ಗುರುವಾರ , ಆಗಸ್ಟ್ 11, 2022
22 °C
ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸೆಗೆ ಪರದಾಟ; ತರಬೇತಿ ವೈದ್ಯರು, ಪಿಜಿ ವಿದ್ಯಾರ್ಥಿಗಳ ದರ್ಬಾರ್‌

ಮಂಡ್ಯ: ಜಿಲ್ಲಾಸ್ಪತ್ರೆಗೆ ಚಕ್ಕರ್‌, ನರ್ಸಿಂಗ್‌ ಹೋಮ್‌ಗಳಿಗೆ ಹಾಜರ್‌!

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Doctors

ಮಂಡ್ಯ: ಕೋವಿಡ್‌ ನೆಪ ಹೇಳುತ್ತಿರುವ ಮಿಮ್ಸ್‌ನ ವಿವಿಧ ವಿಭಾಗಗಳ ತಜ್ಞ ವೈದ್ಯರು ಜಿಲ್ಲಾಸ್ಪತ್ರೆ ಕಡೆ ತಿರುಗಿ ನೋಡುತ್ತಿಲ್ಲ. ಶಸ್ತ್ರಚಿಕಿತ್ಸೆ, ತುರ್ತುಚಿಕಿತ್ಸೆ ಅವಶ್ಯವಿರುವ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದು ಖಾಸಗಿ ಆಸ್ಪತ್ರೆಗಳಿಗೆ ಅಪಾರ ಹಣ ಸುರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆ ಬಾರದ ಈ ವೈದ್ಯರು ಮನೆಯಲ್ಲಿ ಕುಳಿತಿಲ್ಲ, ಬದಲಾಗಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಮ್‌ಗಳಲ್ಲಿ ಕುಳಿತಿದ್ದಾರೆ. ಜಿಲ್ಲಾಸ್ಪತ್ರೆಯ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೇ ಕರೆಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಎಂದು ಬಡರೋಗಿಗಳು ಆರೋಪಿಸಿದ್ದಾರೆ. ತಜ್ಞರ ಗೈರುಹಾಜರಿಯಿಂದಾಗಿ ಆಸ್ಪತ್ರೆಯ ವಿವಿಧ ವಿಭಾಗಗಳು ತರಬೇತಿ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳ ಹೆಗಲಿಗೆ ಬಿದ್ದಿವೆ.

ಲಾಕ್‌ಡೌನ್‌ ವೇಳೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಶೂನ್ಯಕ್ಕೆ ತಲುಪಿತ್ತು. ಲಾಕ್‌ಡೌನ್‌ ಆರಂಭಗೊಳ್ಳುತ್ತಿದ್ದಂತೆ ಅಪಘಾತಗಳು ಮರುಕಳಿಸುತ್ತಿವೆ. ಗಾಯಾಳುಗಳನ್ನು ಮಿಮ್ಸ್‌ ಆಸ್ಪತ್ರೆಗೆ ತಂದರೆ ಇಲ್ಲಿಯ ಸಿಬ್ಬಂದಿ ಅವರಿಗೆ ಪ್ರವೇಶವನ್ನೇ ನೀಡುತ್ತಿಲ್ಲ. ತಜ್ಞ ವೈದ್ಯರು ಇಲ್ಲ ಎಂಬ ನೆಪ ಹೇಳುತ್ತಿದ್ದು ಆಸ್ಪತ್ರೆ ಗೇಟ್‌ನಿಂದಲೇ ವಾಪಸ್‌ ಕುಳುಹಿಸುತ್ತಿದ್ದಾರೆ. ಕೆಲವರನ್ನು ಖಾಸಗಿ ಆಸ್ಪತ್ರೆಗಳತ್ತ ಸಾಗಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

‘ಇಂಡುವಾಳು ಗೇಟ್‌ ಬಳಿ ಈಚೆಗೆ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಐವರು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಿದಾಗ ಮೂವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯವಿತ್ತು. ಆದರೆ ಸರ್ಜನ್‌ಗಳು ಇಲ್ಲದ ಪರಿಣಾಮ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ದೊರೆಯಲಿಲ್ಲ. ಒಬ್ಬರು ಆಸ್ಪತ್ರೆಯಲ್ಲೇ ಮೃತಪಟ್ಟರು. ನಂತರ ರೋಗಿಗಳ ಸಂಬಂಧಿಕರು ಎಲ್ಲರನ್ನು ಬೆಂಗಳೂರು ಆಸ್ಪತ್ರೆಗೆ ಕರೆದೊಯ್ದರು. ಮಿಮ್ಸ್‌ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ’ ಎಂದು ಆಟೊ ಚಾಲಕ ಮೊಹಮ್ಮದ್‌ ರಜಾಕ್‌ ಹೇಳಿದರು.

ಮಿಮ್ಸ್‌ ಆಸ್ಪತ್ರೆಯ ವಾರ್ಡ್‌ಗಳು ಸದಾ ರೋಗಿಗಳಿಂದ ತುಂಬು ತುಳುಕುತ್ತಿದ್ದವು. ಆದರೆ ಈಗ ವಾರ್ಡ್‌ಗಳು ಖಾಲಿಯಾಗಿವೆ. ಆಪರೇಷನ್‌ ಥಿಯೇಟರ್‌ಗಳು ಸ್ಥಗಿತಗೊಂಡಿವೆ. ವೈದ್ಯರೂ ಇತ್ತ ಕಡೆ ಬರುತ್ತಿಲ್ಲ. ಕೋವಿಡ್‌ ನೆಪದಿಂದ ಬಡಜನರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸುತ್ತಾರೆ.

ನರ್ಸಿಂಗ್‌ ಹೋಂಗಳಿಗೆ ಆಹ್ವಾನ: ಮಿಮ್ಸ್‌ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಬರುವಂತೆ ತಿಳಿಸುತ್ತಿದ್ದಾರೆ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ. ನಿಯಮಿತವಾಗಿ ತಜ್ಞರಿಂದ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಆ ವೈದ್ಯರ ಬಳಿಯೇ ಚಿಕಿತ್ಸೆ ಮುಂದುವರಿಸಬೇಕಾದ ಅನಿವಾರ್ಯತೆ ಇದೆ. ಆದರೆ ಅವರು ಜಿಲ್ಲಾಸ್ಪತ್ರೆಗೆ ಬರುತ್ತಿಲ್ಲವಾದ್ದರಿಂದ ಅವರು ಖಾಸಗಿ ಆಸ್ಪತ್ರೆಗಳಲ್ಲಿ ಅಪಾರ ಹಣ ಸುರಿಯಬೇಕಾಗಿದೆ.

‘ಕಳೆದೊಂದು ವರ್ಷದಿಂದ ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ತಜ್ಞ ವೈದ್ಯರು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಕರೆ ಮಾಡಿದರೆ ಖಾಸಗಿ ಕ್ಲಿನಿಕ್‌ಗೆ ಬರುವಂತೆ ತಿಳಿಸುತ್ತಾರೆ. ಖಾಸಗಿ ಆಸ್ಪತ್ರೆಗೆ ತೆರಳಿದರೆ ಕೋವಿಡ್‌ ಪರೀಕ್ಷೆ ಕಡ್ಡಾಯ ಎನ್ನುತ್ತಾರೆ’ ಎಂದು ಉಮ್ಮಡಹಳ್ಳಿ ಗ್ರಾಮದ ರೋಗಿಯೊಬ್ಬರು ನೋವು ವ್ಯಕ್ತಪಡಿಸಿದರು.

ಮಿಮ್ಸ್‌ ನಿರ್ದೇಶಕರಾಗಿದ್ದ ಡಾ.ಜಿ.ಎಂ.ಪ್ರಕಾಶ್‌ ಕೋವಿಡ್‌–19 ಪಾಸಿಟಿವ್‌ ಆಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿರುವ ಹಿನ್ನೆಲೆಯಲ್ಲಿ ಪ್ರಭಾರ ನಿರ್ದೇಶಕರನ್ನಾಗಿ ಡಾ.ಶಿವಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ. ಆಸ್ಪತ್ರೆ ಅವ್ಯವಸ್ಥೆ ಕುರಿತ ಪ್ರತಿಕ್ರಿಯೆಗೆ ಪ್ರಭಾರ ನಿರ್ದೇಶಕ ಡಾ.ಕೆ.ಎಂ.ಶಿವಕುಮಾರ್‌ ಸಂಪರ್ಕಕ್ಕೆ ಸಿಗಲಿಲ್ಲ.

ಡಿಎಚ್‌ಒ, ಮಿಮ್ಸ್‌ ನಿರ್ದೇಶಕರಿಂದಲೇ ಖಾಸಗಿ ಪ್ರಾಕ್ಟೀಸ್‌?

‘ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಅಶೋಕ್‌ನಗರದ ತಮ್ಮ ಕ್ಲಿನಿಕ್‌ನಲ್ಲಿ, ಮಿಮ್ಸ್‌ ಪ್ರಭಾರ ನಿರ್ದೇಶಕ ಡಾ.ಕೆ.ಎಂ.ಶಿವಕುಮಾರ್‌ ವಿದ್ಯಾನಗರದ ಕೆ.ವಿ.ಶಂಕರಗೌಡ ಸ್ಮಾರಕ ಆಸ್ಪತ್ರೆಯಲ್ಲಿ ಖಾಸಗಿಯಾಗಿ ಕೆಲಸ ಮಾಡುತ್ತಾರೆ. ದೊಡ್ಡ ಸ್ಥಾನದಲ್ಲಿ ಇರುವವರೇ ಹೀಗೆ ಮಾಡಿದರೆ ಬೇರೆ ವೈದ್ಯರು ಯಾವ ಲೆಕ್ಕ’ ಎಂದು ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಪ್ರಶ್ನಿಸಿದರು.

‘ವೈದ್ಯರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಾದ ಇವರು ಕೋವಿಡ್‌ ಅವಧಿಯಲ್ಲೂ ಇವರು ಖಾಸಗಿ ಪ್ರಾಕ್ಟೀಸ್‌ ಮಾಡುತ್ತಿರುವುದು ತಪ್ಪು. ಖಾಸಗಿ ಸಂಪಾದನೆಯೇ ಮುಖ್ಯ ಎಂದಾದರೆ ಅವರು ಸರ್ಕಾರಿ ಹುದ್ದೆಯನ್ನು ತೊರೆಯಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು