ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಸಾವಿರ ಪರಿಹಾರ: ಬಿಪಿಎಲ್‌ ಮಾನದಂಡದ ತೆರವಿಗೆ ಒತ್ತಾಯ

Last Updated 9 ಜೂನ್ 2021, 11:22 IST
ಅಕ್ಷರ ಗಾತ್ರ

ಮಂಡ್ಯ: ಅಸಂಘಟಿತ ಕಾರ್ಮಿಕರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಘೋಷಿಸಿರುವ ₹2 ಸಾವಿರ ಪರಿಹಾರವನ್ನು ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ ಎಂಬ ಮಾನದಂಡವನ್ನು ಕೈ ಬಿಡಬೇಕು, ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 30ರವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಜಿಲ್ಲಾ ಘಟಕದ ಸದಸ್ಯರು ನಗರದ ಕಾರ್ಮಿಕ ಇಲಾಖೆ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಮಾನದಂಡದಿಂದಾಗಿ ಹಲವು ನೈಜ ಫಲಾನುಭವಿಗಳು ಪರಿಹಾರ ಪ್ಯಾಕೇಜ್‌ನಿಂದ ವಂಚಿರಾಗಲಿದ್ದಾರೆ. ಬಿಪಿಎಲ್‌ ಮಾನದಂಡವನ್ನು ತೆಗೆದು ಹಾಕಿ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸದರು.

ಪರಿಹಾರ ಪಡೆಯಲು ಕಾರ್ಮಿಕರ ಸಾಮಾಜಿಕ ಸುರಕ್ಷತಾ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು ಅಥವಾ ಜೂನ್‌ 7ರೊಳಗೆ ಸೇವಾ ಸಿಂಧು ಮೂಲಕ ನೋಂದಾಯಿಸಿಕೊಂಡಿರಬೇಕು ಎಂಬ ನಿಬಂಧನೆಯು ಹಲವಾರು ಅಸಂಘಟಿತ ಕಾರ್ಮಿಕರನ್ನು ಪ್ಯಾಕೇಜ್‌ನಿಂದ ಹೊರಗುಳಿಯುವಂತೆ ಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2009 ರಿಂದ ಇಲ್ಲಿಯವರೆಗೆ 3.04 ಲಕ್ಷ ಅಸಂಘಟಿತ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಶೇ 1ರಷ್ಟು ಕಾರ್ಮಿಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿಲ್ಲ. ಇದರಲ್ಲಿ 1.40 ಲಕ್ಷ ಕ್ಷೌರಿಕರು ಮತ್ತು ಅಗಸರು ಕಳೆದ ವರ್ಷ ಪರಿಹಾರ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದ್ದರಿಂದ ಎಲ್ಲಾ ಅಸಂಘಟಿತ ಕಾರ್ಮಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಜುಲೈ 30ರವರೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಬಹುತೇಕ ಅಂತರರಾಜ್ಯ ವಲಸೆ ಕಾರ್ಮಿಕರು ಚಿಂದಿ ಆಯುವ, ಮನೆ ಕೆಲಸ, ಟೈಲರ್‌, ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ರೇಷನ್‌ ಕಿಟ್‌ ನೀಡಬೇಕು. ಕಾರ್ಮಿಕರ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿ ಇವರಿಗೂ ಪರಿಹಾರ ಧನ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸುನಂದಾ, ಕಮಲಮ್ಮ, ಮಂಗಳಗೌರಮ್ಮ, ರಾಧಾ, ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT