ಶನಿವಾರ, ಮಾರ್ಚ್ 25, 2023
22 °C
ಕನ್ನಡಾಂಬೆ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲಿಕೆ

ಮಂಡ್ಯ ಕನ್ನಡಿಗರಾದ ತಮಿಳಿಗರು, ಕನ್ನಡಾಂಬೆ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲಿಕೆ

ಮೋಹನ್‌ ರಾಗಿಮುದ್ದನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜೀವಕೊಟ್ಟಿದ್ದು, ಅನ್ನಕೊಟ್ಟಿದ್ದು, ಆಶ್ರಯ ನೀಡಿದ್ದು ಕನ್ನಡ ನಾಡು... ಎಂದು ಮಂಡ್ಯ ತಮಿಳು ಕಾಲೊನಿಯ ನಿವಾಸಿಗಳು ಹೆಮ್ಮೆಯಿಂದ ಹೇಳುತ್ತಾರೆ. ತಮ್ಮ ಮನೆಯಲ್ಲಿ ಕನ್ನಡಾಂಬೆಯ ಚಿತ್ರ ಇರಿಸಿ ಪ್ರತಿ ದಿನ ಪೂಜಿಸಿ ಕನ್ನಡಕ್ಕೆ ಜೈ ಎನ್ನುತ್ತಿರುವ ಇವರ ಕನ್ನಡ ಭಾಷಾಭಿಮಾನ ಎಲ್ಲರ ಗಮನ ಸೆಳೆದಿದೆ. 

ಮಂಡ್ಯ ಜಿಲ್ಲೆಯಲ್ಲಿ ಸುಮಾರು 100 ವರ್ಷದ ಹಿಂದೆ ನಾಲ್ಕು ತಲೆಮಾರಿನಿಂದ ಜೀವನ ನಡೆಸಿಕೊಂಡು ಬರುತ್ತಿರುವ ತಮಿಳಿಗರು ಎದೆತಟ್ಟಿ ನಾವು ಕನ್ನಡಿಗರೆಂದು ಹೇಳುತ್ತಿದ್ದಾರೆ. ಇಲ್ಲಿನ ನೆಹರೂ ನಗರದ ತಮಿಳು ಕಾಲೊನಿಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಸುಮಾರು 524 ಕುಟುಂಬಗಳು ನಗರದ ವಿವಿಧೆಡೆ ವಾಸ ಮಾಡುತ್ತಿವೆ. ಮಂಡ್ಯದ ಸುಂದರ ಕಲ್ಲುಕಟ್ಟಡಗಳ ನಿರ್ಮಾಣದ ಶ್ರಮಕ್ಕೆ ಈ ಕುಟುಂಬಗಳು ಸಾಕ್ಷಿಯಾಗಿವೆ.

ಜಿಲ್ಲೆಯ ಏಳೂ ತಾಲ್ಲೂಕಿನಲ್ಲೂ ಜೀವನೋಪಾಯಕ್ಕೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿರುವ ಈ ಕುಟುಂಬಗಳಲ್ಲಿ ಸುಮಾರು 40 ಸಾವಿರ ಮಂದಿ ಇದ್ದಾರೆ. ಇವರೆಲ್ಲ ‘ತನು ಕನ್ನಡ ಮನ ಕನ್ನಡ’ ಎಂಬುದನ್ನು ಸ್ವಭಾವತಃ ರೂಡಿಸಿಕೊಂಡು ಕನ್ನಡಿಗರಲ್ಲಿ ಬೆರೆತು ಹೋಗಿದ್ದಾರೆ.

ಬಹುತೇಕ ಕಾಲೊನಿಯ ಮನೆಗಳಲ್ಲಿ ಕನ್ನಡಾಂಬೆ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಬಸವಣ್ಣ, ಮಹಾತ್ಮ ಗಾಂಧೀಜಿ, ಡಾ.ಅಂಬೇಡ್ಕರ್‌, ರಾಷ್ಟ್ರಕವಿ ಕುವೆಂಪು ಅವರ ಚಿತ್ರಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಮಹಾತ್ಮರ ಜಯಂತಿಯನ್ನು ಪ್ರತಿ ವರ್ಷ ಸಂಭ್ರಮದಿಂದ ಕಾಲೊನಿಯ ಜನರ ಜತೆ ಆಚರಿಸುತ್ತೇವೆ. ನಮ್ಮಲ್ಲಿ ಜಾತಿಭೇದ ಇಲ್ಲ. ನಮ್ಮ ಕಾಲೊನಿಯಲ್ಲಿ ಒಂದು ಕನ್ನಡ ಶಾಲೆಯೂ ಇದೆ ಎಂದು ಕಾಲೊನಿಯ ವೆಂಕಟೇಶ್‌, ಸೆಲ್ವಕುಮಾರ್, ಬಿಲ್ಲಾ, ಮುರಳಿ, ಶಿವಗಾಮಿ, ರಾಜೇಶ್ವರಿ, ಪಳಿನಿ, ಮಹೇಂದ್ರ ಹೆಮ್ಮೆಯಿಂದ ಹೇಳುತ್ತಾರೆ. 

ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌ ಅವರ ಸಾವಿನಿಂದ ಹಿಡಿದು ಇಲ್ಲಿಯವರೆಗೆ ಕನ್ನಡ ನಟ, ನಟಿಯರು ಮರಣ ಹೊಂದಿದ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ಮೇರು ನಟರ ಜನ್ಮದಿನವನ್ನೂ ಆಚರಿಸುತ್ತಿದ್ದಾರೆ. ನಮಗೆ ಕನ್ನಡ ನಾಡು ನುಡಿ ಬಗ್ಗೆ ಅಪಾರ ಗೌರವವಿದೆ. ಕನ್ನಡದಲ್ಲೇ ಕಲಿತು ಬೆರೆತುಹೋಗಿದ್ದೇವೆ ಎಂದು ತಮಿಳು ಕಾಲೊನಿಯ ಜಗನ್ನಾಥ್‌, ಅಯ್ಯಪ್ಪ, ಅಪ್ಪು ಹೇಳುತ್ತಾರೆ.

ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಪ್ರವಾಸದಲ್ಲಿದ್ದಾಗ ತಂಜಾವೂರಿನ ರಾಜರಾಜಚೋಳನ್‌ ಗೋಪುರ ನೋಡಿ ಆಕರ್ಷಿತರಾಗಿದ್ದರು. ರಾಜ್ಯಕ್ಕೆ ಮರಳಿದ ಬಳಿಕ ಕನ್ನಂಬಾಡಿ ಕಟ್ಟೆ(ಕೆಆರ್‌ಎಸ್‌ ಅಣೆಕಟ್ಟೆ) ಕಟ್ಟಲು ನಿಪುಣರ ಅಗತ್ಯ ಇದೆ ಎಂದು ನಿರ್ಧರಿಸಿ ತಮಿಳುನಾಡಿನಲ್ಲಿ ಕಲ್ಲುಕಟ್ಟುವವರು ಹೆಚ್ಚು ಎಂಬುದನ್ನು ಅರಿತಿದ್ದ ನಾಲ್ವಡಿ ಅವರು ಮಂಡ್ಯ ಜಿಲ್ಲೆಗೆ 1911ರಲ್ಲಿ ತಮಿಳು ಕಲ್ಲು ಕಟ್ಟಡ ಕಾರ್ಮಿಕರನ್ನು ಕರೆಸುತ್ತಾರೆ. ಈ ಸಂದರ್ಭದಲ್ಲಿ ನಮ್ಮ ಪೂರ್ವಿಕರು ಬಂದರು ಎಂಬುದನ್ನು ವಕೀಲರಾದ ಏಲಿಯಾಸ್‌, ಸುರೇಶ್‌, ನಿವಾಸಿಗಳಾದ ಪೊನ್ನುರಂಗಮ್‌, ಶಕ್ತಿವೇಲ್‌, ಪೇಂಟರ್‌ ಮಂಜು, ಟೈಲರ್‌ ಕುಮಾರ್‌ ಮೆಲುಕು ಹಾಕುತ್ತಾರೆ.

ಸೌಲಭ್ಯ ಇಲ್ಲದೆ ಇರುವುದೇ ಬೇಸರ

1911ರಲ್ಲಿ ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ತಮಿಳಿಗರನ್ನು ಅಣೆಕಟ್ಟೆ ನಿರ್ಮಾಣ ಮಾಡಲು ಬಳಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲೇ ನೆಲೆಯೂರಲು ಆಶ್ರಯ ಕೊಟ್ಟ ಮಹಾರಾಜರು ಜಮೀನು ಕೊಡುಗೆ ನೀಡಿದ್ದಾರೆ. ಕನ್ನಡಿಗರಾಗಿರುವ ಈ ಜನರಿಗೆ ಮೂಲ ಸೌಲಭ್ಯವೇ ಇಲ್ಲದೆ ಇರುವುದು ಬೇಸರ ತರಿಸಿದೆ. ಪ್ರತಿ ದಾಖಲೆಯೂ ನಮ್ಮ ಕರ್ನಾಟಕದ್ದೇ ಆಗಿದ್ದು, ಕನ್ನಡಿಗರ ನಡುವೆ ಕನ್ನಡತನದೊಂದಿಗೆ ಬಾಳ್ವೆ ನಡೆಸುತ್ತಿರುವ ಅವರಿಗೆ ಇನ್ನಾದರೂ ಮುಕ್ತಿ ಸಿಗಬೇಕು. ಗೌರವದಿಂದ ಕನ್ನಡಿಗರೆಂಬ ಹೆಮ್ಮೆಯಿಂದ ಎಲ್ಲರಂತೆ ಬದುಕು ನಡೆಸಲು ವಾತಾವರಣ ಸೃಷ್ಟಿಸಿಕೊಡಬೇಕು.

- ಎಂ.ಸಿದ್ದರಾಜು, ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ಜನಶಕ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು