ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಬತ್ತಿ ಹೋದ ಲೋಕಪಾವನಿ ನದಿ!

Published 28 ಮಾರ್ಚ್ 2024, 6:56 IST
Last Updated 28 ಮಾರ್ಚ್ 2024, 6:56 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ವರ್ಷ ಪೂರ್ತಿ ಹರಿಯುತ್ತಿದ್ದ ಜಿಲ್ಲೆಯ ಜೀವ ನದಿ ಲೋಕ‍ಪಾವನಿ ಈ ಬಾರಿ ಎದುರಾದ ತೀವ್ರ ಬರಗಾಲದ ಪರಿಣಾಮ ಬತ್ತಿ ಹೋಗಿದೆ.

ನಾಗಮಂಗಲ ತಾಲ್ಲೂಕಿನಲ್ಲಿ ಹುಟ್ಟಿ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳ ಅಂಚಿನಲ್ಲಿ ಹರಿಯುವ ಈ ನದಿ 21 ವರ್ಷಗಳ ಬಳಿಕ ಮತ್ತೆ ಬತ್ತಿ ಹೋಗಿದೆ. ಕೃಷಿ ಮತ್ತು ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವಾಗಿದ್ದ ಲೋಕಪಾವನಿ ಒಣಗಿ ಬಣಗುಡುತ್ತಿದೆ. ಈ ನದಿಯ ದಡದಲ್ಲಿ ಜಮೀನು ಹೊಂದಿರುವ ರೈತರು ನೀರಿಗಾಗಿ ನದಿಯ ಒಳಗೆ ಬಾವಿ ತೋಡುತ್ತಿದ್ದಾರೆ. ಅಲ್ಲಲ್ಲಿ ಕಿರು ಬಾವಿಗಳನ್ನು ತೋಡಿ ಯಂತ್ರಗಳ ಮೂಲಕ ತಮ್ಮ ಬೆಳೆ ಉಳಿಸಿಕೊಳ್ಳಲು ನೀರು ಎತ್ತುತ್ತಿದ್ದಾರೆ. ವಾರದಿಂದ ನದಿಯ ಒಳಗಿನ ಬಾವಿಗಳಲ್ಲಿ ಕೂಡ ನೀರು ಸಿಗುತ್ತಿಲ್ಲ ಎಂದು ಸಬ್ಬನಕುಪ್ಪೆ, ಚಂದಗಿರಿಕೊಪ್ಪಲು, ಬಲ್ಲೇನಹಳ್ಳಿ ಗ್ರಾಮಗಳ ರೈತರು ಅಳಲು ತೋಡಿಕೊಳ್ಳುತ್ತಾರೆ.

ಚಿಕ್ಕದೇವರಾಯ ಸಾಗರ (ಸಿಡಿಎಸ್‌) ಮತ್ತು ವಿಶ್ವೇಶ್ವರಯ್ಯ ನಾಲೆಗಳಲ್ಲಿ ನೀರು ಹರಿದರೆ ಲೋಕಪಾವನಿ ನದಿಯಲ್ಲಿ ಕೂಡ ನೀರು ಇರುತ್ತದೆ. ಆದರೆ ಈ ನಾಲೆಗಳಲ್ಲಿ ನೀರು ನಿಲ್ಲಿಸಿ ಮೂರು ತಿಂಗಳ ಮೇಲಾಗಿದೆ. ಹಾಗಾಗಿ ನಾಲೆಗಳ ಸೋರಿಕೆ ನೀರು ಲೋಕಪಾವನಿ ನದಿಗೆ ಇಳಿಯುತ್ತಿಲ್ಲ. ಹಾಗಾಗಿ ಲೋಕಪಾವನಿ ನದಿ ಸಂಪೂರ್ಣ ಒಣಗಿ ಹೋಗಿದೆ.

ಲೋಕಪಾವನಿ ನದಿ 2003ರ ನಂತರ ಮತ್ತೆ ಸಂಪೂರ್ಣ ಬತ್ತಿ ಹೋಗಿದೆ. ಇಲ್ಲಿ ನದಿ ಹರಿಯುತ್ತಿತ್ತು ಎಂಬ ಕುರುಹು ಕೂಡ ಕಾಣುತ್ತಿಲ್ಲ. ದನ, ಕರುಗಳಿಗೆ ಕುಡಿಸಲು ನೀರು ಸಿಗದೆ ಪಶುಪಾಲಕರು ಪರದಾಡುತ್ತಿದ್ದಾರೆ.

‘ವಿಶ್ವೇಶ್ವರಯ್ಯ ನಾಲೆಯ ಕಾಮಗಾರಿ ನಡೆಯುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯದಿಂದ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ನದಿ ಒಡ್ಡಿನಿಂದ ಬರುವ ಸಿಡಿಎಸ್‌ ನಾಲೆಗೂ ನೀರು ಹರಿಸದೆ ಅನ್ಯಾಯ ಮಾಡಲಾಗುತ್ತದೆ. ತಕ್ಷಣ ಈ ನಾಲೆಗೆ ನೀರು ಹರಿಸಬೇಕು. ಲೋಕಪಾವನಿ ನದಿಯ ಸೇತುವೆಗಳಿಗೆ ಅಪಾರ ಪ್ರಮಾಣದ ತ್ಯಾಜ್ಯ ಸಿಕ್ಕಿಕೊಂಡಿದ್ದು, ತೆರವುಗೊಳಿಸಬೇಕು ಎಂದು ಸಬ್ಬನಕುಪ್ಪೆ ರೈತ ಬೋರೇಗೌಡ, ಚಂದಗಿರಿಕೊಪ್ಪಲು ರೈತ ಜ್ಞಾನೇಶ್‌ ಒತ್ತಾಯಿಸಿದ್ದಾರೆ.

ನದಿಯ ಹುಟ್ಟು: ನಾಗಮಂಗಲ ತಾಲ್ಲೂಕಿನ ಪಡುವಲಪಟ್ಟಣ ಸಮೀಪದ ಬಸವನಬೆಟ್ಟ ಎಂಬಲ್ಲಿ ಲೋಕಪಾವನಿ ನದಿ ಹುಟ್ಟುತ್ತದೆ. ಪಾಂಡವಪುರ ತಾಲ್ಲೂಕಿನ ಪಟ್ಟಸೋಮನಹಳ್ಳಿ ಮೂಲಕ ಶ್ರೀರಂಗಪಟ್ಟಣ ತಾಲ್ಲೂಕು ಪ್ರವೇಶಿಸುತ್ತದೆ. ತಾಲ್ಲೂಕಿನ ನೆಲಮನೆ ಬಳಿ ಈ ನದಿಗೆ ತೊಣ್ಣೂರು ಕೆರೆಯ ನೀರು ಸೇರುತ್ತದೆ. ಅಲ್ಲಿಂದ ದಕ್ಷಿಣಾಭಿಮುಖವಾಗಿ ಹರಿದು ಚಂದಗಿರಿಕೊಪ್ಪಲು, ಬಲ್ಲೇನಹಳ್ಳಿ, ಕೆ.ಶೆಟ್ಟಹಳ್ಳಿ, ಬಾಬುರಾಯನಕೊಪ್ಪಲು, ಶ್ರೀನಿವಾಸ ಅಗ್ರಹಾರ ಗ್ರಾಮಗಳ ಸರಹದ್ದಿನಲ್ಲಿ ಒಟ್ಟು 45 ಕಿ.ಮೀ. ದೂರ ಹರಿದು ಕರಿಘಟ್ಟದ ಬಳಿ ಇದು ಕಾವೇರಿ ನದಿಯ ಒಡಲನ್ನು ಸೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT