ಮಂಗಳವಾರ, ಫೆಬ್ರವರಿ 25, 2020
19 °C
ಆಲಕೆರೆ ಗ್ರಾಮದಲ್ಲಿ ನಡೆದ ಉತ್ಸವ, ಸಾವಿರಾರು ಭಕ್ತರು ಭಾಗಿ, ದೇವರಿಗೆ ಬೆಣ್ಣೆ ಅಲಂಕಾರ

ವೈಭವದ ವೀರಭದ್ರಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆರಗೋಡು: ಸಮೀಪದ ಆಲಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವೀರಭದ್ರಸ್ವಾಮಿ ರಥೋತ್ಸವ ಮತ್ತು ಶಿವದೀಪೋತ್ಸವ ಅಪಾರ ಭಕ್ತರ ಸಮೂಹದ ನಡುವೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಮುಂಜಾನೆಯಿಂದಲೇ ಗ್ರಾಮಸ್ಥರು ಉದ್ಭವಲಿಂಗ ಮೂರ್ತಿ ಮತ್ತು ವೀರಭದ್ರೇಶ್ವರ ದೇವರ ಮೂರ್ತಿಗೆ ಬೆಣ್ಣೆ ಮತ್ತು ಹೂವಿನ ಅಲಂಕಾರ ಮಾಡಿದ್ದರು. ಬಳಿಕ ಮನೆಯಿಂದ ನೈವೇದ್ಯ ತಂದು ಎಡೆಪೂಜೆ ಸಲ್ಲಿಸಿದರು. ನಂತರ ದೇಗುಲದಲ್ಲಿ ಭಕ್ತರು ಪಂಚಾಮೃತ ತಯಾರಿಸಿ ದೇವರಿಗೆ ಅರ್ಪಿಸಿ, ಗ್ರಾಮದ ಪ್ರತಿ ಮನೆಗೂ ಪ್ರಸಾದ ವಿತರಣೆ ಮಾಡಿದರು.

ಸಂಜೆ 6 ಗಂಟೆಗೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ದೇಗುಲದಲ್ಲಿ ನೆರೆದಿದ್ದ ಭಕ್ತರು, ದೀಪ ಹಚ್ಚಲು ಸಿದ್ಧತೆ ನಡೆಸಿದರು. ಇದೇ ವೇಳೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ರಾತ್ರಿ 9 ಗಂಟೆಗೆ ಸಂಪ್ರದಾಯದಂತೆ ಕೀಲಾರ ಗ್ರಾಮಸ್ಥರನ್ನು ಸ್ವಾಗತಿಸಿದ ಆಲಕೆರೆ ಗ್ರಾಮಸ್ಥರು, ದೇವರ ಮನೆಯಲ್ಲಿ ಇರಿಸಲಾಗಿದ್ದ ವೀರಭದ್ರೇಶ್ವರ ದೇವರ ಪರಿಕರಗಳಾದ ನಂದಿಕಂಬ, ವೀರಭದ್ರ ದೇವರಿಗೆ ಸಂಬಂಧಿಸಿದ ವಸ್ತುಗಳನ್ನು ಸಿದ್ಧಪಡಿಸಲಾಯಿತು. ಉತ್ಸವ ಮೂರ್ತಿಯನ್ನು ದೇಗುಲದ ಮುಂಭಾಗಕ್ಕೆ ತಂದ ಕೂಡಲೇ ಭಕ್ತರು ದೀಪ ಹಚ್ಚಿ ಸಂಭ್ರಮಿಸಿದರು.

ರಾತ್ರಿ 11 ಗಂಟೆಗೆ ಕಿವಿಗಡಚಿಕ್ಕುವ ತಮಟೆ, ನಗಾರಿ ಸದ್ದು, ಸಿಡಿಮದ್ದುಗಳ ಭರಾಟೆಯಲ್ಲಿ ವೀರಭದ್ರ ದೇವರ ರಥ ಎಳೆಯಲಾಯಿತು. ದೇವರ ಮೂರ್ತಿಯನ್ನು ಹೊತ್ತು ಬುಧವಾರ ಬೆಳಗಿನವರೆಗೂ ಮೆರವಣಿಗೆ ನಡೆಸಿದರು. ಬಳಿಕ ದೇವಾಲಯದ ಆವರಣದಲ್ಲಿ ದೇವರಿಗೆ ಮಹಾಮಂಗಳಾರತಿ ನಡೆಸಿ, ತೀರ್ಥ ಪ್ರಸಾದ ನೀಡಿದ ಬಳಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ವೀರಗಾಸೆ, ಗಾರುಡಿ ಗೊಂಬೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು, ಗಾನ ಲಹರಿ ಕಾರ್ಯಕ್ರಮಗಳು ಜಾತ್ರಾ ಮಹೋತ್ಸವಕ್ಕೆ ವಿಶೇಷ ಮೆರುಗು ನೀಡಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು