ಶುಕ್ರವಾರ, ಫೆಬ್ರವರಿ 21, 2020
16 °C
ಹೃದಯ ಭಾಗದಲ್ಲೂ ಕತ್ತಲು, ನಾಯಿಗಳ ಹಾವಳಿ ನಡುವೆ ಓಡಾಡುವುದೇ ಸಾಹಸ

ಮಂಡ್ಯ: ನಗರದ ವಿವಿಧೆಡೆ ಇಲ್ಲದ ಬೆಳಕು: ಕತ್ತಲಲ್ಲಿ ಕಳ್ಳರ ಕೈಚಳಕ

ಎಂ.ಎನ್.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ನಗರದ ವಿವಿಧ ಬಡಾವಣೆಗಳಲ್ಲಿ ಬೀದಿದೀಪಗಳು ಹಾಳಾಗಿದ್ದು, ರಾತ್ರಿಯ ವೇಳೆ ಓಡಾಡಲು ಜನರು ಕಷ್ಟಪಡುವಂತಾಗಿದೆ. ಇದನ್ನೇ ಬಳಸಿಕೊಳ್ಳುತ್ತಿರುವ ಕಳ್ಳರು ಸರಗಳ್ಳತನ, ಮನೆಯಲ್ಲಿ ಕಳ್ಳತನ ಮಾಡುವ ಮೂಲಕ ತಮ್ಮ ಕೈಚಳಕ ತೋರಿಸುತ್ತಿದ್ದಾರೆ.

ನಗರದ ಹೃದಯಭಾಗದಲ್ಲಿ ಕೆಟ್ಟುಹೋಗಿರುವ ಬೀದಿದೀಪಗಳಿಗೆ ಹೊಸ ಬಲ್ಬ್‌ ಅಳವಡಿಸದ ಕಾರಣ ಜನರು ಕತ್ತಲು ನಡುವೆ ಭಯದಿಂದ ಓಡಾಡುವಂತಾಗಿದೆ. ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು, ಕತ್ತಲಲ್ಲಿ ನಾಯಿಗಳಿಂದ ಕಚ್ಚಿಸಿಕೊಳ್ಳುವ ಘಟನೆಗಳೂ ಸಾಮಾನ್ಯವಾಗಿವೆ.

ಜೊತೆಗೆ ವಿವಿಧ ಬಡಾವಣೆಯಲ್ಲಿ ಒಳಚರಂಡಿ, ರಸ್ತೆ ಕಾಮಗಾರಿಗಾಗಿ ನೆಲ ಅಗೆಯುತ್ತಿದ್ದಾರೆ. ಹಲವೆಡೆ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ರಾತ್ರಿಯ ವೇಳೆ ಬೆಳಕಿಲ್ಲದ ಕಾರಣ ಜನರು, ವಾಹನ ಸವಾರರು ಗುಂಡಿಗೆ ಬಿದ್ದು ಗಾಯಗೊಳ್ಳುತ್ತಿದ್ದಾರೆ.

ಲಕ್ಷ್ಮಿಜನಾರ್ದನ ಶಾಲೆಯಿಂದ ವಿಶ್ವೇಶ್ವರಯ್ಯ ಕ್ರೀಡಾಂಗಣದವರೆಗೆ (ಕೆ.ಆರ್‌.ರಸ್ತೆ) ಇರುವ ಬೀದಿದೀಪಗಳು ಕೆಟ್ಟು ಹಲವು ದಿನಗಳೇ ಆಗಿವೆ. ಜನರು ಕತ್ತಲಲ್ಲೇ ಓಡಾಡುತ್ತಿದ್ದು, ಸಮಸ್ಯೆ ಅನುಭವಿಸುತ್ತಿದ್ದಾರೆ. ಸಮೀಪದಲ್ಲೇ ಫಾಸ್ಟ್‌ಫುಡ್‌ ಅಂಗಡಿಗಳಿದ್ದು, ಬೀದಿನಾಯಿಗಳು ಹೆಚ್ಚಾಗಿವೆ. ಕತ್ತಲಲ್ಲಿ, ಬೀದಿನಾಯಿಗಳ ನಡುವೆ ಓಡಾಡುವುದು ಕಷ್ಟವಾಗುತ್ತಿದೆ. ಈ ಕುರಿತು ಹಲವರು ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇನ್ನೂ ಬೀದಿದೀಪ ಅಳವಡಿಸಿಲ್ಲ. ಹೊರಾಂಗಣ ಕ್ರೀಡಾಂಗಣದ ರಸ್ತೆಯಲ್ಲಿ ಸದಾ ಕತ್ತಲು ಆವರಿಸಿದ್ದು, ಅಲ್ಲಿ ಒಬ್ಬಂಟಿಯಾಗಿ ನಡೆದುಹೋಗುವುದೇ ಕಷ್ಟವಾಗಿದೆ.

‘ಕೆ.ಆರ್‌.ರಸ್ತೆಯಲ್ಲಿ ಪ್ರತ್ಯೇಕ ವಿದ್ಯುತ್‌ ಲೈನ್‌ ಅಳವಡಿಸಿರುವ ಕಾರಣ ಸಿಬ್ಬಂದಿ ಲೈಟ್‌ ಹಾಕುವುದನ್ನು ಮರೆತಿರಬಹುದು. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು 11ನೇ ವಾರ್ಡ್‌ ನಗರಸಭೆ ಸದಸ್ಯ ಎಂ.ಪಿ.ಅರುಣ್‌ಕುಮಾರ್‌ ಹೇಳಿದರು.

ಹೊಳಲು ವೃತ್ತದಲ್ಲಿ ಹೈಮಾಸ್ಟ್‌ ದೀಪವಿದೆ. ಅಲ್ಲಿಂದ ಮುಂದೆ ಶಂಕರಮಠ ಕಡೆಗೆ ಮುಂದೆ ಸಾಗಿದರೆ ಕತ್ತಲು ಸ್ವಾಗತ ಕೋರುತ್ತದೆ. ಮುಸ್ಲಿಂ ಬಡಾವಣೆ, ಕಲ್ಲಹಳ್ಳಿವರೆಗೂ ಜನರು ಓಡಾಡಲು ಕಷ್ಟಪಡುತ್ತಾರೆ. ರಸ್ತೆಯುದ್ದಕ್ಕೂ ವಿದ್ಯುತ್‌ ಕಂಬಗಳಲ್ಲಿ ವಿದ್ಯುತ್‌ ದೀಪ ಅಳವಡಿಸಲಾಗಿದೆ. ಆದರೆ, ದೀಪಕ್ಕೆ ಬಲ್ಬ್‌ ಅಳವಡಿಸದ ಕಾರಣ ಕತ್ತಲಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಪದೇ ಪದೇ ಸರಗಳ್ಳತನ ಪ್ರಕರಣಗಳು ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಬಹುತೇಕ ನೌಕರರು, ಅಧಿಕಾರಿಗಳೇ ವಾಸಿಸುವ ಕಲ್ಲಹಳ್ಳಿಯ ವಿವಿಧ ಅಡ್ಡರಸ್ತೆಗಳಲ್ಲಿ ಬೀದಿದೀಪಗಳು ಹಾಳಾಗಿವೆ. ಬೆಲ್ಲದ ಮಾರುಕಟ್ಟೆ ಮುಂದೆ ಹೈಮಾಸ್ಟ್‌ ದೀಪವಿದೆ. ಮುಂದಕ್ಕೆ ತೆರಳುತ್ತಿದ್ದಂತೆ ಭಯವಾಗುತ್ತದೆ. ರಾತ್ರಿ 10 ಗಂಟೆಯ ನಂತರ ಜನರ ಓಡಾಟ ಕಡಿಮೆಯಾಗುವ ಪರಿಣಾಮ  ಒಬ್ಬಂಟಿಯಾಗಿ ಓಡಾಡುವುದು ಅಸಾಧ್ಯವಾಗಿದೆ. ಇಲ್ಲಿ ಆಗಾಗ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಲೇ ಇವೆ.

‘ಕಲ್ಲಹಳ್ಳಿಯಲ್ಲಿ ರಾತ್ರಿ 8 ಗಂಟೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರಲು ಭಯವಾಗುತ್ತದೆ. ರಸ್ತೆಗಳಲ್ಲೂ ಕತ್ತಲು ಆವರಿಸಿರುತ್ತದೆ. ಬೀದಿದೀಪಗಳು ಹಾಳಾಗಿ ಹಲವು ತಿಂಗಳುಗಳೇ ಕಳೆದರೂ ದುರಸ್ತಿ ಮಾಡಿಲ್ಲ’ ಎಂದು ಕಲ್ಲಹಳ್ಳಿ ಗ್ರಾಮದ 19ನೇ ಅಡ್ಡರಸ್ತೆ ನಿವಾಸಿಯಾದ ಎನ್‌.ರಾಮಚಂದ್ರಪ್ಪ ಆರೋಪಿಸಿದರು.

ನಗರದಿಂದ ಕೊಂಚ ದೂರ ದಲ್ಲಿರುವ ಬಡಾವಣೆಗಳಲ್ಲಿ ಬೀದಿ ದೀಪಗಳ ಸಮಸ್ಯೆ ಹೆಚ್ಚಾಗಿದೆ. ಕೆರೆಯಂಗಳದಲ್ಲಿ ರಾತ್ರಿ ವೇಳೆ ಜನರು ಓಡಾಡುವುದೇ ಇಲ್ಲ. ಗುತ್ತಲು ಬಡಾವಣೆಯ ಕೆಲವೆಡೆ ದೀಪಗಳಿಲ್ಲ. ಮರೀಗೌಡ ಬಡಾವಣೆ, ಕಾವೇರಿ ನಗರ, ಹಾಲಹಳ್ಳಿ ಸೇರಿ ವಿವಿಧೆಡೆ ಬೆಳಕಿಲ್ಲದೆ ಜನರು ಪರದಾಡುತ್ತಿದ್ದಾರೆ.

ಸಿಹಿನೀರಿನಕೊಳ ಬಡಾವಣೆಯ ಬಹುತೇಕ ಕಡೆ ಬೆಳಕಿಲ್ಲದ ಕಾರಣ ಕಳ್ಳರು ಮನೆ, ಅಂಗಡಿಗಳಲ್ಲಿ ಕೈಚಳಕ ತೋರುತ್ತಿದ್ದಾರೆ. ಈ ಕುರಿತು ನಗರಸಭೆ ಪೌರಾಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರುತ್ತಾರೆ.

‘ನಗರಸಭೆ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದರೂ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ. ಕಳೆದ ಎರಡು ವರ್ಷಗಳಿಂದ ನಗರಸಭೆಯಿಂದ ಒಂದೂ ಬಲ್ಬ್‌ ಅಳವಡಿಸಿಲ್ಲ. ಹೊಸ ದೀಪ ಅಳವಡಿಕೆ ಮಾತು ಹಾಗಿರಲಿ, ಇರುವ ದೀಪಕ್ಕೆ ಟ್ಯೂಬ್‌, ಬಲ್ಬ್‌ ಅಳವಡಿಸಿಲ್ಲ. ಅಧಿಕಾರಿಗಳ ಆಟ ಎಲ್ಲೆ ಮೀರಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಮೂಲಸೌಲಭ್ಯಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ನಗರಸಭಾ ಸದಸ್ಯರೊಬ್ಬರು ಆರೋಪಿಸಿದರು.

602 ದೀಪಗಳ ಅಳವಡಿಕೆಗಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವ

ನಗರದ ವಿವಿಧ ಬಡಾವಣೆಗಳಲ್ಲಿ 602 ಬೀದಿದೀಪಗಳು ಹಾಳಾಗಿರುವುದನ್ನು ನಗರಸಭೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಪತ್ತೆ ಕಾರ್ಯ ಮುಗಿದು ಹಲವು ತಿಂಗಳು ಕಳೆದರೂ ಇಲ್ಲಿಯವರೆಗೆ ಹೊಸ ದೀಪಗಳ ಅಳವಡಿಕೆ ಮಾಡಿಲ್ಲ.

‘ನಗರಸಭೆ ಪೌರಾಯುಕ್ತರು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ತುರ್ತು ಅಗತ್ಯವಿರುವ ಕಾರಣ ಜಿಲ್ಲಾಧಿಕಾರಿಯೇ ಹೊಸ ದೀಪ ಅಳವಡಿಕೆಗೆ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ, ಅವರು ಪೌರಾಡಳಿತ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದಾರೆ. ಆಡಳಿತ ಮಂಡಳಿ ಇಲ್ಲದ ಕಾರಣ ನಗರಸಭಾ ಸದಸ್ಯರ ಮಾತು ನಡೆಯುತ್ತಿಲ್ಲ’ ಎಂದು ಸದಸ್ಯರು ಆರೋಪಿಸಿದರು.

ಎಲ್‌ಇಡಿ ದೀಪ ಅಳವಡಿಕೆ ಯಾವಾಗ?

ವಿದ್ಯುತ್‌ ಉಳಿತಾಯ, ಸಮರ್ಪಕ ಬೀದಿದೀಪ ನಿರ್ವಹಣೆ ಉದ್ದೇಶದಿಂದ ನಗರದಾದ್ಯಂತ ಎಲ್‌ಇಡಿ ಅಳವಡಿಕೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಇಲ್ಲಿಯವರೆಗೂ ನಗರದ ಬೀದಿಗಳಲ್ಲಿ ಎಲ್‌ಇಡಿ ಬಲ್ಬ್‌ಗಳು ಬಂದಿಲ್ಲ. ಈಗ ಬೀದಿ ದೀಪಗಳಲ್ಲಿ ಸಾಮಾನ್ಯ ಬಲ್ಬ್‌, ಟ್ಯೂಬ್‌ಲೈಟ್‌, ಸೌರದೀಪ ಮಾತ್ರ ಇವೆ.

‘ಎಷ್ಟು ಎಲ್‌ಇಡಿ ದೀಪಗಳ ಅವಶ್ಯಕತೆ ಇದೆ ಎಂಬ ಬಗ್ಗೆ ಖಾಸಗಿ ಕಂಪನಿಯೊಂದು ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಯ ವರದಿ ಬಂದ ನಂತರ ಎಲ್ಇಡಿ ಅಳವಡಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್‌ ಹೇಳಿದರು.

ಜನ ಏನಂತಾರೆ?

ಸದಸ್ಯರಿಗೆ ಅಧಿಕಾರವಿಲ್ಲ

ಹಾಲಹಳ್ಳಿಯಲ್ಲಿ ಬಹುತೇಕ ರಸ್ತೆಗಳು ಕಲ್ಲು, ಗುಂಡಿಗಳಿಂದ ಕೂಡಿವೆ. ಹಗಲಿನಲ್ಲೂ ಅಲ್ಲಿ ಎಡವಿ ಬೀಳುತ್ತೇವೆ. ರಾತ್ರಿಯ ವೇಳೆಯಲ್ಲಿ ಈ ಭಾಗದಲ್ಲಿ ಬೀದಿದೀಪ ಇಲ್ಲದ ಕಾರಣ ನಡೆದು ಹೋಗುವುದೇ ಕಷ್ಟವಾಗಿದೆ. ಹಲವು ಬಾರಿ ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ನಗರಸಭಾ ಸದಸ್ಯರನ್ನು ಕೇಳಿದರೆ, ತಮಗೆ ಅಧಿಕಾರವಿಲ್ಲ ಎಂದು ಉತ್ತರ ನೀಡುತ್ತಿದ್ದಾರೆ.

–ಜಯಣ್ಣ, ಹಾಲಹಳ್ಳಿ ಬಡಾವಣೆ

***

ಮೂಲಸೌಲಭ್ಯ ಒದಗಿಸಲಿ

ಮರೀಗೌಡ ಪೈಪ್‌ ಅಳವಡಿಸಲು ರಸ್ತೆಯನ್ನು ಕಿತ್ತುಹಾಕಿ ಹಲವು ತಿಂಗಳುಗಳೇ ಕಳೆದಿವೆ. ರಸ್ತೆಯಲ್ಲಿ ಗಾಡಿ ಓಡಿಸುವುದೇ ಕಷ್ಟವಾಗಿದೆ. ಕರೆಂಟ್‌ ಇಲ್ಲದಿದ್ದರೆ ರಸ್ತೆ ಗುಂಡಿಗೆ ಬೀಳುವುದು ಸಾಮಾನ್ಯವಾಗಿದೆ. ಬೀದಿ
ದೀಪಗಳ ಸೌಲಭ್ಯ ಸಾರ್ವಜನಿಕರಿಗೆ ಅಗತ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಆದ್ಯತೆಯ ಮೇರೆಗೆ ಒದಗಿಸಬೇಕು.

–ಮೂರ್ತಿ, ಮರೀಗೌಡ ಬಡಾವಣೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು