ಶನಿವಾರ, ಮೇ 21, 2022
26 °C
ಸರ್ಕಾರಕ್ಕೆ ಹಣ ಪಾವತಿಸದ ನಿರಾಣಿ ಶುಗರ್ಸ್‌: ಆರೋಪ

ಷರತ್ತು ಉಲ್ಲಂಘನೆ: ರೈತರ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ ಎಸ್‌ಕೆ)ಯನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್‌ ಗುತ್ತಿಗೆ ಒಪ್ಪಂದದ ಷರತ್ತು ಗಳನ್ನು ಉಲ್ಲಂಘಿಸಿದ್ದು, ಸಂಬಂಧಿಸಿದ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಪಿಎಸ್‌ಎಸ್‌ಕೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಕೆ.ನಾಗೇಂದ್ರಸ್ವಾಮಿ, ‘ಸಚಿವ ಮುರುಗೇಶ ನಿರಾಣಿ ಅಧ್ಯಕ್ಷರಾ ಗಿರುವ ನಿರಾಣಿ ಶುಗರ್ಸ್‌ ಕಂಪೆನಿ ಕಾರ್ಖಾನೆಯನ್ನು ಗುತ್ತಿಗೆ ಪಡೆದಿದೆ. ಆದರೆ ಗುತ್ತಿಗೆ ಪಡೆಯುವಾಗ ವಿಧಿಸಿರುವ ಷರತ್ತುಗಳನ್ನು ಕಂಪೆನಿ ಉಲ್ಲಂಘಿಸಿದೆ. ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಇನ್ನೂ ಕಟ್ಟಿಲ್ಲ. ಕಾರ್ಖಾನೆಯ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಇಲ್ಲದೆ ಆತಂಕದಲ್ಲಿದ್ದಾರೆ. ಈ ಭಾಗದ ಕಬ್ಬು ಬೆಳೆಗಾರರಿಗೂ ನಂಬಿಕೆ ಇಲ್ಲ. ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಗೊಂದಲ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ದರಸಗುಪ್ಪೆ ಮಂಜುನಾಥ್‌ ಮಾತನಾಡಿ, ‘ಒಪ್ಪಂದದಂತೆ ನಿರಾಣಿ ಶುಗರ್‌ ಕಂಪೆನಿ 90 ದಿನಗಳಲ್ಲಿ ಸರ್ಕಾರಕ್ಕೆ ₹ 20 ಕೋಟಿ ಪಾವತಿಸಬೇಕಿತ್ತು. ಆದರೆ, ಕೇವಲ ₹ 5 ಕೋಟಿ ಮಾತ್ರ ಪಾವತಿಸಿದೆ. ಇಷ್ಟಾದರೂ ಜಿಲ್ಲಾಡಳಿತ ಕಂಪೆನಿಯಿಂದ ಬರಬೇಕಾದ ಬಾಕಿ ಹಣ ಪಡೆಯಲು ಮನಸ್ಸು ಮಾಡಿಲ್ಲ. ಏ.17ರ ಒಳಗೆ ಸಮಸ್ಯೆ ಬಗೆಹರಿಯದಿದ್ದರೆ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳ ರೈತರು ಸಭೆ ನಡೆಸಿ ಹೋರಾಟ ರೂಪಿಸಲಿದ್ದೇವೆ’ ಎಂದು ಎಚ್ಚರಿಸಿದರು.

ಜೆಡಿಎಸ್‌ ಕಾರ್ಯಾಧ್ಯಕ್ಷ ಎನ್‌.ಶಿವಸ್ವಾಮಿ, ಮುಖಂಡರಾದ ಸಿ.ಸ್ವಾಮಿ ಗೌಡ, ತಮ್ಮೇಗೌಡ, ನಾಗೇಂದ್ರು, ಚಂದಗಾಲು ಶಂಕರ್‌, ಜಿ.ಇ.ಸುಧಾಕರ್, ಆಂಜನೇಯ, ರಂಗೇಗೌಡ, ಅಶೋಕ್‌, ಜಯರಾಂ, ದೊಡ್ಡಣ್ಣ ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು