ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ: ಆರೋಗ್ಯ ಸಿಬ್ಬಂದಿಗೆ ಆದ್ಯತೆ

ಜಿಲ್ಲೆಯಲ್ಲಿ 8 ಸಾವಿರ ಕೋವಿಶೀಲ್ಡ್‌ ಲಸಿಕೆ ಸಂಗ್ರಹ, 8 ಕೇಂದ್ರಗಳಲ್ಲಿ ಚಾಲನೆ
Last Updated 16 ಜನವರಿ 2021, 13:25 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ 8 ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು. ಆರಂಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ಲಸಿಕಾ ಅಭಿಯಾನ ಚಾಲನೆ ನೀಡಲಾಯಿತು.

ಮಿಮ್ಸ್‌ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಚಾಲನೆ ನೀಡಿದರು. ಮಿಮ್ಸ್‌ ಆಸ್ಪತ್ರೆ, ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ದೊರೆಯಿತು.

ಜಿಲ್ಲೆಗೆ 8 ಸಾವಿರ ಕೋವಿಶೀಲ್ಡ್‌ ಲಸಿಕ ಎಬಂದಿದೆ. ಪ್ರತಿ ಕೇಂದ್ರದಲ್ಲಿ ನಿತ್ಯ ತಲಾ 100 ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಲಸಿಕೆ ಸಂಗ್ರಹಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ಕೇಂದ್ರಕ್ಕೂ ಪರಿಣತರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.

ಮಿಮ್ಸ್‌ ಆಸ್ಪತ್ರೆಯಲ್ಲಿ ಅಭಿಯಾನ ಉದ್ಘಾಟಿಸಿ ಮಾತನಾಡಿದ ಡಾ.ಎಂ.ವಿ.ವೆಂಕಟೇಶ್‌ ‘ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ವಿತರಣೆಎ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ನಿರ್ವಹಣೆ ಮಾಡುವ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಪ್ರಧಾನಮಂತ್ರಿ ರಾಷ್ಟ್ರದಾದ್ಯಂತ ಲಸಿಕೆ ಕೊಡುವ ಕಾರ್ಯಕ್ರಮಕ್ಕೆ ಉದ್ಘಾಟನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ನಿತ್ಯ 800 ಮಂದಿಗೆ ಲಸಿಕೆ ನೀಡಲಾಗುವುದು. ಮೊದಲು ವೈದ್ಯರು, ಗ್ರೂಪ್ ಡಿ ಸಿಬ್ಬಂದಿ, ಲ್ಯಾಬ್ ತಂತ್ರಜ್ಞರು ಮುಂತಾದ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು’ ಎಂದರು.

‘ಲಸಿಕೆ ಪಡೆದ ಪ್ರತಿ ವ್ಯಕ್ತಿಯನ್ನು 30 ನಿಮಿಷಗಳ ಕಾಲ ನಿಗಾವಹಿಸಲಾಗುತ್ತಿದೆ. ಅವರಿಗೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಕಂಡುಬಾರದಂತೆ ಎಚ್ಚರ ವಹಿಸಲಾಗುವುದು. 30 ನಿಮಿಷದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು. ಆಕಸ್ಮಿಕವಾಗಿ ಅಡ್ಡ ಪರಿಣಾಮ ಕಂಡುಬಂದರೆ ಅಗತ್ಯ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲಾ ಕೇಂದ್ರಗಳಲ್ಲೂ ಮೂಲ ಸೌಕರ್ಯ ಒದಗಿಸಲಾಗಿದೆ’ ಎಂದು ಹೇಳೀದರು.

‘ಪ್ರಥಮ ಹಂತದ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಕಳೆದ 9 ತಿಂಗಳುಗಳಿಂದ ಸಾರ್ವಜನಿಕರು ಬಹಳ ಸಂಕಟ್ಟ ಜೀವನ ನಡೆಸಿದ್ದಾರೆ. ಈಗ ಲಸಿಕೆ ಬಂದಿರುವುದು ಹೊಸ ಭರವಸೆ ಮೂಡಿಸಿದೆ. ಮುಂದೆ ಪೊಲೀಸ್‌ ಇಲಾಖೆ ಸಿಬ್ಬಂದಿ, ಜಿಲ್ಲಾ ಪಂಚಾಯಿತಿ ಕಾರ್ಮಿಕರು, ಪೌರ ಕಾರ್ಮಿಕರು, ಕಂದಾಯ ಇಲಾಖೆ ಸಿಬ್ಬಂದಿಗೂ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಎಂ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫಿಕರ್ ಉಲ್ಲಾ, ಮಂಡ್ಯ ಉಪವಿಭಾಗಾಧಿಕಾರಿ ಡಾ.ನೇಹಾ ಜೈನ್, ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ, ಮಿಮ್ಸ್‌ ನಿರ್ದೇಶಕ ಹರೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸೋಮಶೇಖರ್ ರವರು, ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಗಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT