ಶ್ರೀರಂಗಪಟ್ಟಣ: ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತ ಮಹಿಳೆಯರು ಭೂಮಿತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದ ಸೋಪಾನಕಟ್ಟೆ ಬಳಿ ಕಾವೇರಿ ನದಿ ತೀರದಲ್ಲಿ ಮಂಗಳವಾರ ‘ಒನಕೆ ಚಳವಳಿ’ ನಡೆಸಿದರು.
ರಾಜ್ಯ, ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು. ‘ಮಲಗಿರುವ ಜನಪ್ರತಿನಿಧಿಗಳಿಗೆ ಒನಕೆ ಏಟು’ ಎಂದು ಒನಕೆ ಕುಟ್ಟುತ್ತಾ ಗಟ್ಟಿ ದನಿಯಲ್ಲಿ ಹೇಳಿದರು.
ಸೋಪಾನಕಟ್ಟೆಯಿಂದ ಮಿನಿ ವಿಧಾನಸೌಧದವರೆಗೆ ಒನಕೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.
‘ಕೆಆರ್‌ಎಸ್ ಜಲಾಶಯದಲ್ಲಿ ಸಾಕಷ್ಟು ನೀರು ಇಲ್ಲ ಎಂಬುದು ಗೊತ್ತಿದ್ದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡುವ ಮುನ್ನವೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ದ್ರೋಹ ಬಗೆದಿದೆ. ಕುಡಿಯಲು ನೀರು ಸಿಗುವ ಸಾಧ್ಯತೆ ಕ್ಷೀಣಿಸುತ್ತಿದ್ದು, ಮುಂದಾಗುವ ತೊಂದರೆಗೆ ಸರ್ಕಾರವೇ ಹೊಣೆ’ ಎಂದು ರೈತ ಮಹಿಳೆ ಶೈಲಜಾ ನಂಜುಂಡೇಗೌಡ ಕಿಡಿಕಾರಿದರು.
‘ಮೇಕೆದಾಟು ಅಣೆಕಟ್ಟೆ ಯೋಜನೆಯ ಹೋರಾಟಕ್ಕೆ ರೈತಪರ ಸಂಘಟನೆಗಳು ಕೈ ಜೋಡಿಸಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಡಾಫೆ ಮಾತುಗಳಾಡಿದ್ದಾರೆ. ಮೊದಲಿಂದಲೂ ರೈತರ ಬಗ್ಗೆ ಅವರು ಲಘುವಾಗಿ ಹೇಳಿಕೆ ನೀಡುತ್ತಿದ್ದಾರೆ. ಅಂತಹವರು ಈ ರಾಜ್ಯದ ಉಪ ಮುಖ್ಯಮಂತ್ರಿಯಾಗಿರುವುದು ನಮ್ಮ ದುರ್ದೈವ’ ಎಂದು ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮಹಿಳೆಯರಾದ ಇಂದ್ರಾಣಿ, ನಾಗಮ್ಮ, ದಿವ್ಯಾ, ರೇಣುಕಾ, ಶಶಿಕಲಾ, ಪದ್ಮಾ, ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ, ಹನಿಯಂಬಾಡಿ ನಾಗರಾಜು, ದರಸಗುಪ್ಪೆ ಗ್ರಾ.ಪಂ. ಮಾಜಿ ಅಧ್ಯಕ್ಷ ರವಿ ಲಕ್ಷ್ಮಣ, ಹೊಸ ಉಂಡವಾಡಿ ಮಹದೇವು, ಕೆಂಪೇಗೌಡ, ಚಂದಗಾಲು ಶಿವಣ್ಣ, ಕಿರಂಗೂರು ಮಹದೇವು, ಬಲ್ಲೇನಹಳ್ಳಿ ಮಂಜುನಾಥ್, ಶ್ರೀಧರ್, ಹೊಸಹಳ್ಳಿ ಸ್ವಾಮಿ, ರವಿ, ದರಸಗುಪ್ಪೆ ಸುರೇಶ್, ಚನ್ನೇಗೌಡ, ರಾಮಕೃಷ್ಣ, ಕಡತನಾಳು ಬಾಬು, ಕೆ.ಶೆಟ್ಟಹಳ್ಳಿ ಮಹಲಿಂಗು, ಪುರುಷೋತ್ತಮ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.