ಶನಿವಾರ, ಜುಲೈ 31, 2021
27 °C
ಮನೆಯಲ್ಲೇ ಉಳಿದ ಸಾರ್ವಜನಿಕರು, ಬಿಕೋ ಎಂದ ರಸ್ತೆಗಳು, ಅಲ್ಲಲ್ಲಿ ಬ್ಯಾರಿಕೇಡ್‌

ಮಂಡ್ಯದಲ್ಲಿ ಭಾನುವಾರದ ಲಾಕ್‌ಡೌನ್‌ ಯಶಸ್ವಿ: ವಹಿವಾಟು ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರೆ ಕೊಟ್ಟಿದ್ದ ಭಾನುವಾರದ ಲಾಕ್‌ಡೌನ್‌ ಜಿಲ್ಲೆಯಾದ್ಯಂತ ಯಶಸ್ವಿಯಾಯಿತು. ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಮಿಕ್ಕೆಲ್ಲಾ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು. ಪೇಟೆ ಬೀದಿ, ಮಹಾವೀರ ವೃತ್ತ, ವಿವಿ ರಸ್ತೆ, ಆರ್‌ ‍.ಪಿ ರಸ್ತೆ, ವಿನೋಬಾ ರಸ್ತೆ, ನೂರಡಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು. ದಿನಸಿ ಅಂಗಡಿ, ತರಕಾರಿ, ಹಾಲು ಖರೀದಿ ಕೇಂದ್ರಗಳು, ಔಷಧ ಅಂಗಡಿ, ಕೋಳಿ, ಮಾಂಸದ ಅಂಗಡಿ, ಮೀನು ಮಾರುಕಟ್ಟೆ, ಪೆಟ್ರೋಲ್ ಬಂಕ್‍ಗಳು ತೆರೆದಿದ್ದವು. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಯಾವುದೇ ತಡೆ ಇರಲಿಲ್ಲ.

ಬೆಂಗಳೂರು ಮತ್ತು ಅಂತರ ಜಿಲ್ಲೆಯಿಂದ ಬರುವವರಿಗೆ ಸೋಂಕು ದೃಢಪಡುತ್ತಿರುವ ಹಿನ್ನೆಲೆಯಲ್ಲಿ ಜನರು ಸ್ವಯಂ ಪ್ರೇರಿತವಾಗಿ ಮನೆಯಿಂದ ಹೊರಬರದೆ ಲಾಕ್‍ಡೌನ್ ನಿಯಮ ಪಾಲಿಸಿದರು.  ಭಾನುವಾರ ಲಾಕ್‍ಡೌನ್ ಎಂಬುದನ್ನು ಮುನ್ನವೇ ಅರಿತಿದ್ದ ಜನರು ಶನಿವಾರವೇ ಬೇಕಾದ ವಸ್ತುಗಳನ್ನು ಖರೀದಿಸಿ ಮನೆಯಿಂದ ಹೊರ ಹೋಗದಂತೆ ಸಿದ್ಧತೆ ಮಾಡಿಕೊಂಡಿದ್ದರು.

ಕೆಲವರು ಭಾನುವಾರ ಅಗತ್ಯ ವಸ್ತುಗಳ ಖರೀದಿಸಲು ಹೊರ ಬಂದಾಗ ಪೊಲೀಸರು ಲಾಕ್‍ಡೌನ್ ಪಾಠ ಮಾಡಿ ಕೊರೊನಾ ಸೋಂಕು ತಡೆಯಲು ಸಹಕಾರ ನೀಡುವಂತೆ ಕೋರಿದರು. ವಿವಿಧೆಡೆ ಮಾಂಸ ಮಾರಾಟ ಜೋರಾಗಿ ನಡೆಯಿತು. ಚಿಕ್ಕಮಂಡ್ಯ ರಸ್ತೆ, ಕಾರಸವಾಡಿ ರಸ್ತೆಗಳ ಅಂಗಡಿಗಳಲ್ಲಿ ಬೆಳಿಗ್ಗೆ 10 ಗಂಟೆವರೆಗೆ ಅಪಾರ ಸಂಖ್ಯೆಯ ಜನರು ಮಾಂಸ ಖರೀದಿ ಮಾಡಿದರು.

ಬೆಳಿಗ್ಗೆ ಕೆಲವೆಡೆ ಬೆಳಿಗ್ಗೆ ಹೋಟೆಲ್‍ಗಳು ತೆರೆದಿದ್ದವು. ಪೊಲೀಸರು ಬಂದು ಬಾಗಿಲು ಬಂದ್‌ ಮಾಡಿಸಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಿದರು. ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆ ಮಾಡಿದ್ದು ಅಗತ್ಯ ವಸ್ತುಗಳ ಖರೀದಿಗೆ ಹೊರಬಂದವರು ಮುಖಗವಸು ಧರಿಸಿದ್ದರು.

ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ ತರಕಾರಿ ಖರೀದಿಗೆ ಜನರು ಮುಗಿ ಬಿದ್ದಿದ್ದರು. ಮುಖಗವಸು, ಅಂತರ ಕಾಯ್ದುಕೊಳ್ಳುವಲ್ಲಿ ವೈಫಲ್ಯ ಎದ್ದು ಕಾಣಿಸಿತು. ಆಗ ಅಲ್ಲಿ ಪೊಲೀಸರು ಇಲ್ಲದ ಕಾರಣ ಯಾವುದೇ ನಿಯಮ ಪಾಲನೆ ಸಾಧ್ಯವಾಗಲಿಲ್ಲ. ಗ್ರಾಹಕರು ತರಾತುರಿಯಲ್ಲಿ ಅಂತರ ಕಾಯ್ದುಕೊಳ್ಳದೇ ಖರೀದಿಯಲ್ಲಿ ತೊಡಗಿದ್ದರು.

ಲಾಕ್‍ಡೌನ್ ಕಾರಣದಿಂದ ಭಾನುವಾರ ಜಿಲ್ಲೆಯಲ್ಲಿ ಖಾಸಗಿ ಬಸ್, ಕೆಎಸ್‍ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಕೆಎಸ್‍ಆರ್‌ಟಿಸಿ ಬಸ್‍ಗಳು ಘಟಕಗಳಲ್ಲೇ ನಿಂತಿದ್ದವು. ಆಟೊಗಳು ಕೂಡ ರಸ್ತೆಗೆ ಇಳಿಯಲಿಲ್ಲ. ಬಂದ್‌ ವಿಚಾರ ತಿಳಿಯದೇ ಕೆಲವರು ಬಸ್‌ ನಿಲ್ದಾಣಕ್ಕೆ ಬಂದಿದ್ದರು. ವಾಹನಗಳು ಸಿಗದೇ ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು.  ಲಾಕ್‍ಡೌನ್ ಸಡಿಲಿಕೆಯ ನಂತರದ ದಿನಗಳಲ್ಲಿ ಮಾಡಿದ ಮೊದಲ ಲಾಕ್‍ಡೌನ್‍ಗೆ ಜನರು ಸಂಪೂರ್ಣ ಬೆಂಬಲ ನೀಡಿ ಯಶಸ್ವಿಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು