ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ| ಕಬ್ಬಿಗೆ ದರ ನಿಗದಿ: ಸರ್ಕಾರದ ವಿರುದ್ಧ ಆಕ್ರೋಶ

ಕನಿಷ್ಠ ಬೆಲೆ, ಅವೈಜ್ಞಾನಿಕ ಇಳುವರಿ ಮಾನದಂಡ ಖಂಡಿಸಿ ರೈತಸಂಘದ ಸದಸ್ಯರ ಪ್ರತಿಭಟನೆ
Published 31 ಜುಲೈ 2023, 14:51 IST
Last Updated 31 ಜುಲೈ 2023, 14:51 IST
ಅಕ್ಷರ ಗಾತ್ರ

ಮಂಡ್ಯ: ಟನ್‌ ಕಬ್ಬಿಗೆ ₹4,500 ದರ ನಿಗದಿ, ಶೇ 8.5 ಇಳುವರಿ ಮಾನದಂಡ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಸರ್‌ಎಂ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮಟೆ, ನಗಾರಿಗಳ ಸದ್ದಿನ ಜೊತೆ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು, ಪ್ರತಿಭಟನಾ ಸಭೆ ನಡೆಸಿ ಸರ್ಕಾರ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ ಶೇ 8.5 ಇಳುವರಿಯನ್ನು ಮಾನದಂಡ ಮಾಡಿ ದರ ನಿಗದಿ ಮಾಡಬೇಕು. ಹಿಂದಿನ ಸರ್ಕಾರ ಕಾರ್ಖಾನೆಗಳಿಂದ ಪ್ರತಿ ಟನ್‌ ಕಬ್ಬಿಗೆ ₹150 ಕೊಡಿಸಲು ವಿಫಲವಾಗಿದೆ. ಆ ಹಣವನ್ನು ಕಬ್ಬು ಬೆಳೆಗಾರರಿಗೆ ಕಾರ್ಖಾನೆಯವರು ನೀಡುವಂತೆ ಸರ್ಕಾರ ಕ್ರಮ ವಹಿಸಬೇಕು. ಕನಿಷ್ಠ ಬೆಂಬಲ ಬೆಲೆ ನೀಡುವ ಸಂಬಂಧ ಶಾಸನಬದ್ಧ ಕಾನೂನು ರೂಪಿಸಬೇಕು. ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಗಳನ್ನು ವಾಪಸ್ ಪಡೆಯಲು ಕೃಷಿ ಬೆಲೆ ಆಯೋಗಕ್ಕೆ ಶಾಸನಬದ್ಧ ಅಧಿಕಾರ ನೀಡಬೇಕು. ಟನ್ ಕಬ್ಬಿಗೆ ₹4500 ದರ ನೀಡಬೇಕು. ರಂಗರಾಜನ್ ವರದಿ ಪ್ರಕಾರ ಉಪ ಉತ್ಪನ್ನಗಳ ಮೇಲಿನ ಲಾಭಾಂಶದಲ್ಲಿ ಕಬ್ಬು ಬೆಳೆಗಾರರಿಗೆ ಶೇ 70 ರಷ್ಟು ನೀಡಬೇಕು. ರಾಜ್ಯ ಸರ್ಕಾರ ಎಸ್ಎಪಿ ದರವನ್ನು ಟನ್‌ಗೆ ಕನಿಷ್ಠ ₹500 ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ನೀರು ಹಾಲು ಹಗರಣವನ್ನು ತನಿಖೆಗೆ ವಹಿಸಿದ್ದ ಸಿಒಡಿ ಯಾವುದೇ ಸತ್ಯಾಂಶ ಹೊರಬೀಳುವ ಸಾಧ್ಯತೆ ಇಲ್ಲದೇ ಇರುವ ಕಾರಣ ಈ ಹಗರಣವನ್ನು ಸಿಬಿಐಗೆ ವಹಿಸಬೇಕು. ವರ್ಷಪೂರ್ತಿ ಕಾಯಂ ಆಗಿ ಭತ್ತ, ರಾಗಿ, ಕೊಬ್ಬರಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಈಗ ಚಾಲ್ತಿಯಲ್ಲಿರುವ 3 ಜಿಲ್ಲೆಗಳಿಗೆ ಭತ್ತಕ್ಕೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

ಗುಣಮಟ್ಟದ 3 ಫೇಸ್ ವಿದ್ಯುತ್‌ ಅನ್ನು ಹಗಲು ವೇಳೆ 7 ಗಂಟೆಗಳ ಕಾಲ ನೀಡಬೇಕು. ಪಂಪ್ ಸೆಟ್‌ಗಳಿಗೆ ಆಧಾರ್ ಕಾರ್ಡ್‌ ಜೋಡಣೆ ಕ್ರಮ ಕೈಬಿಡಬೇಕು. ರೈತರಿಂದ ಖರೀದಿಸುವ ಲೀಟರ್‌ ಹಾಲಿಗೆ ₹1.75 ಕಡಿತ ಮಾಡಿರುವುದನ್ನು ಕೂಡಲೇ ವಾಪಸ್‌ ಪಡೆಯಬೇಕು. ಮನ್‌ಮುಲ್‌ನಲ್ಲಿ ಹಿಂದೆ ನಡೆದಿರುವ ₹72 ಕೋಟಿ ಹಣವನ್ನು ವಸೂಲಿ ಮಾಡಿ ಒಕ್ಕೂಟಕ್ಕೆ ಜಮಾ ಮಾಡಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಪ್ರಮುಖವಾಗಿದ್ದು, ಸರ್ಕಾರಿ ರೇಷ್ಮೆ ಕೇಂದ್ರಗಳಲ್ಲಿ ಚಾಕಿ ಸಾಕಾಣಿಕೆಯ ವ್ಯವಸ್ಥೆ ಮುಂದುವರಿಸಬೇಕು. ರೇಷ್ಮೆ ಬೆಳೆಗಾರರಿಗೆ 1 ಕೆ.ಜಿ. ರೇಷ್ಮೆ ಗೂಡಿಗೆ ಕನಿಷ್ಠ ₹50 ಪ್ರೋತ್ಸಾಹ ಧನ ನೀಡಬೇಕು. ಕೆ.ಆರ್.ಎಸ್.ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಿಸ್ನಿಲ್ಯಾಂಡ್ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಪ್ರಸನ್ನ ಎನ್.ಗೌಡ, ಜಿ.ಎಸ್.ಲಿಂಗಪ್ಪಾಜಿ, ವಿಜಯ ಕುಮಾರ್, ತಗ್ಗಹಳ್ಳಿ ಪ್ರಸನ್ನ, ಕೋಣನಹಳ್ಳಿ ಮಂಜು, ಬೊಮ್ಮೇಗೌಡ, ಲತಾ ಶಂಕರ್, ಬಾಲಕೃಷ್ಣ, ದೇವರಾಜು, ಚಂದ್ರ, ಎಚ್.ಕೆ.ರವಿಕುಮಾರ್, ರಾಣಿ, ಕನ್ನಲಿ ಕೃಷ್ಣ, ಪ‍ಣಕನಹಳ್ಳಿ ಧನಂಜಯ್, ಶಿವಳ್ಳಿ ಚಂದ್ರು ಭಾಗವಹಿಸಿದ್ದರು.

ಹೆಚ್ಚುವರಿ ದರ ನೀಡದ ಸಕ್ಕರೆ ಕಾರ್ಖಾನೆಗಳು ಭತ್ತಕ್ಕೆ ಪ್ರೋತ್ಸಾಹಧನ: ಎಲ್ಲಾ ಜಿಲ್ಲೆಗೂ ವಿಸ್ತರಿಸಿ ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹಧನ ಅವಶ್ಯ

ಐಸಿಸಿ ಸಭೆ ನಡೆಸಿ ನೀರು ಹರಿಸಿ ಕೆಆರ್‌ಎಸ್‌ ಮತ್ತು ಹೇಮಾವತಿ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೆ ಮುಂದಿನ ಬೆಳೆ ಬೆಳೆಯಲು ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸಬೇಕು. ಗೃಹಬಳಕೆ ವಿದ್ಯುತ್ ಶುಲ್ಕಕ್ಕೆ ಕನಿಷ್ಠ ₹85 ಗಳಿಂದ ₹110ಕ್ಕೆ ಹೆಚ್ಚಿಸಿರುವುದು ಸರಿಯಲ್ಲ. ಹಿಂದೆ ಇದ್ದಂತ ಸ್ಲ್ಯಾಬ್‌ಗಳ ಪದ್ಧತಿ ತೆಗೆದು ಒಂದೇ ದರ ನಿಗದಿ ಮಾಡುವುದನ್ನು ರದ್ದುಪಡಿಸಿ ಹಿಂದಿನ ವಿದ್ಯುತ್ ಶುಲ್ಕದ ವ್ಯವಸ್ಥೆ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT