ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ವಿರೋಧಿಸಿ ಮಳವಳ್ಳಿಯಲ್ಲಿ ಜೆಡಿಎಸ್ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ
Last Updated 25 ಜೂನ್ 2021, 2:08 IST
ಅಕ್ಷರ ಗಾತ್ರ

ಮಳವಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದ ಏರಿಕೆಯಾಗಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ಕೂಡಲೇ ಇಳಿಕೆ ಮಾಡುವಂತೆ ಆಗ್ರಹಿಸಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸೇರಿದ್ದ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ‘ಕಳೆದ ಏಳು ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಕಷ್ಟು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಅಲ್ಲದೇ ಅಡುಗೆ ಅನಿಲ ದರವನ್ನು ಪದೇ ಪದೇ ಹೆಚ್ಚಳ ಮಾಡಿದ್ದು, ಇದ್ದರಿಂದ ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ಗಡಿ ದಾಟಿದೆ. ಡೀಸೆಲ್ ದರ ಶತಕದ ಬಳಿ ಬಂದು ನಿಂತಿದೆ. ಇಂತಹ ನೀತಿಗಳಿಂದ ಸರಕು ಸಾಗಣೆ ವೆಚ್ಚ, ಬಸ್, ಟ್ಯಾಕ್ಸಿ ಮತ್ತು ಆಟೊ ದರಗಳು ಪ್ರಯಾಣಿಕರ ಮೇಲೆ ಹೊರೆ ತಂದಿವೆ’ ಎಂದರು.

ಕೋವಿಡ್‌ನಿಂದ ಜನರು ಸಂಕಷ್ಟದಲ್ಲಿದ್ದು, ಕೂಡಲೇ ತೈಲ ದರ ಮತ್ತು ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಇಲ್ಲದಿದ್ದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವ ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇಗೌಡ ಮಾತನಾಡಿ, ಕೋವಿಡ್‌ನಿಂದ ಸಾವನ್ನಪ್ಪಿದ್ದವರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಬೇಕು. ಕೋವಿಡ್ ಸೋಂಕಿತರ ಕುಟುಂಬ ನಿರ್ವಹಣೆಗೆ ಸಹಾಯಧನ ರೂಪದಲ್ಲಿ ತಿಂಗಳಿಗೆ ₹ 10 ಸಾವಿರ ನೀಡಬೇಕು. ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಧಿಸಿರುವ ಶುಲ್ಕವನ್ನು ಇಳಿಸಬೇಕು’ ಎಂದು ಆಗ್ರಹಿಸಿದರು.

ತಹಶೀಲ್ದಾರ್ ಎಂ.ವಿಜಯಣ್ಣ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಸದಸ್ಯರಾದ ವಡ್ಡರಹಳ್ಳಿ ಸಿದ್ದರಾಜು, ಪ್ರಮೀಳಾ, ಬಸವರಾಜು, ಕುಮಾರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬುಲೆಟ್ ನಿಂಗಣ್ಣ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

‘ಜನವಿರೋಧಿ ಸರ್ಕಾರ’

ಕೆ.ಆರ್.ಪೇಟೆ: ಅಗತ್ಯ ವಸ್ತಗಳ ಬೆಲೆ ಏರಿಕೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ರೈತವಿರೋಧಿ ಆಡಳಿತವನ್ನು ಖಂಡಿಸಿ ಗುರುವಾರ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು.

ನೇತೃತ್ವ ವಹಿಸಿದ್ದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಾನಕೀ ರಾಂ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎರಡು ಸರ್ಕಾರಗಳು ಜನವಿರೋಧಿ ನಿಲುವನ್ನು ಪ್ರತಿಪಾದಿ ಸುತ್ತಿದ್ದು ಜನಸಾಮಾನ್ಯರು ಜೀವನ ನಡೆಸಲಾಗದ ಮಟ್ಟಕ್ಕೆ ಬೆಲೆ ಏರಿಕೆ ಮಾಡಿವೆ’ ಎಂದು ಆರೋಪಿಸಿದರು.

‘ಡೀಸೆಲ್, ಪೆಟ್ರೋಲ್, ಅಡುಗೆ ಎಣ್ಣೆ, ಗ್ಯಾಸ್ ಮತ್ತು ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ರೈತರ ವಿರೋಧಿ ನಿಲುವಿನಿಂದ ರಸಗೊಬ್ಬರ ಸೇರಿದಂತೆ ಕೃಷಿ ಉಪಕರಣಗಳ ಬೆಲೆ ಏರಿಕೆಯಾಗಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಎಡವಿದ್ದು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಬಿ.ಎಲ್.ದೇವರಾಜು, ಎಚ್.ಟಿ.ಮಂಜು, ಬಸ್ ಕೃಷ್ಣೇಗೌಡ, ಕೊರಟಿಕೆರೆ ನಾಗೇಶ್ ಸೇರಿದಂತೆ ಹಲವರು ಮಾತನಾಡಿದರು.

ಎಂ.ಬಿ.ಹರೀಶ್, ಕೆ.ಎಸ್‌.ಸಂತೋಷ್, ಬಲದೇವ್, ಅಕ್ಕಿಹೆಬ್ಬಾಳು ರಘು, ಪೂವನಹಳ್ಳಿ ರೇವಣ್ಣ, ಮುರುಕನಹಳ್ಳಿ ವಿಜಯಕುಮಾರ್, ಶೀಳನೆರೆ ಸಿದ್ದೇಶ್, ಚಂದ್ರಶೇಖರ್ ಹೆಳವೇಗೌಡ, ದಡದಹಳ್ಳಿ ಅತೀಕ್ ಮತ್ತು ಕಾರ್ಯಕರ್ತರು ಇದ್ದರು. ನಂತರ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT