ಗುರುವಾರ , ಆಗಸ್ಟ್ 5, 2021
24 °C
ಎಚ್‌.ಡಿ.ಚೌಡಯ್ಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

‘ಒ ಅಂಡ್‌ ಎಂ’ ಮೂಲಕವೇ ಮೈಷುಗರ್‌ ಆರಂಭಗೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮೈಷುಗರ್‌  ಕಾರ್ಖಾನೆಯನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಅಂಡ್‌ ಎಂ) ಮಾದರಿಯಲ್ಲೇ ಆರಂಭಿಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಡಾ.ಎಚ್‌.ಡಿ.ಚೌಡಯ್ಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಹೋರಾಟಗಾರರು ‘ಮೈಷುಗರ್‌ ಆರಂಭಿಸಿ ಕಬ್ಬು ಬೆಳೆಗಾರರನ್ನು ರಕ್ಷಿಸಿ, ಮೈಷುಗರ್‌ ಆರಂಭಿಸಿ ಮಂಡ್ಯ ಉಳಿಸಿ’ ಎಂಬ ಬರಹದ ಫಲಕ ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿದರು. 

ಮೈಷುಗರ್‌ ಕಾರ್ಖಾನೆ ವ್ಯಾಪ್ತಿಯಲ್ಲಿ ಈಗಾಗಲೇ 6–7ಲಕ್ಷ ಟನ್‌ ಕಬ್ಬು ಕಟಾವಿಗೆ ಬಂದಿದ್ದು, ಬೆಳೆಗಾರರು ಕಾರ್ಖಾನೆ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಕಾರ್ಖಾನೆ ಸ್ಥಗಿತಗೊಂಡ ನಂತರ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದರೂ ಸಾಗಣೆ ವೆಚ್ಚ ನೀಡದೇ ಅನ್ಯಾಯ ಮಾಡಲಾಗಿದೆ. ಐತಿಹಾಸಿಕ  ಕಾರ್ಖಾನೆ ಇಂದು ರೋಗಗ್ರಸ್ತಗೊಂಡಿದೆ. ರೈತರ ಸಂಕಷ್ಟಕ್ಕೆ ನೆರವಾಗಲು ಕಾರ್ಖಾನೆಯನ್ನು ಒ ಅಂಡ್‌ ಎಂ ಮಾದರಿಯಲ್ಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆಯನ್ನು ತಕ್ಷಣದಿಂದಲೇ ಪ್ರಾರಂಭಿಸಬೇಕಾದರೆ  ಒ ಅಂಡ್‌ ಎಂ ಮಾದರಿ ಸೂಕ್ತವಾಗಿದೆ. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು. ಹಲವು ವರ್ಷಗಳಿಂದ ಸರ್ಕಾರ ಅಪಾರ ಪ್ರಮಾಣದ ಹಣ ನೀಡಿದರೂ ಕಾರ್ಖಾನೆ ನಡೆದಿಲ್ಲ. ಹೀಗಾಗಿ 2003–2019ರವರೆಗೆ ಕಾರ್ಖಾನೆಗೆ ನೀಡಿರುವ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಮೈಷುಗರ್‌ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾರ್ಖಾನೆ ವ್ಯಾಪ್ತಿಯ ಷೇರುದಾರರು, ಕಬ್ಬು ಬೆಳೆಗಾರರು, ಜನಪ್ರತಿನಿಧಿಗಳು ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳನ್ನು ಒಳಗೊಂಡ ಶೋಧನಾ ಸಮಿತಿ ರಚನೆ ಮಾಡಬೇಕು. ಕಾರ್ಖಾನೆಯಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತಂತೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಶೀಘ್ರ ತನಿಖೆ ಪೂರ್ಣಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಎಚ್‌.ಡಿ.ಚೌಡಯ್ಯ ಮಾತನಾಡಿ ‘ಕಬ್ಬು ಬೆಳೆಗಾರರ ಬದುಕಿನ, ಜೀವನದ ಪ್ರಶ್ನೆಯಾಗಿದ್ದು, ಕೂಡಲೇ ಒ ಅಂಡ್‌ ಎಂ ಮೂಲಕ ಕಾರ್ಖಾನೆ ಪ್ರಾರಂಭಿಸಬೇಕು. ಹಲವಾರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಒ ಅಂಡ್‌ ಎಂ. ಸೂಕ್ತವಾಗಿದೆ. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌ ಮಾತನಾಡಿ, ಮಾರ್ಗದರ್ಶನ ಕೊರತೆ, ಸಂಘಟನೆ ಕೊರತೆ ಕಾರಣದಿಂದ ಹೋರಾಟದ ಧ್ವನಿ ಇಲ್ಲವಾಗಿತ್ತು. ಇಂದು ಎಲ್ಲಾ ಸಂಘಟನೆಗಳ ಮುಖಂಡರೂ ಸೇರಿ ಒ ಅಂಡ್‌ ಎಂ ಮೂಲಕ ಕಾರ್ಖಾನೆ ನಡೆಸುವಂತೆ ಒಕ್ಕೊರಲಿನಿಂದ ಆಗ್ರಹಿಸಲಾಗುತ್ತಿದೆ. ಇದರಿಂದ ಕಾರ್ಖಾನೆ ಸರ್ಕಾರದ ಅಧೀನದಲ್ಲೇ ಇರುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಆತ್ಮಾನಂದ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಸಿ.ಎಂ.ದ್ಯಾವಪ್ಪ, ರೈತ ನಾಯಕರಾದ ಕೆ.ಎಸ್‌.ನಂಜುಡೇಗೌಡ, ವೇಣುಗೋಪಾಲ್‌, ತಮ್ಮೇಗೌಡ, ಪೀಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಬೇಲೂರು ಸೋಮಶೇಖರ್‌, ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ, ಹಾಲು ಉತ್ಪಾದಕರ ಹೋರಾಟ ಸಮಿತಿ ಕಾರಸವಾಡಿ ಮಹದೇವ್‌ ಇದ್ದರು.

ಶಾಸಕರ ಸ್ವಾರ್ಥ ರಾಜಕಾರಣ: ಸುಮಲತಾ ಆರೋಪ

ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಸಂಸದೆ ಎ.ಸುಮಲತಾ, ಮೈಷುಗರ್‌ ಕಾರ್ಖಾನೆಯನ್ನು ಒ ಅಂಡ್‌ ಎಂಗೆ ನೀಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಜಿಲ್ಲೆಯ ಶಾಸಕರು ಹೇಳಿದ್ದಾರೆ. ಉಗ್ರ ಹೋರಾಟ ಪದ ಬಳಸುವುದು ಅವರಿಗೆ ಸರಿ ಹೊಂದುವುದಿಲ್ಲ, ಅವರೇನಿದ್ದರೂ ಸ್ವಾರ್ಥ ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸಿದರು.

ಭಾರತ ಚೀನಾ ಗಡಿಯಲ್ಲಿ ನಮ್ಮ ಯೋಧರು ಮಾಡುತ್ತಿರುವ ಹೋರಾಟ ಮಾತ್ರ ಉಗ್ರ ಹೋರಾಟ. ಹೋರಾಟದ ಹೆಸರಿನಲ್ಲಿ ಸೈನಿಕರಿಗೆ, ರೈತರಿಗೆ ಅಮನಾಮ ಮಾಡುತ್ತಿದ್ದಾರೆ. ಕಾರ್ಖಾನೆ ಆರಂಭವಾಗುವುದು ತಡವಾಗಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಹೊಣೆ ಯಾರು ಎಂದು ಪ್ರಶ್ನಿಸಿದರು.

 ಹಿಂದಿನ ಸರ್ಕಾರ ₹69ಕೋಟಿ ಮೀಸಲಿಟ್ಟು, ಒ ಅಂಡ್‌ ಎಂ ಮಾದರಿಯಲ್ಲಿ ಕಾರ್ಖಾನೆ ಪ್ರಾರಂಭಿಸಲು ನಿರ್ಣಯ ತೆಗೆದುಕೊಂಡಿತ್ತು. ಆಗ ವಿರೋಧ ವ್ಯಕ್ತಪಡಿಸದವರು ಈಗ ಏಕೆ ವಿರೋಧಿಸುತ್ತಿದ್ದಾರೆ ಎಂದರು.

‘ಒ ಅಂಡ್‌ ಎಂ’ ವಿಚಾರದಲ್ಲಿ ಕೆಲವರು ನನನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಟೀಕೆ, ಆಪಾದನೆ ಮಾಡಿದ್ದಾರೆ. ನನ್ನ ಬೆಂಬಲಿಗರಿಗೆ ಕಾರ್ಖಾನೆ ಮೇಲೆ ಕಣ್ಣಿದೆ ಎಂದ ಆರೋಪ ಮಾಡುತ್ತಿದ್ದಾರೆ. ನನ್ನ ಬೆಂಬಲಿಗರೆಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ. ಫ್ಯಾಕ್ಟರಿ ಮೇಲೆ ಕಣ್ಣಿಡುವಷ್ಟು ದುರ್ಗತಿ, ದುಸ್ಥಿತಿ ಬಂದಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು