ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಅಶೋಕ್‌ ಅವಸರಕ್ಕೆ ಸ್ವಾತಂತ್ರ್ಯ ಸಂಭ್ರಮ ಬಲಿ

ಕಂದಾಯ ಸಚಿವರಿಗೆ ಆಹ್ವಾನ ಕೊಟ್ಟವರಾರು? ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ
Last Updated 16 ಆಗಸ್ಟ್ 2022, 13:39 IST
ಅಕ್ಷರ ಗಾತ್ರ

ಮಂಡ್ಯ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ಗಾಗಿ ಮಕ್ಕಳ ಪಥಸಂಚಲನ ಮೊಟಕುಗೊಳಿಸಿದ ಕ್ರಮಕ್ಕೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪಥಸಂಚಲನಕ್ಕಾಗಿ ಸಿದ್ಧವಾಗಿ ಬಂದಿದ್ದ ಮಕ್ಕಳು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಿದ ಪ್ರತಿಭಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ 2 ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ಕೋವಿಡ್‌ ಭೀತಿ ಇಲ್ಲದ ಕಾರಣ ಅದ್ಧೂರಿಯಿಂದ ಆಚರಣೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅಧಿಕಾರಿಗಳ ತಂಡ ರಚನೆ ಮಾಡಿ ವಿವಿಧ ಜವಾಬ್ದಾರಿ ವಹಿಸಲಾಗಿತ್ತು, ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು.

ಆ.15ರ ಹಿಂದಿನ 2 ದಿನ ಕಂದಾಯ ಸಚಿವ ಆರ್‌.ಅಶೋಕ್‌ ಮೈಸೂರು, ಮಂಡ್ಯ ಜಿಲ್ಲಾ ಪ್ರವಾಸದಲ್ಲಿದ್ದರು. ಹೀಗಾಗಿ ಅವರಿಂದಲೇ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಹಿಂದಿನ ದಿನ ಆರ್‌.ಅಶೋಕ್‌ ಅವರು ‘30 ನಿಮಿಷದಲ್ಲಿ ಎಲ್ಲಾ ಕಾರ್ಯಕ್ರಮ ಮುಗಿಯಬೇಕು’ ಎಂದು ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದು ಅವಾಂತರಕ್ಕೆ ಕಾರಣವಾಯಿತು.

ಅಧಿಕಾರಿಗಳು ರಾತ್ರೋ ರಾತ್ರಿ ಕಾರ್ಯಕ್ರಮ ಬದಲಾಯಿಸಿದರು. ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಲ್ಯಾಪ್‌ಟಾಪ್‌ ವಿತರಣೆ ಸಮಾರಂಭವನ್ನು ರದ್ದು ಮಾಡಿದರು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಕಿತ್ತು ಹಾಕಿದರು. 42 ತಂಡಗಳ ಸದಸ್ಯರು ಪಥ ಸಂಚಲನಕ್ಕಾಗಿ ಸಿದ್ಧರಾಗಿದ್ದರು, ಅದನ್ನು ರಾತ್ರೋರಾತ್ರಿ 30ಕ್ಕೆ ಇಳಿಸಲಾಯಿತು. ಬಹುತೇಕ ಶಾಲಾ ಮಕ್ಕಳ ಪಥ ಸಂಚಲನ ರದ್ದಾಯಿತು. ಆದರೆ ಈ ವಿಷಯವನ್ನು ಮಕ್ಕಳಿಗೆ ತಿಳಿಸಲೇ ಇಲ್ಲ.

ಆ.15ರಂದು ಮಕ್ಕಳು ಎಂದಿನಂತೆ ಸಮವಸ್ತ್ರ ಧರಿಸಿ ಶಿಸ್ತಾಗಿ ಪಥಸಂಚಲನಕ್ಕೆ ಸಿದ್ಧರಾಗಿ ಬಂದಿದ್ದರು. ಆದರೆ ಪೊಲೀಸರು ಮಕ್ಕಳನ್ನು ಹಿಂದಕ್ಕೆ ಕಳುಹಿಸಿದರು. ಯಾವುದೇ ಕಾರಣ ನೀಡದೇ ‘ನಿಮ್ಮ ಪಥ ಸಂಚಲನ ಇಲ್ಲ’ ಎಂದು ಹೇಳಿದರು, ಮಕ್ಕಳನ್ನು ಗದರಿಸಿ ಕಳುಹಿಸಿದರು. ಇಡೀ ಕಾರ್ಯಕ್ರಮ ಅವ್ಯವಸ್ಥೆಯ ಆಗರವಾಯಿತು.

ಸ್ಥಳದಲ್ಲೇ ಮಕ್ಕಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು. ಪ್ರತಿಭಟನೆ ನಂತರ ಕೆಲವು ತಂಡಗಳಿಗೆ ಅವಕಾಶ ನೀಡಲಾಯಿತು. ಆದರೆ ಎಲ್ಲಾ ತಂಡಗಳು ಪಥಸಂಚಲನ ಮಾಡಲು ಸಾಧ್ಯವಾಗಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ, ಪಥಸಂಚಲನದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಮಾಣ ಪತ್ರವನ್ನೂ ನೀಡಲಿಲ್ಲ.

ಮಕ್ಕಳ ಪ್ರತಿಭಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲು ಸರ್ಕಾರ ಆದೇಶಿಸಿದ್ದರೂ ಸಚಿವ ಆರ್‌.ಅಶೋಕ್‌ ಅಲ್ಲಿಗೆ ಏಕೆ ಹೋದರು ಎಂಬ ಪ್ರಶ್ನೆ ವ್ಯಕ್ತವಾಗಿದೆ. ಮಂಡ್ಯ ಜಿಲ್ಲೆಗೆ ಸಚಿವರನ್ನು ಆಹ್ವಾನಿಸಿದರು ಯಾರು, ಸಚಿವರಿಗೆ ಅರ್ಧಗಂಟೆ ಧ್ವಜವಂದನೆ ಸ್ವೀಕಾರ ಮಾಡಲು ಆಗುವುದಿಲ್ಲವೇ, ಮಕ್ಕಳ ಕಾವಿಷಯದಲ್ಲೂ ರಾಜರಣ ಬೇಕೆ? ಅಧಿಕಾರದ ಮದ ತಲೆಗೆ ಏರಿದೆ ಎಂದೆಲ್ಲಾ ಆಕ್ರೋಶ ವ್ಯಕ್ತವಾಗಿದೆ.

‘ಸಚಿವ ಆರ್‌.ಅಶೋಕ್‌ ಮಾಡಿದ್ದು ಸರಿ ಇಲ್ಲ. ಅವರಿಗೆ ಅನ್ಯ ಕಾರ್ಯವಿದ್ದರೆ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲೇಬಾರದಿತ್ತು. ಅವರು ಮಂಡ್ಯ ಜಿಲ್ಲೆಯ ಮಕ್ಕಳ ಕ್ಷಮೆ ಕೋರಬೇಕು’ ಎಂದು ಉಪನ್ಯಾಸಕ ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಅಧಿಕಾರಿಗಳಿಗೆ ನೋಟಿಸ್‌

ಸ್ವಾತಂತ್ರ್ಯ ದಿನಾಚರಣೆಯ ದಿನ ಸಚಿವ ಆರ್‌.ಅಶೋಕ್‌ ವಿರುದ್ಧ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ, ಪ್ರತಿಭಟನೆ ಮಾಡಿದ್ದಕ್ಕೆ ಕಾರ್ಯಕ್ರಮ ಸಂಘಟನೆ ಮಾಡಿದ್ದ ಸಿಬ್ಬಂದಿಗೆ, ಕೆಳ ಹಂತದ ಅಧಿಕಾರಿಗಳಿಗೆ ಪೊಲೀಸ್‌ ಇಲಾಖೆ ನೋಟಿಸ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ.

‘ಯಾವುದೇ ಗೊಂದಲ ಆಗಿಲ್ಲ, ಮೈದಾನ ಸರಿ ಇಲ್ಲ ಎಂಬ ಕಾರಣಕ್ಕೆ ಪಥ ಸಂಚಲನ ರದ್ದು ಮಾಡಲಾಗಿತ್ತು. ಮಕ್ಕಳ ಒತ್ತಾಯಕ್ಕೆ ಮಣಿದು ಕಡೆಗೆ ಎಲ್ಲರಿಗೂ ಅವಕಾಶ ನೀಡಲಾಗಿದೆ’ ಎಂದು ಎಎಸ್ಪಿ ವೇಣುಗೋಪಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT