ಶನಿವಾರ, ಜೂನ್ 25, 2022
21 °C

‘ರಾಮ ಆದರ್ಶ, ಸೀತೆ ಜಾಗೃತಿಯ ಸಂಕೇತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ರಾಮ ನಮ್ಮೆಲ್ಲರ ಆದರ್ಶ, ಸೀತಾಮಾತೆ ನಮ್ಮೊಳಗೆ ಸದಾ ಸಕಾರಾತ್ಮಕವಾಗಿ ಜಾಗೃತವಾಗಿರುತ್ತಾಳೆ’ಎಂದು ಎಸ್‌ಬಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಗರದ ಮಾಂಡವ್ಯ ಪಿಯು ಕಾಲೇಜಿನಲ್ಲಿ ನಡೆದ ‘ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ’ ಸ್ವರಚಿತ ಕವನ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸೀತೆ ಎಂತಹ ಕಷ್ಟದ ಸಮಯದಲ್ಲೂ ಕುಗ್ಗದೆ ಅಪಹರಣದಂತಹ ಸಂದರ್ಭವನ್ನು ನಿಭಾಯಿಸುವ ಮೂಲಕ ಪ್ರಸ್ತುತ ಕಾಲಘಟ್ಟದಲ್ಲೂ ನಮಗೆಲ್ಲ ಮಾದರಿಯಾಗಿದ್ದಾಳೆ’ ಎಂದರು.

ಅಧ್ಯಕ್ಷತೆ ವಹಿಸಿದ ಸಾಹಿತಿ ಡಾ.ಮಜ್ಜಿಗೆಪುರ ಶಿವರಾಂ ಮಾತನಾಡಿ ‘ಕವಿಗೋಷ್ಠಿಯಲ್ಲಿ ಹಿರಿಯರು- ಕಿರಿಯರ ಸಂಗಮವಾಗಿದೆ, ರಾಮ ಮತ್ತು ಮಂದಿರ ಮಂಥನವಾಗಿದೆ. ಕವಿಗಳು ಒಳಗಣ್ಣಿನಿಂದ ರಾಮನನ್ನು, ಮಂದಿರದ ಅಸ್ಮಿತೆಯನ್ನು ದೃಢ ಪಡಿಸಿದ್ದಾರೆ. ಮೌಲ್ಯಗಳನ್ನು ಕುರಿತು ಕಾವ್ಯ ರಚಿಸುವಾಗ ಕವಿ ಅಕ್ಷರ ಮತ್ತು ಪ್ರಾಸಕ್ಕೆ ಅಂಟಿಕೊಳ್ಳದೆ, ತಳ ಸ್ಪರ್ಶ, ಭಾವಸ್ಪರ್ಶ ಸೃಜಿಸುವಿಕೆ ಕಡೆಗೆ ಆದ್ಯ ಗಮನ ನೀಡಬೇಕು’ ಎಂದು ಸಲಹೆ ನೀಡಿದರು.

‘ಎಲ್ಲ ಕವಿತೆಗಳು ಉತ್ಸಾಹದಿಂದ ಕೂಡಿದ್ದರೂ, ಮಾಗಬೇಕಾದ ಕವಿತೆಗಳು ಇಲ್ಲಿ ಕಾಣ ಸಿಕ್ಕಿರುವುದನ್ನು ಒಪ್ಪಿಕೊಳ್ಳಬೇಕಾಗಿದೆ. ಕಲಿಕೆ ನಿರಂತರವಾಗಿ ಅಳವಡಿಸಿಕೊಂಡು, ಆತ್ಮಾವಲೋಕನ ಬರವಣಿಗೆ ಪ್ರಸ್ತುತ ಪಡಿಸಬೇಕು’ ಎಂದು ಹೇಳಿದರು.

ಕವಿ ರೋಷನ್ ಚೋಪ್ರಾ, ಗೀತಾ, ಅನಿತಾ ಬಾರ್ಗಲ್ ಅಗರವಾಲ್, ಬಲ್ಲೇನಹಳ್ಳಿ ಮಂಜುನಾಥ್, ಕೊನಾ ಪುರುಷೋತ್ತಮ್, ಶ್ರೀಪ್ರಸಾದ್ ಶ್ರೀದೇವಿ, ಗೋವಿಂದ ತೂಬಿನಕೆರೆ ಮುಂತಾದವರು ಕವಿತೆ ವಾಚಿಸಿದರು. 10 ಕವಿತೆಗಳನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಗಣ್ಯರು ಮತ್ತು ಕವಿಗಳು ರಾಮಮಂದಿರ ನಿರ್ಮಾಣಕ್ಕೆ ತಮ್ಮ ತನು-ಮನ-ಧನ ಅರ್ಪಣೆಗೆ ಸಿದ್ಧ ಎಂಬ ಪ್ರತಿಜ್ಞೆ ಸ್ವೀಕರಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷೆ ಬಿ.ಎಸ್.ಅನುಪಮಾ, ಪತ್ರಕರ್ತ ಶ್ರೀಪಾದು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು