ಸೋಮವಾರ, ಅಕ್ಟೋಬರ್ 19, 2020
24 °C
ಗ್ರಾ.ಪಂ ಚನಾವಣೆಯಲ್ಲಿ ಸ್ಪರ್ಧಿಸುವವರಿಗೆ ‘ಪಂಚಾಯತ್‌ ರಾಜ್‌’ ವ್ಯವಸ್ಥೆಯ ತರಬೇತಿ

ವೈಯಕ್ತಿಕವಾಗಿ ಬದಲಾಗದೆ ಸಮಾಜ ಸುಧಾರಣೆ ಅಸಾಧ್ಯ: ಪ್ರಸನ್ನ ಎನ್‌.ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಚುನಾವಣೆಯಲ್ಲಿ ಸ್ಪರ್ಧೆ ಮಾಡಬಯಸುವ ನಾಯಕರು ವೈಯಕ್ತಿಕವಾಗಿ ಬದಲಾವಣೆಯನ್ನು ಅಳವಡಿಸಿಕೊಳ್ಳಬೇಕು. ನಂತರ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ನಾಯಕರಾಗಿ ರೂಪಗೊಂಡು ಸಮಾಜದ ಬದಲಾವಣೆ ಮಾಡಬೇಕು’ ಎಂದು ಜನಚೈತನ್ಯ ಟ್ರಸ್ಟ್‌ ಅಧ್ಯಕ್ಷ ಪ್ರಸನ್ನ ಎನ್‌.ಗೌಡ ಹೇಳಿದರು.

ಗ್ರಾಮ ಸ್ವರಾಜ್ಯ ವೇದಿಕೆ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿನ ಕೆವಿಎಸ್‌ ಶತಮಾನೋತ್ಸವ ಭವನದಲ್ಲಿ ಗುರುವಾರ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಯಸುವವರಿಗೆ ಆಯೋಜಿಸಿದ್ದ ಪಂಚಾಯತ್‌ರಾಜ್‌ ವ್ಯವಸ್ಥೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ವ್ಯವಸ್ಥೆಯನ್ನು ಸುಂದರವಾಗಿ ಕಟ್ಟುವುದು ತುಂಬಾ ಕಷ್ಟದ ಕೆಲಸ. ಇಡೀ ವ್ಯವಸ್ಥೆಯ ಆಶಯಗಳನ್ನು ಸಾಕಾರ ಮಾಡಬೇಕಾದರೆ ಮೊದಲು ಬದಲಾವಣೆ ಎಂಬುದು ವೈಯಕ್ತಿಕವಾಗಿ ಪ್ರಾರಂಭವಾಗಬೇಕು. ಬೇರೆಯವರಿಗೆ ಹೇಳುವುದಕ್ಕಿಂತ ಮೊದಲು ಅದನ್ನು ನಮ್ಮಲ್ಲಿ ಅಳವಡಿಸಿಕೊಂಡಿರಬೇಕು. ಭ್ರಷ್ಟಾಚಾರ, ಹಿಂಸೆ ಮಾಡಬಾರದು ಎಂದಿದ್ದರೆ ಮೊದಲು ನಮ್ಮಿಂದಲೇ ಅದು ಶುರುವಾಗಬೇಕು. ಆಗ ಮಾತ್ರ ಸಮಾಜದ ಬದಲಾವಣೆ’ ಎಂದರು.

‘ಪ್ರವಾಹದ ವಿರುದ್ಧ ಈಜಲು ಮೊಸಳೆಯೇ ಬೇಕು, ಪ್ರವಾಹದ ಜೊತೆ ಸಾಗಲು ಕಸ ಕಡ್ಡಿಯಾದರೆ ಸಾಕು ಎಂಬ ಮಾತಿನಂತೆ, ಭ್ರಷ್ಟ ವ್ಯವಸ್ಥೆ ಜೊತೆಗೆ ಹೊಗಲು ಕಸ ಕಡ್ಡಿಯಂತ ಮನಸ್ಥಿತಿ ಇದ್ದರೆ ಸಾಕು. ಭ್ರಷ್ಟಾಚಾರ ವ್ಯವಸ್ಥೆಯ ವಿರುದ್ಧ ಹೋಗಬೇಕಾದರೆ ಮೊಸಳೆಯಂತಹ ಧೈರ್ಯ ಇರುವ ಗಟ್ಟಿತನದ ಮನಸ್ಸು ಬೇಕು. ಅಂತಹ ಮನಸನ್ನು ಭಾವಿ ಗ್ರಾ.ಪಂ ಸದಸ್ಯರು ಮಾಡಬೇಕು’ ಎಂದು ಸಲಹೆ ನೀಡಿದರು.

‘ಗಾಂಧೀಜಿ ದೇಶದ ಅಧ್ಯಕ್ಷರಾಗಿರಲಿಲ್ಲ, ಮಕ್ಕಳಿಗೆ ಆಸ್ತಿ ಮಾಡಿರಲಿಲ್ಲ. ಅಧಿಕಾರವನ್ನು ಕೊಡಿಸಿರಲಿಲ್ಲ. ಆದರೂ ಅವರ ಪ್ರಾರ್ಥನಾ ಸಭೆಗೆ ನಿತ್ಯ 5–10 ಲಕ್ಷ ಮಂದಿ ಸೇರುತ್ತಿದ್ದರು. ತನ್ನನ್ನು ತಾನು ಮೇಣದ ಬತ್ತಿಯ ರೀತಿಯಲ್ಲಿ ಸುಟ್ಟುಕೊಳ್ಳುತ್ತಾ ಸಮಾಜಕ್ಕೆ ಅರ್ಪಿಸಿಕೊಂಡು ನಾಯಕರಾದರು. ಪ್ರಪಂಚದಲ್ಲಿನ ಪ್ರತಿಯೊಬ್ಬರೂ ಅವರ ನಾಯಕ ಗುಣ ಗುರುತಿಸಿದ್ದರು. ಅಂತೆಯೇ ಗಾಂಧೀಜಿ ಅವರ ಕಲ್ಪನೆಗಳನ್ನು ಸಾಕಾರ ಮಾಡಲು ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು’ ಎಂದರು.

ಗ್ರಾಮ ಸ್ವರಾಜ್‌ ವೇದಿಕೆ ಅಧ್ಯಕ್ಷ ಎಸ್‌.ಸಿ.ಮಧುಚಂದನ್‌ ಮಾತನಾಡಿ  ‘ಒಂದು ಕಾಲದಲ್ಲಿ ಮಂಡ್ಯ ಜಿಲ್ಲೆಯ ಹಳ್ಳಿಗಳು ಶ್ರೀಮಂತವಾಗಿದ್ದವು. ರಾಯಚೂರಿನಲ್ಲಿ ಬರ ಎಂದರೆ ಲಾರಿಗೆ ಬಾಡಿಗೆ ಕೊಟ್ಟು ಮೇವು ಕಳುಹಿಸುತ್ತಿದ್ದೆವು. ಆದರೆ ಇಂದು ನಗರಗಳ ಬಾರ್‌, ಹೊಟೆಲ್‌ಗಳಲ್ಲಿ ತಟ್ಟೆ ತೊಳೆಯುತ್ತಿದ್ದಾರೆ. ಮತ್ತೆ ಕೆಲವರು ಓಲಾ, ಊಬರ್‌ ಚಲಾಯಿಸುತ್ತಿದ್ದಾರೆ. ಅಜ್ಞಾನದ ಕಾರಣದಿಂದ ನಮ್ಮ ದೇಶ, ರಾಜ್ಯ, ಜಿಲ್ಲೆ ಈ ಸ್ಥಿತಿಗೆ ಬಂದು ನಿಂತಿದೆ. ಭ್ರಷ್ಟಾಚಾರ ನಿರ್ಮೂಲನೆ, ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಒಳ್ಳೆಯ ಉದ್ದೇಶ ಇರುವ ಮನಸ್ಸಿನವರು ಚುನಾವಣೆಗೆ ಸ್ಪರ್ಧಿಸಬೇಕು. ಬದಲಾವಣೆ ಎಂಬುದು ಮಂಡ್ಯದಿಂದಲೇ ಆರಂಭವಾಗಲಿ’ ಎಂದರು.

ಎಸ್‌ಐಆರ್‌ಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣ, ರವಿಕುಮಾರ್‌, ನ.ಲಿ.ಕೃಷ್ಣ, ಹುರಗಲವಾಡಿ ರಾಮಯ್ಯ, ಮಂಜುಳಾ, ಪಿಡಿಒ ಮಧುಸೂದನ್‌, ಸಾಯಿ ಎಜುಕೇಷನ್‌ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಎನ್‌.ಡಿ.ರಮೇಶ್‌, ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ್‌ ಇದ್ದರು.

ತಳಮಟ್ಟದಲ್ಲೇ ವೈಫಲ್ಯ

ಎಸ್‌ಐಆರ್‌ಡಿ ತರಬೇತುದಾರ ಅಬೂಬಕರ್‌ ಮಾತನಾಡಿ ‘ಪಂಚಾಯತ್‌ರಾಜ್‌ ಕಾಯ್ದೆ ಜಾರಿಗೆ ಬಂದು 27 ವರ್ಷವಾದರೂ ಸಾಕಷ್ಟು ಬದಲಾವಣೆಯಾಗಿಲ್ಲ. ಬದಲಾವಣೆ ತರುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಸಾಕಷ್ಟು ಶ್ರಮಿಸಿದರೂ ನಾವು ವೈಫಲ್ಯ ಹೊಂದಿದ್ದೇವೆ. ಸಮಾಜದ ತಳಮಟ್ಟದಲ್ಲಿ ಸ್ಪಂದನೆ ಸರಿಯಾಗಿ ಸಿಗದ ಕಾರಣ ಇಂತಹ ಪರಿಸ್ಥಿತಿ ಬಂದಿದೆ. ತಳಮಟ್ಟದ ಸ್ಪಂದನೆ ಬದಲಾವಣೆ ಮಾಡಬೇಕಾದರೆ, ಆಸಕ್ತಿ ಇರುವವರು, ಬದಲಾವಣೆ ಬಯಸುವವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದರೆ ಬದಲಾವಣೆ ಸಾಧ್ಯವಾಗಬಹದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.