದರು.

‘ದೇವೇಗೌಡರ ಮನೆಯಲ್ಲಿ ಮಾತ್ರ ಕುಟುಂಬ ರಾಜಕಾರಣವಿಲ್ಲ, ಸಿದ್ದರಾಮಯ್ಯ ಪುತ್ರ ಕೂಡ ಶಾಸಕರಾಗಿದ್ದಾರೆ. ಅವರ ಹಿರಿಯ ಪುತ್ರ ನಿಧನರಾದ ನಂತರ ವೈದ್ಯ ವೃತ್ತಿಯಲ್ಲಿದ್ದ ಇನ್ನೊಬ್ಬ ಮಗನನ್ನು ಕರೆತಂದು ಶಾಸಕರನ್ನಾಗಿ ಮಾಡಿದ್ದಾರೆ. ಒಂದು ಕುಟುಂಬದಲ್ಲಿ ಇಷ್ಟೇ ಜನರು ಶಾಸಕರು ಇರಬೇಕು ಎಂಬ ಬಗ್ಗೆ ಸಾಂವಿಧಾನಿಕ ನಿಯಮವಿಲ್ಲ. ಈ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ತರಲಿ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳುತ್ತಿಲ್ಲ, ಕಾಂಗ್ರೆಸ್‌ ಹಾಗೂ ಬಿಜೆಪಿ ನಮಗೆ ಸಮಾನ ಶತ್ರುಗಳು. ಆದರೆ, ಜೆಡಿಎಸ್‌ ಅಭ್ಯರ್ಥಿ ಇಲ್ಲದ ಕಡೆ ಬಿಜೆಪಿ ಬೆಂಬಲಿಸುವಂತೆ ಬಿ.ಎಸ್‌.ಯಡಿಯೂರಪ್ಪ ವೈಯಕ್ತಿಕವಾಗಿ ನನ್ನನ್ನು ಕೇಳಿಕೊಂಡಿದ್ದಾರೆ. 2–3 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿಸುವ ಕುರಿತು ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸುತ್ತೇನೆ’ ಎಂದರು.

ಅಧಿವೇಶನದಲ್ಲಿ ಹೋರಾಟ: ‘ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯಮಗಳ ನೆಪದಲ್ಲಿ ಇಲ್ಲಿಯವರೆಗೂ ರೈತರಿಗೆ ಪರಿಹಾರ ವಿತರಣೆ ಮಾಡಿಲ್ಲ. ನಿಯಮಗಳನ್ನು ಬದಿಗೊತ್ತಿ ಶೀಘ್ರ ರೈತರಿಗೆ ಪರಿಹಾರ ನೀಡಬೇಕು. ರೈತರ ಖಾತೆಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಈ ಕುರಿತು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು’ ಎಂದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಚಕ್ರವ್ಯೂಹ ಹೆಣೆದು ನಮ್ಮ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಯನ್ನು ಸೋಲಿಸಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರು ಎನ್‌.ಅಪ್ಪಾಜಿಗೌಡರನ್ನು ಗೆಲ್ಲಿಸಿ ಆ ಸೋಲಿನ ನೋವಿನಿಂದ ನಮ್ಮನ್ನು ಬಿಡಗಡೆಗೊಳಿಸಲಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು