ಮಂಗಳವಾರ, ಮಾರ್ಚ್ 21, 2023
28 °C
4ರಿಂದ 5 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ

ನಲ್ಲಿ ಬಳಿ ಬಿಂದಿಗೆ ಸಾಲು

ಬಿ.ಎ.ಮಧುಕುಮಾರ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಹೋಬಳಿಯ ಬೆಸಗರಹಳ್ಳಿ, ತಗ್ಗಹಳ್ಳಿ, ಕೋಣಸಾಲೆ, ಗೂಳೂರುದೊಡ್ಡಿ, ಮಾರಸಿಂಗನಹಳ್ಳಿ, ಬೆಳತೂರು, ಹೊಸಗಾವಿ ಸೇರಿದಂತೆ ಹಲವು ಗ್ರಾಮಗಳಲ್ಲಿ 4ರಿಂದ 5 ದಿನಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಕೆಲವು ಗ್ರಾಮಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ಚಿಕ್ಕೋನಹಳ್ಳಿ ಮತ್ತು ಅಣೆದೊಡ್ಡಿ ಗ್ರಾಮಗಳ ಪ್ರತಿ ಮನೆಗೆ ಕೊಪ್ಪ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ವತಿಯಿಂದ 20 ಲೀಟರ್‌ ಕ್ಯಾನ್‌ ಮೂಲಕ ಶುದ್ಧ ಕುಡಿಯುವ ಪೂರೈಸಲಾಗುತ್ತಿದೆ. ಬೆಸಗರಹಳ್ಳಿ, ಗೊಲ್ಲರದೊಡ್ಡಿ, ಹುರುಗಲವಾಡಿ, ಗೂಳೂರುದೊಡ್ಡಿ ಸೇರಿದಂತೆ ಅಲ್ಲಲ್ಲಿ ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದೆ. 4-5 ದಿನಗಳಿಗೆ ಕೊಳಾಯಿ ಮೂಲಕ ನೀರು ಬಿಡುವುದರಿಂದ ಸಾರ್ವಜನಿಕ ನಲ್ಲಿಗಳ ಬಳಿ ಮಹಿಳೆಯರು ನೀರು ಪಡೆಯಲು ಹರಸಾಹಸ ಪಡುವಂತಾಗಿದೆ.

ಚೋಟ್ಟನಹಳ್ಳಿ, ಕೊಪ್ಪ, ಕೀಳಘಟ್ಟ, ಹೊಸಗಾವಿ, ಗೊಲ್ಲರದೊಡ್ಡಿ, ಬಿದರಕೋಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ನೆಪಮಾತ್ರಕ್ಕೆ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ ಯಾವುದೇ ಪ್ರಯೋಜವಿಲ್ಲ. ಸಕಾಲಕ್ಕೆ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಆಗಾಗ ಯಂತ್ರಗಳು ಕೆಟ್ಟುಹೋಗುತ್ತವೆ. ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ನಾಗರಿಕರು ದೂರುತ್ತಾರೆ.

ಗೊಲ್ಲರದೊಡ್ಡಿ ಗ್ರಾಮದ ಬಳಿ 2004 ರಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ₹1.70 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಹು ಗ್ರಾಮ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದೆ. ಇಲ್ಲಿನ ಪರಿಕರಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಣೆದೊಡ್ಡಿಯ ಶಿಂಷಾ ಅಣೆಯಿಂದ ನೀರು ತಂದು 7 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕಾರ್ಯ ಹಳ್ಳ ಹಿಡಿದಿದೆ. ಇದು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಕಂಡರೂ ಕಾಣದಂತಿದೆ. ಪೈಪ್‌ಲೈನ್‌ ತುಕ್ಕು ಹಿಡಿಯುತ್ತಿದೆ. ಸರ್ಕಾರದ ಹಣ ವ್ಯಯವಾಗಿದೆ. ಎಸ್.ಎಂ. ಕೃಷ್ಣ ಅವರು ಬಂದು ಘಟಕಕ್ಕೆ ಚಾಲನೆ ಕೊಟ್ಟ ದಿನ ಮಾತ್ರ ನೀರು ಬಂತು. ನಂತರ ಬಹು ಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಗ್ರಹಣ ಹಿಡಿಯಿತು ಎಂದು ಗೊಲ್ಲರದೊಡ್ಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪದ ಕೆರೆಯಿಂದ 48 ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಗೆ ಪ್ರಸ್ತುತ ₹28 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿ ಪ್ರಾರಂಭವಾಗಬೇಕಿದೆ. ಈ ಗ್ರಾಮಗಳಿಗೆ ನೀರು ದೊರೆತರೆ ನಾಗರಿಕರ ಬಹು ದಿನಗಳ ಕನಸು ನನಸಾಗಲಿದೆ.

‘ಅರ್ಧ ಗಂಟೆಗೆ ನೀರು ನಿಲ್ಲಿಸುತ್ತಾರೆ’

4-5 ದಿನಗಳಿಗೊಮ್ಮೆ ಕುಡಿಯಲು ನೀರು ಬೀಡುತ್ತಾರೆ. ನಲ್ಲಿಗಳಲ್ಲಿ ಸಣ್ಣದಾಗಿ ನೀರು ಬರುತ್ತದೆ. ಮೊದಲು 1 ಗಂಟೆಗೂ ಹೆಚ್ಚು ಕಾಲ ನೀರು ಬಿಡುತ್ತಿದ್ದರು. ಈಗ ಅರ್ಧ ಗಂಟೆಗೆ ನೀರು ನಿಲ್ಲಿಸಿ ಬಿಡುತ್ತಾರೆ. ದಿನ ಬಳಕೆಗೆ ನೀರು ಸಾಲುವುದಿಲ್ಲ. ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬೆಸಗರಹಳ್ಳಿ ಗ್ರಾಮದ ಇಲಿಯಾಜ್, ಎಂ. ಮೂಗೂರೇಗೌಡ, ಚಿಕ್ಕತಾಯಮ್ಮ, ಗಾಯತ್ರಿ ಅಳಲು ತೋಡಿಕೊಂಡರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು