ಸೋಮವಾರ, ಜುಲೈ 26, 2021
27 °C
ಜಿಲ್ಲೆಯಾದ್ಯಂತ ವಿಶ್ವ ಪರಿಸರ ದಿನಾಚರಣೆ; ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿಕೆ

ಸಸಿ ನೆಡುವ ಕಾಯಕ ನಿತ್ಯೋತ್ಸವವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪರಿಸರ ಪ್ರೇಮಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು ಗಿಡ ನೆಟ್ಟು ಸಂಭ್ರಮಿಸಿದರು. ಕೆಲವೆಡೆ ಕೊರೊನಾ ವಾರಿಯರ್ಸ್‍ಗಳನ್ನು ಸನ್ಮಾನಿಸುವ ಮೂಲಕ ಪರಿಸರ ದಿನ ಆಚರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಕೈಗಾರಿಕಾ ಕ್ರಾಂತಿ ಮತ್ತು ಪರಿಸರ ವಿರೋಧಿ ಕೆಲಸಗಳಿಂದ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಪ್ರಕೃತಿ ಶಿಶುವಾಗಿರುವ ಮನುಷ್ಯ ಪ್ರಕೃತಿ ಸಂರಕ್ಷಣೆಗೆ ಸದಾ ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಒಟ್ಟು 10 ಲಕ್ಷ ಸಸಿ ನೆಡುವ ಯೋಜನೆ ರೂಪಿಸಲಾಗಿದೆ. ಸಾಮಾಜಿಕ ಅರಣ್ಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಮತ್ತು  ನಗರಸಭೆಯ ಸಹಯೋಗದೊಂದಿಗೆ 1 ಲಕ್ಷ ಸಸಿಗಳನ್ನು ನೆಡಲು ಬಜೆಟ್ ಅನುಮೋದನೆ ಆಗಿದೆ. ಸಸಿ ನೆಡುವ ಕಾರ್ಯವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು’ ಎಂದು ಹೇಳಿದರು.

ಜಿ.ಪಂ ಸಿಇಒ ಕೆ.ಯಾಲಕ್ಕಿಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ. ಮಂಚೇಗೌಡ ಇದ್ದರು.

ನೆಲದನಿ ಬಳಗ: ನೆಲದನಿ ಬಳಗದ ಸದಸ್ಯರು ನಗರದ ನೆಹರೂ ಯುವ ಕೇಂದ್ರದಲ್ಲಿ ಪರಿಸರ ದಿನಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಅನಂತಪ್ಪ, ವೆಂಕಟೇಶ್, ಬಸವರಾಜು, ಹರ್ಷ, ರಶ್ಮಿ, ನೆಲದನಿ ಬಳಗದ ಅಧ್ಯಕ್ಷ ಮಂಗಲ ಲಂಕೇಶ್, ಚಲನಚಿತ್ರ ನಿರ್ದೇಶಕ ಸೂನಗಹಳ್ಳಿ ರಾಜು ಇದ್ದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು ಇದ್ದರು.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಭಜಕದ ಜಾಗದಲ್ಲಿ ಕಾಯಕಯೋಗಿ ಸಮೂಹ ಸಂಸ್ಥೆಯಿಂದ ಸಸಿ ನೆಡಲಾಯಿತು. ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಚಾಲನೆ ನೀಡಿದರು. ಕಾಯಕಯೋಗಿ ಸಂಸ್ಥೆಯ ಎಂ.ಶಿವಕುಮಾರ್‌ ಇದ್ದರು.

ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಸಂಸ್ಥೆಯ ಟಿ.ವರಪ್ರಸಾದ್ ಗಿಡ ನೆಟ್ಟು ನೀರೆರೆದರು. ಪದಾಧಿಕಾರಿಗಳಾದ ಎಲ್.ತುಳಸೀಧರ್, ಜಯಶಂಕರ್, ಅಶೋಕ್ ಇದ್ದರು.

ಮಂಡ್ಯ ಜಿಲ್ಲಾ ಗಾಣಿಗರ ಸಮಾಜ ಸೇವಾ ಸಂಘ, ಸ್ಕೂಲ್ ಮಾಸ್ಟರ್ ದಿ. ಮಾಯಿಗಶೆಟ್ಟಿ ಸೇವಾ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಂಗನವಾಡಿ ವಾರಿಯರ್ಸ್‍ಗಳನ್ನು ಸನ್ಮಾನಿಸಲಾಯಿತು.

ನಗರಸಭಾ ಸದಸ್ಯೆ ಪವಿತ್ರಾ ಬೋರೇಗೌಡ, ಲಯನ್ಸ್ ಸಂಸ್ಥೆಯ ಬಿ.ಎಂ. ಅಪ್ಪಾಜಪ್ಪ, ಜಿಲ್ಲಾ ಗಾಣಿಗರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ. ಲೋಕೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗೇಶ್, ಸಮಾಜ ಸೇವಕ ಶೇಖರ್ ಮುಖ್ಯ ಶಿಕ್ಷಕ, ಅಂಗನವಾಡಿ ಲಕ್ಷ್ಮಿ, ಸೌಭಾಗ್ಯ ಇತರರಿದ್ದರು.

ಬಿಜೆಪಿ ಗ್ರಾಮಾಂತರ ಘಟಕದ ವತಿಯಿಂದ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ಕೆ.ವಿ. ಶಂಕರಗೌಡರ ಸ್ಮಾರಕ ರಸ್ತೆ ಪಕ್ಕದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡಲಾಯಿತು.

ಬಿಜೆಪಿ ಮಂಡ್ಯ ಗ್ರಾಮಾಂತರ ಘಟಕದ ಅಧ್ಯಕ್ಷೆ ಸುಜಾತಾ ರಮೇಶ್, ಗ್ರಾಮ ಪಂಚಾಯಿತಿ ಪಿಡಿಒ ರಾಮಕೃಷ್ಣ, ಬಿಜೆಪಿ ಮುಖಂಡರಾದ ಚಂದ್ರಶೇಖರ್, ಯೋಗೇಶ್, ಕೃಷ್ಣ ಅಂಕಪ್ಪ, ಶಿವಕುಮಾರ್ ಆರಾಧ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು