ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರುಗದ್ದೆಯಾದ ಸರ್‌ ಎಂ.ವಿ ಜಿಲ್ಲಾ ಕ್ರೀಡಾಂಗಣ

ತರಕಾರಿ ಮಾರುಕಟ್ಟೆ ತೆರವಾಗಿ 15 ದಿನ ಕಳೆದರೂ ಸ್ವಚ್ಛತೆ ಇಲ್ಲ, ವಿಹಾರಿಗಳ ಅಸಮಾಧಾನ
Last Updated 30 ಜುಲೈ 2020, 12:21 IST
ಅಕ್ಷರ ಗಾತ್ರ

ಮಂಡ್ಯ: ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಿಂದ ತರಕಾರಿ ಮಾರುಕಟ್ಟೆ ತೆರವಾಗಿ 15 ದಿನ ಕಳೆದರೂ ಕ್ರೀಡಾಂಗಣ ಸ್ವಚ್ಛವಾಗಿಲ್ಲ. ಈಚೆಗೆ ಸುರಿದ ಮಳೆಯಿಂದಾಗಿ ಕ್ರೀಡಾಂಗಣ ಕೆಸರು ಗದ್ದೆಯಾಗಿದ್ದು ಕ್ರೀಡಾಭ್ಯಾಸ, ವಿಹಾರ ಸಾಧ್ಯವಾಗದೇ ಜನರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದು ಉತ್ಸವ ಆಚರಣೆಗೆ ಕ್ರೀಡಾಂಗಣ ದೊರೆಯುತ್ತದೆಯೇ ಎಂಬ ಅನುಮಾನ ಆರಂಭವಾಗಿದೆ. ಕ್ರೀಡಾಂಗಣದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದ್ದು ಕಾಲಿಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಲೂ ಗುಂಡಿಗಳು ಬಿದ್ದಿದ್ದು ಮಳೆ ನೀರು ನಿಂತು ಕೆರೆಯಂತಾಗಿದೆ. ಸೊಳ್ಳೆಗಳ ಹಾವಳಿಯಿಂದ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ.

ಕೋವಿಡ್‌ ಕಾರಣದಿಂದ ನಗರದ ಪೇಟೆಬೀದಿಯಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಮೂರು ತಿಂಗಳ ಕಾಲ ವ್ಯಾಪಾರಿಗಳು ಕ್ರೀಡಾಂಗಣದಲ್ಲೇ ವಟಿವಾಟು ನಡೆಸಿದ ಪರಿಣಾಮ ಕ್ರೀಡಾಂಗಣದಲ್ಲಿ ತ್ಯಾಜ್ಯ ಚೆಲ್ಲಾಡುತ್ತಿದೆ. ಸರಕು ಸಾಗಿಸುವ ವಾಹನಗಳು ಕ್ರೀಡಾಂಗಣಕ್ಕೆ ತೆರಳಲು ಅವಕಾಶ ನೀಡಿದ್ದ ಕಾರಣ ಆವರಣದ ವಿವಿಧೆಡೆ ಗುಂಡಿಗಲು ಬಿದ್ದಿವೆ. ಇದರಿಂದ ಅಲ್ಲಲ್ಲಿ ಮಳೆ ನೀರು ನಿಂತಿದ್ದು ಕೆಸರುಮಯವಾಗಿದೆ.

ದುರ್ವಾಸನೆ: ಕೆಲವು ಕಿಡಿಗೇಡಿಗಳು ಕ್ರೀಡಾಂಗಣದಲ್ಲೇ ಮೂತ್ರ ವಿಸರ್ಜನೆ ಮಾಡಿರುವ ಕಾರಣ ಆವರಣದಲ್ಲಿ ದುರ್ವಾಸನೆ ಹೆಚ್ಚಾಗಿದೆ. ಕೆಲವರು ಮದ್ಯ ಸೇವನೆ ಮಾಡಿ ಪಾಕೀಟುಗಳನ್ನು ಅಲ್ಲೇ ಬಿಸಾಡಿದ್ದಾರೆ. ಆವರಣದ ಸುತ್ತಲೂ ಇರುವ ಚರಂಡಿಯ ಕಲ್ಲುಗಳು ಕುಸಿದಿದ್ದು ಕ್ರೀಡಾಂಗಣದ ಅಂದವನ್ನು ಹಾಳು ಮಾಡಲಾಗಿದೆ. ಇದರ ನಡುವೆಯೂ ಕೆಲವು ಯುವಕರು ಆಟವಾಡುತ್ತಿದ್ದಾರೆ. ಹಿರಿಯ ನಾಗರಿಕರು ಅಸ್ವಚ್ಛ ಪರಿಸರದ ನಡುವೆಯೇ ವಿಹಾರ ಮಾಡುತ್ತಿದ್ದಾರೆ ಕ್ರೀಡಾಂಗಣದ ಸ್ಥಿತಿ ಕಂಡು ಮರುಗುತ್ತಿದ್ದಾರೆ.

ಕಳೆದ ವರ್ಷವಷ್ಟೇ ಮುಖ್ಯಮಂತ್ರಿ ಕಪ್‌ ಫುಟ್‌ಬಾಲ್‌ ಟೂರ್ನಿಗಾಗಿ ಕ್ರೀಡಾಂಗಣದಲ್ಲಿ ಸುಂದರವಾಗಿ ಹುಲ್ಲುಹಾಸು ಬೆಳೆಸಲಾಗಿತ್ತು. ಟೂರ್ನಿ ರದ್ದಾದರೂ ಕ್ರೀಡಾಂಗಣ ಮಾತ್ರ ಹೊಸ ರೂಪ ಪಡೆದಿತ್ತು. ಆದರೆ ಮಾರುಕಟ್ಟೆ ಸ್ಥಳಾಂತರದಿಂದಾಗಿ ಹುಲ್ಲುಹಾಸು ಕೂಡ ಹಾಳಾಗಿದೆ.

‘ಕೊರೊನಾ ಸೋಂಕಿನ ಕಾರಣಕ್ಕೆ ಕ್ರೀಡಾಂಗಣವನ್ನು ಮಾರುಕಟ್ಟೆಯಾಗಿ ಬಳಸಿಕೊಳ್ಳಲಾಯಿತು. ವ್ಯಾಪಾರಿಗಳು, ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಕೈಗೊಂಡ ಕ್ರಮಕ್ಕೆ ಜನರು, ಕ್ರೀಡಾಪ್ರೇಮಿಗಳು ಸ್ವಾಗತಿಸಿದ್ದರು. ಆದರೆ ಕ್ರೀಡಾಂಗಣದಿಂದ ಮಾರುಕಟ್ಟೆ ತೆರವಾಗಿ 15 ದಿನ ಕಳೆದರೂ ಇನ್ನೂ ಅಧಿಕಾರಿಗಳು ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿಲ್ಲ. ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದ್ದರೂ ಸ್ವಚ್ಛಗೊಳಿಸದೇ ಇರುವುದು ನಿ‌ರ್ಲಕ್ಷ್ಯದ ಪರಮಾವಧಿ’ ಎಂದು ಹಿರಿಯ ನಾಗರಿಕ ಸೋಮಶೇಖರ್‌ ಅಸಮಾಧಾನ ವ್ಯಕ್ತಪಡಿಸಿದರು.

ಕಿಷ್ಕಿಂದೆಯಂತಿದ್ದ ತರಕಾರಿ ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಳ್ಳುವ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಮಾರುಕಟ್ಟೆಯನ್ನು ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ ವ್ಯಾಪಾರ ಸಂದರ್ಭದಲ್ಲಿ ಮಿಕ್ಕ ಸೊಪ್ಪು, ತರಕಾರಿಯನ್ನು ಅಲ್ಲೇ ಬಿಸಾಡಲಾಗಿದ್ದು, ಗಲೀಜು ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಹಲವಾರು ಬಾರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ವಿಹಾರಿಗಳು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT